ಕೋಲ್ಕತ್ತಾ : ತನ್ನ ಪೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಏಪ್ರಿಲ್ 10 ರಂದು ಮತದಾನದ ವೇಳೆ ಕೋಚ್ ಬಿಹಾರ್ ನಲ್ಲಿ ನಡೆದ ಭದ್ರತಾ ಪಡೆಗಳ ಗುಂಡಿನ ದಾಳಿಗೆ ನಾಲ್ಕು ಜನರು ಸಾವನ್ನಪ್ಪಿದ್ದರು. ಅವರ ಮೃತದೇಹಗಳನ್ನಿಟ್ಟುಕೊಂಡು ಚುನಾವಣಾ ಜಾಥಾ ಕೈಗೊಳ್ಳುವಂತೆ ಸಿತಾಲ್‍ಕುಚಿ ವಿಧಾನ ಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಗೆ ಮಮತಾ ಸೂಚನೆ ನೀಡಿದ್ದರು ಎನ್ನುವ ಆಡಿಯೋ ಕ್ಲಿಪ್ ಶುಕ್ರವಾರ ( ಏಪ್ರಿಲ್ 16) ಬಿಜೆಪಿ ಬಿಡುಗಡೆ ಮಾಡಿದೆ. ಇದು ರಾಜಕೀಯ ವಲಯದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಕುರಿತು ಇಂದು ( ಏಪ್ರಿಲ್ 17) ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ದೀದಿ, ನನ್ನ ಮೊಬೈಲ್ ಫೋನ್ ಟ್ಯಾಪ್ ಮಾಡಲಾಗಿದೆ. ಈ ಕುರಿತು ಸಿಐಡಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಆಡಿಯೋ ಕ್ಲಿಪ್ ವಿಚಾರವಾಗಿ ನೇರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಮತಾ, ಅಭಿವೃದ್ಧಿ ಕಾರ್ಯದಲ್ಲಿ ನಮ್ಮ ಎದುರು ನಿಲ್ಲಲಾಗದೆ ಈ ರೀತಿಯ ಪಿತೂರಿ ನಡೆಸುತ್ತಿದೆ. ಪ್ರತಿದಿನದ ನಮ್ಮ ಮಾತುಕತೆಯನ್ನು ಬಿಜೆಪಿ ನಾಯಕರು ಕದ್ದಾಲಿಸುತ್ತಿದ್ದಾರೆ. ಅವರು ನಮ್ಮ ಪೋನ್ ಟ್ಯಾಪ್ ಮಾಡಿರುವುದು ಇದರಿಂದ ಗೊತ್ತಾಗುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಿಐಡಿ ತನಿಖೆಗೆ ಆದೇಶ ನೀಡುತ್ತದೆ. ಈ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ನನಗೆ ಗೊತ್ತಾಗಿದೆ. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ದೀದಿ ಎಚ್ಚರಿಸಿದ್ದಾರೆ.
ಪೋನ್ ಕದ್ದಾಲಿಕೆಯಲ್ಲಿ ಕೇಂದ್ರಿಯ ಪಡೆಗಳು ಕೂಡ ಶಾಮೀಲಾಗಿವೆ ಎಂದು ದೀದಿ ಆರೋಪಿಸಿದ್ದಾರೆ. ಹಾಗೂ ಸದ್ಯ ಬಿಡುಗಡೆಯಾಗಿರುವ ಆಡಿಯೋ ಕ್ಲಿಪ್ ಬೋಗಸ್ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.