Advertisement
ಡಿಗ್ರಿ ಮುಗಿಸಿ ಎಂಬಿಎಗೆ ಸೇರಿದ್ದೆ. ಆಗ ಬೆಂಗಳೂರೇ ಹೊಸದು. ಜನದಟ್ಟಣೆ , ವಾಹನಗಳ ಭರಾಟೆ ಎರಡೇ ದಿನಕ್ಕೆ ಬೇಸರ ತರಿಸಿತ್ತು. ಕೊಂಚ ಮುಜುಗರದಿಂದಲೇ ಮೊದಲ ದಿನದ ಅಕೌಂಟ್ಸ್ ಕ್ಲಾಸ್‌ಗೆ ಹಾಜರಾಗಿದ್ದೆ. ಸೀನಿಯರ್, ಹೊಸದಾಗಿ ಸೇರಿದ ನಮಗೆ ವೆಲ್‌ಕಮ್ ಪಾರ್ಟಿ ಅರೆಂಜ್ ಮಾಡಿದ್ದರು. ಅಂದು, ಕೈಯಲ್ಲಿ ಹೂಗುತ್ಛಗಳನ್ನು ಹಿಡಿದು ಸಾಗುತ್ತಿದ್ದ ನೀನು ಅಚಾನಕ್ಕಾಗಿ ಡಿಕ್ಕಿ ಹೊಡೆದು, ಸಾರಿ ಹೇಳಿ, ನನ್ನನ್ನು ನೋಡದೆ ಮುಂದೆ ಸಾಗಿದ್ದೆ. ಅದಾದ ಬಳಿಕ ಅದೆಷ್ಟು ಸಲ ನಿನ್ನೊಟ್ಟಿಗೆ ಮಾತನಾಡಬೇಕೆಂದುಕೊಂಡರೂ, ನೀನು ಎದುರಾಗುತ್ತಲೇ ಅದ್ಯಾವುದೋ ಅವ್ಯಕ್ತ ಭಯ ಆವರಿಸಿ ಹೃದಯದ ಬಡಿತದ ಹಿಡಿತ ತಪ್ಪುತ್ತಿತ್ತು. ಕೈಕಾಲುಗಳು ಕಂಪಿಸುತ್ತಿದ್ದವು. ನಿನ್ನನ್ನು ನೋಡಬೇಕೆಂಬ ಏಕೈಕ ಆಸೆಯಿಂದ, ನಮ್ಮ ಕ್ಲಾಸ್ ರೂಮ್ ನಿಂದ ನಿನ್ನ ಕ್ಲಾಸ್ ಮುಂದೆಯೇ ಇಟ್ಟಿದ್ದ ನೀರು ಕುಡಿಯಲೆಂದು ಪದೇ ಪದೇ ಬಂದು ನಿನ್ನ ಬಿಂಬವನ್ನೇ ಕಣ್ತುಂಬಿಕೊಳ್ಳುತ್ತಿದ್ದೆ. ನಿನ್ನನ್ನೇ ನೋಡುತ್ತಾ ಇಹದ ಪರಿವೆಯೇ ಇಲ್ಲದೆ ನಿಂತಲ್ಲೇ ನಿಂತವಳನ್ನು, ಬೆರಗುಗಣ್ಣಿನಿಂದ ನೋಡುತ್ತಿದ್ದವರು ಎಚ್ಚರಿಸಿ ಹೋಗುತ್ತಿದ್ದರು. ಅತಿರೇಕದ ಉನ್ಮಾದಕ್ಕೆ ನಾಚಿ ಕೆನ್ನೆಗಳು ರಂಗೇರಿ, ಹುಚ್ಚಿಯಂತೆ ಒಬ್ಬಳೇ ನಗುತ್ತಾ ಮತ್ತೆ ನಿನ್ನ ಕನವರಿಕೆಯಲ್ಲೇ ಕಳೆದು ಹೋಗುತ್ತಿದ್ದೆ.
Related Articles
Advertisement
ಸೌಮ್ಯಶ್ರೀ ಎ.ಎಸ್.