Advertisement

ನನ್ನ ಅಮ್ಮನ ಸೀರೆ

08:21 PM May 11, 2019 | mahesh |

ನನ್ನ ಅಮ್ಮನ ಸೀರೆ
ಮರದ ಪೆಟ್ಟಿಗೆಯೊಳಗೆ
ಮಲ್ಲು ಬಿಳಿ ಸುತ್ತಲ್ಲಿ ಜಿರಲೆ ಗುಳಿಗೆ

Advertisement

ಮಡಿಕೆ ಮಡಿಕೆಯ ಶಿಸ್ತು
ಅಂಗೈಯ ಒತ್ತು
ತಲೆದಿಂಬಿನಡಿ ಇಡಿಯ ಇಸ್ತ್ರಿ ಪ್ರಪಂಚ
ಕರ್ಪೂರ ಪುಡಿಕೆ ಅಗರು ಲಾವಂಚ
ಅವಳದೇ ಪರಿಮಳ ನನ್ನ ಅಮ್ಮನ ಸೀರೆ
ಜೊತೆಗೆ ಕೈಬಳೆ ಸದ್ದು ಸೇರಿದಂತೆ
ಸೊಂಟ ಸಿಕ್ಕಿಸಿ ದುಡಿವ ಹುರುಪಿನಂತೆ

ದೊಡ್ಡ ಸೆರಗಿನ ತುಂಬ ಅಡ್ಡಡ್ಡ ರೇಖೆಗಳು
ದುಷ್ಟತನ ಹತ್ತಿರವೂ ಸುಳಿಯದಂತೆ
ನೆಟ್ಟ ಬದುಕಿನ ಕಟ್ಟೆ ಒಡೆಯದಂತೆ
ತಂಟೆ ಮಕ್ಕಳ ಎದುರು ಬೆತ್ತದಂತೆ

ನನ್ನ ಅಮ್ಮನ ಸೀರೆ
ನೆರಿಗೆ ಅಂಬಡೆ ಗಂಟು
ಖಾಲಿಯಾಗದ ಗೂಢ ಪದಾರ್ಥ ಕೋಶ
ಮಧುರ ಸೀರೆಯ ಹಸಿರು
ಹಳದಿ ಅಂಚಿನ ಹೂವು
ಅರಸಿ ಅಮ್ಮನ ಹಾಗೇ ಇದ್ದಿರಬಹುದು ಬಹುಶಃ

ನನ್ನ ಅಮ್ಮನ ಸೀರೆ
ಉಟ್ಟಷ್ಟೂ ಉಂಟು
ಎಷ್ಟುದ್ದ ಉದ್ದ ಉದ್ದ!
ಒಮ್ಮೆ ಅಳೆಯಲು ಹೋಗಿ
ಒಮ್ಮೆ ಉಡಲೂ ಹೋಗಿ
ನಾನಾದೆ‌ ಗಿಡ್ಡ ಗಿಡ್ಡ

Advertisement

ನನ್ನ ಅಮ್ಮನ ಸೀರೆ ಒಡಲೆಲ್ಲ ನಕ್ಷತ್ರ
ಮೋಡದಲ್ಲಿ ಬಿಸಿಲಿನಲಿ
ನೋಯದಂತಡಗಿ
ಮಾಯದಂತೆ ಕಾದು ಸ್ವಂತತನವ
ಕತ್ತಲಲ್ಲಿಯೇ ಹೊಳೆವ ಜೀವ

ನನ್ನ ಅಮ್ಮನ ಸೀರೆ
ವಾಯ್ಲು-ಮಗ್ಗದ ನೂಲು
ಪಟ್ಟೆ ಸೀರೆಗೆ ಪಟ್ಟ ಪುಟ್ಟ ಕನಸು
ನನಸಾಗುವಾಗ ಅಪ್ಪಯ್ಯನಿಲ್ಲ
ಉಟ್ಟರೂ ಈಗಿಲ್ಲ ಉಡುವ ಮನಸು
ಕಳೆದು ಹೋಯೆ¤ನ್ನುವಳು ಉಡುವ ವಯಸೂ

ನನ್ನ ಅಮ್ಮನ ಹಳೆಯ
ಉಡುಪಿ ನೇಯ್ಗೆಯ ಸೀರೆ
ನೋಡುತಿದೆ ನೋಡು ನೇಲೆಯ ಮೇಲೆ ಕುಳಿತು!
ಹಾಸಿಕೊಳ್ಳುವೆ ಅದನು
ಹೊದೆದು ಕೊಳ್ಳುವೆ ಅದನು
‘ಅಮ್ಮ!’ ಎನ್ನುವ ಸುಖದ
ನಿಟ್ಟುಸಿರ ಕರೆದು
ಸವೆದೂ ಸವೆಯದ ಆ
ಪದವ ನೆನೆದು
ಪದವ ನೆನೆದು

ವೈದೇಹಿ

Advertisement

Udayavani is now on Telegram. Click here to join our channel and stay updated with the latest news.

Next