ಅಮ್ಮಾ ಎಂದಾಕ್ಷಣ ಕಣ್ಣಂಚಲ್ಲಿ ಪ್ರೀತಿ, ಮಮತೆ, ವಾತ್ಸಲ್ಯ ಎಲ್ಲವೂ ಒಂದು ಬಾರಿ ಚಿತ್ರಪಟದಂತೆ ಹಾದು ಹೋಗುತ್ತದೆ. ಆದರೆ ಇದೆಲ್ಲದರ ಹೊರತಾಗಿ ಅಮ್ಮಾ ಎಂದರೆ ಮಾಂಸದ ಮುದ್ದೆಗೆ ಜೀವವಿತ್ತವಳು, ಜೀವಕ್ಕೆ ಜನುಮನಿತ್ತವಳು. ಆ ಜೀವವು ಹೇಗೆ ಜೀವನ ನಡೆಸಬೇಕೆಂದು ದಾರಿ ತೋರಿದವಳು. ಬಿದ್ದಾಗ ಎದ್ದೇಳು ಕುಗ್ಗಬೇಡ ಮುನ್ನುಗ್ಗು ಎಂದು ಹೇಳಿದವಳು ಅಮ್ಮ. ನಾವು ಗೆದ್ದಾಗ ಖುಷಿ ಪಟ್ಟು ಬೆನ್ನು ತಟ್ಟಿ ಹಿಗ್ಗ ಬೇಡ ಎಂದು ಕಿವಿಮಾತು ಹೇಳಿದವಳು ನಮ್ಮಮ್ಮ. ಅಮ್ಮ ಎಂಬ ಪದವು ಎರಡಕ್ಷರದಿ ಅಡಗಿದೆ. ಆಕೆ ಪ್ರೀತಿ, ಆರೈಕೆ, ಸಹನೆ, ಮಮತೆ, ವಾತ್ಸಲ್ಯ ತೋರುವ ಕರುಣಾಮಯಿ.
ಪ್ರತಿ ಹೆಜ್ಜೆಯಲ್ಲೂ ನಮ್ಮ ಜತೆಗೆ ಇರುವವಳು ತಾಯಿ. ತಂದೆ ತಾಯಿಗೆ ಮಗಳಾಗಿ, ಗಂಡನಿಗೆ ಮಡದಿಯಾಗಿ, ಹಿರಿಯರಿಗೆ ಸೊಸೆಯಾಗಿ, ಮಕ್ಕಳಿಗೆ ತಾಯಿಯಾಗಿ ಹಸಿದು ಬಂದವರಿಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ. ನನಗೆ ನನ್ನ ಅಮ್ಮನೇ ಸ್ಫೂರ್ತಿ. ಎಷ್ಟೇ ಕಷ್ಟವಿದ್ದರು ಸದಾ ನಗುತ್ತಾ ನಗಿಸುವ ಸುಂದರಿ, ಪ್ರತಿ ಸಲ ಎಡವಿ ಬಿದ್ದಾಗ ಧೈರ್ಯ ತುಂಬಿ ನನ್ನ ಹೆಜ್ಜೆಯನ್ನು ಹಿಂಬಾಲಿಸಿ ಬರುವವಳು, ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಕ್ಕೆ ಉದಾಹರಣೆಯೊಂದಿಗೆ ವಿವರಿಸಿ ಅರ್ಥೈಸಿದಾಕೆ, ಪ್ರಪಂಚದ ಅರಿವೇ ಇಲ್ಲದ ನಮಗೆ ಬಾಲ್ಯದಲ್ಲಿ ಬುದ್ದಿ ಹೇಳಿ ತಿದ್ದಿದಾಕೆ, ಸೋತು ಸುಸ್ತಾಗಿ ಕೂತಾಗ ಶಕ್ತಿ ನೀಡಿ ಹುರಿದುಂಬಿಸಿದವಳು.
ಪುಟ್ಟ ಪ್ರಪಂಚದಲ್ಲಿ ಪಟ್ಟದರಸಿಯಾಗಿ ಮೆರೆ ಸುವವಳು ನಮ್ಮಮ್ಮ. ಎಷ್ಟೇ ಬಂಧುಗಳಿದ್ದರೂ ತಾಯಿಗಿಂತ ಹತ್ತಿರವಾದ ಬಂಧುಗಳು ಯಾರು ಇರಲು ಸಾಧ್ಯವಿಲ್ಲ. ಇತರೆ ಲ್ಲರಿಗಿಂತ ತಾಯಿಯು ಮಕ್ಕಳ ಕಷ್ಟ ಸುಖಗಳನ್ನು ಹೆಚ್ಚು ತಿಳಿದಿರುತ್ತಾಳೆ. ಸೃಷ್ಟಿಯಲ್ಲಿ ಪ್ರತಿ ಯೊಂದು ಜೀವಿಗೂ ಅಮ್ಮನೇ ಎಲ್ಲ. ಅಮ್ಮನ ಪ್ರೀತಿಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನಿಗಿಂತ ಹೆಚ್ಚಿನ ಭದ್ರತೆ ಇಲ್ಲ. ಅಮ್ಮನು ತೋರಿಸುವ ಈ ಪ್ರೀತಿ ಪ್ರಪಂಚದಲ್ಲಿ ಯಾರು ತೋರಿಸಲಾರರು, ಅದಕ್ಕೆ ಹೇಳ್ಳೋದು ಹೆತ್ತಮ್ಮನಿಗಿಂತ ಹಿತರಿಲ್ಲ ಅಂತ. ಆದರಿಂದ ಹೆತ್ತಮ್ಮನ ಋಣವನ್ನು ಯಾವತ್ತೂ ಮರೆಯಬೇಡಿ.
-ಪ್ರೀತಿ ಬಿ.,
ಸ.ಪ್ರ. ದರ್ಜೆ ಮಹಿಳಾ ಕಾಲೇಜು ಪುತ್ತೂರು