Advertisement

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

07:53 PM Mar 29, 2024 | Team Udayavani |

ಹೊಸದಿಲ್ಲಿ: ಭಾರತ ವನಿತಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿ ಪೂಜಾ ವಸ್ತ್ರಾಕರ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಮತ್ತು ಇತರ ಬಿಜೆಪಿ ನಾಯಕರನ್ನು ಲೇವಡಿ ಮಾಡುವ ‘ವಸೂಲಿ ಟೈಟಾನ್ಸ್’ ಶೀರ್ಷಿಕೆಯ ಪೋಸ್ಟ್ ಅನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದು ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ. ಪರ ವಿರೋಧ ತೀವ್ರವಾದ ಬಳಿಕ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

Advertisement

ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿವೆ. ‘ಕೇಂದ್ರೀಯ ಏಜೆನ್ಸಿಗಳ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ದಂಧೆಯಲ್ಲಿ ಬಿಜೆಪಿ ತೊಡಗಿದೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಒಂದು ದಿನದ ನಂತರ ಪೋಸ್ಟ್‌ ಆಸಕ್ತಿದಾಯಕವಾಗಿ ಕಂಡು ಬಂದಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ನೆಟಿಜನ್‌ಗಳು ಸ್ಕ್ರೀನ್‌ಶಾಟ್‌ಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಕೆಲವರು ಪೋಸ್ಟ್ ಕಾಂಗ್ರೆಸ್‌ ಬೆಂಬಲಿಸಿ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಿದರು. ಹಲವಾರು ಈ ರೀತಿ ಪೋಸ್ಟ್ ಮಾಡಿರುವುದು ಪೂಜಾ ಅವರ ಕ್ರಿಕೆಟ್ ವೃತ್ತಿಜೀವನದ ಮೇಲೆ ಪರಿಣಾಮಗಳನ್ನು ಬೀರಬಹುದು ಎಂದು ಎಚ್ಚರಿಕೆ ನೀಡಿದರು.

ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ, “ಹಾಯ್, ನನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಆಕ್ಷೇಪಾರ್ಹ ಚಿತ್ರವನ್ನು ಪೋಸ್ಟ್ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಫೋನ್ ನನ್ನ ಕೈಯಲ್ಲಿಲ್ಲದ ಸಮಯದಲ್ಲಿ ಇದು ನಡೆದಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಅತ್ಯಂತ ಗೌರವ ನೀಡುತ್ತೇನೆ. ಇದರಿಂದ ಉಂಟಾದ ನೋವಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.” ಎಂದು ಪೂಜಾ ಪ್ರತಿಕ್ರಿಯೆ ನೀಡಿದ್ದಾರೆ.

ಪೂಜಾ ಅವರು ಪೋಸ್ಟ್ ಮಾಡಿದ ಚಿತ್ರವನ್ನು ಮೂಲತಃ ಹರಿಯಾಣ ಕಾಂಗ್ರೆಸ್ ಮಾಡಿದ್ದು ಅದನ್ನು ಪಕ್ಷ ಮಾರ್ಚ್ 28 ರಂದು ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿತ್ತು.

Advertisement

ಆಲ್ ರೌಂಡರ್ ಪೂಜಾ, ಬಲಗೈ ಮಧ್ಯಮ-ವೇಗದ ಬೌಲರ್ ಮತ್ತು ಬಲಗೈ ಬ್ಯಾಟಿಂಗ್ ಮಾಡುತ್ತಾರೆ. ಅವರು 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ ತಮ್ಮ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ್ದರು. ಪ್ರಸ್ತುತ ಮಧ್ಯಪ್ರದೇಶ ಪರವೂ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next