ಇಸ್ಲಾಮಾಬಾದ್ : “ನನ್ನ ಹೆಸರು ಖಾನ್, ಇಮ್ರಾನ್ ಖಾನ್, ನಾನು ಭಯೋತ್ಪಾದಕನಲ್ಲ’ ಎಂದು ಪಾಕಿಸ್ಥಾನದ ವಿರೋಧ ಪಕ್ಷ ನಾಯಕ, ಮಾಜಿ ಕ್ರಿಕೆಟ್ ಪಟು, ಇಮ್ರಾನ್ ಖಾನ್ ಅವರು ನಿನ್ನೆ ಮಂಗಳವಾರ ಪಾಕ್ ಟಿವಿ ಕಟ್ಟಡದ ಮೇಲೆ 2014ರಲ್ಲಿ ನಡೆದಿದ್ದ ದಾಳಿ ಕೇಸಿನಲ್ಲಿ ಉಗ್ರ ನಿಗ್ರಹ ನ್ಯಾಯಾಲಯದಿಂದ (ಎಟಿಸಿ) ಜಾಮೀನು ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರಕಾರದ ವಿರುದ್ಧ ಕಿಡಿ ಕಾರಿದರು.
ಬೇಲ್ ಪಡೆದ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಇಮ್ರಾನ್ ಖಾನ್ ಅವರು ಬಾಲಿವುಡ್ ಚಿತ್ರ ನಟ ಶಾರುಖ್ ಖಾನ್ ಅವರ ಫೇಮಸ್ ಡಯಲಾಗನ್ನು ವ್ಯಂಗ್ಯದಿಂದ ಪುನರುಚ್ಚರಿಸಿದರು.
“ಮೈ ನೇಮ್ ಈಸ್ ಖಾನ್, ನಾನು ಭಯೋತ್ಪಾದಕನಲ್ಲ. ಆದರೆ ಸುಪ್ರೀಂ ಕೋರ್ಟ್ ನನ್ನನ್ನು ಸಾದಿಕ್ ಮತ್ತು ಅಮೀನ್ ಎಂದು ಕರೆಯಿತು; ಆ ಉಗ್ರ ಹೆಸರುಗಳ ಬಳಿಕ ನನ್ನ ಹೆಸರು ಬಂದಿತು’ ಎಂದು ಇಮ್ರಾನ್ ಸಿಟ್ಟು ಮತ್ತು ವ್ಯಂಗ್ಯದಿಂದ ಹೇಳಿದರು.
2014ರಲ್ಲಿ 104 ದಿನಗಳ ಸುದೀರ್ಘ ಕಾಲ ನಡೆದಿದ್ದ ಸರಕಾರಿ ವಿರೋಧಿ ಪ್ರತಿಭಟನೆಯ ವೇಳೆ ಹಿಂಸೆಯನ್ನು ಪ್ರಚೋದಿಸಿ ಪಿಟಿವಿ ಕಟ್ಟಡ ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವಂತೆ ಪ್ರೇರೇಪಿಸಿದ ಆರೋಪ ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ ಪಕ್ಷದ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್ ಅವರ ಮೇಲಿದೆ.
ಎಟಿಸಿ ನ್ಯಾಯಾಧೀಶ ಶಾರುಖ್ ಅರ್ಜುಮಂದ್ ಅವರು ಇಮ್ರಾನ್ ಖಾನ್ ಅವರಿಗೆ, ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಜಾಮೀನು ಮಂಜೂರು ಮಾಡಿದರು ಎಂದು ಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.