ಬಳ್ಳಾರಿ: ಬಳ್ಳಾರಿ ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ನನ್ನ ವಿರೋಧವಿದೆ. ವೈಜ್ಞಾನಿಕವಾಗಿ ಸೂಕ್ತವಲ್ಲದ ವಿಜಯನಗರ ಜಿಲ್ಲೆಯನ್ನು ಯಾವ ಪುರುಷಾರ್ಥಕ್ಕಾಗಿ ಮಾಡಬೇಕು ಎಂದು ಮಾಜಿ ಸಚಿವ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ವಿಜಯನಗರ ಜಿಲ್ಲೆಗಾಗಿ ಕೇವಲ ಒಬ್ಬರು ಸೆ.18 ರಂದು ಮನವಿ ಸಲ್ಲಿಸಿದಾಗ ಕ್ಷಣ ಆತುರದಲ್ಲಿ ಸೆ.19 ರಂದು ಸಿಎಂ ಯಡಿಯೂರಪ್ಪ ವಿಜಯನಗರ ಜಿಲ್ಲೆ ಮಾಡಲು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಬಳ್ಳಾರಿ ಡಿಸಿಗೆ ಪತ್ರ ಬರೆದು, ಹೊಸ ಜಿಲ್ಲೆ ರಚನೆಗೆ ಮುಂದಾಗಿರುವುದು ಸರಿಯಲ್ಲ. ಆ ಸಮಯದಲ್ಲಿ ನಾವು ಬಿಜೆಪಿಯಿಂದ ಗೆದ್ದಿದ್ದಿವೋ ಇಲ್ಲವೋ ಅನಿಸಸುತ್ತಿದೆ. ಮುಖ್ಯಮಂತ್ರಿಗಳ ಮೇಲೆ ನಮಗೆ ಗೌರವವುದೆ. ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆದು ಚರ್ಚಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಆತುರದ ನಿರ್ಣಯದಿಂದ ಸದಾ ಶಾಂತವಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಹಡಗಲಿ, ಹಬೊ, ಹಳ್ಳಿ, ಕೊಟ್ಟೂರು, ಹರಪನಹಳ್ಳಿ ಜಿಲ್ಲೆ ಆಗಬೇಕೆಂದು ಹೋರಾಟ ನಡೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಗೊಂದಲದ ವಾರಾವರಣ ನಿರ್ಮಾಣವಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ವಿಶ್ವ ವಿಖ್ಯಾತ ಹಂಪಿ, ಟಿಬಿ ಡ್ಯಾಂ ನಮ್ಮ ಹೆಮ್ಮೆಎಂದ ಕರುಣಾಕರ ರೆಡ್ಡಿ, ಹೊಸಪೇಟೆ ಬಳ್ಳಾರಿಯಿಂದ ಕೇವಲ 60 ಕಿಮೀ ಇದೆ. ಹರಪನಹಳ್ಳಿ ಪಶ್ಚಿಮ ತಾಲೂಕುಗಳಿಗೆ ಹತ್ತಿರದಲ್ಲಿದೆ. ಬಳ್ಳಾರಿ ಜಿಲ್ಲೆಯನ್ನು ಅಖಂಡವಾಗಿ ಮುಂದುವರೆಸಬೇಕು. ಇಲ್ಲದಿದ್ದರೆ ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದರು.
ಯಡಿಯೂರಪ್ಪ ಸಿಎಂ ಆಗಬೇಕಾದರೇ ನಾವು ಸಹ ಬೆಂಬಲ ಕೊಟ್ಟಿದ್ದೇವೆ. ಬೆಳಗಾವಿ, ಕಲ್ಬುರ್ಗಿ, ವಿಜಯಪುರ ಜಿಲ್ಲೆಗಳಿಗೆ ರಾಜಧಾನಿ ದೂರವಾಗಲಿದೆ ಎಂದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ಮಾಡುತ್ತೀರಾ ? ಎಂದು ಪ್ರಶ್ನಿಸಿದ ರೆಡ್ಡಿ, ದಯವಿಟ್ಟು ಜಿಲ್ಲೆ ಒಡೆಯಬೇಡಿ, ನಾವು ಒಗ್ಗಟ್ಟಾಗಿ ಇರಲು ಬಿಡಿ ಎಂದರು. ಬಳ್ಳಾರಿ ಜಿಲ್ಲೆ ಒಡೆಯೊದನ್ನು ವಿರೋಧಿಸಿ ಬಳ್ಳಾರಿ ಬಂದ್ ಗೆ ನನ್ನ ಬೆಂಬಲ ಇದೆ ಎಂದರು.