ಪ್ರೀತಿಯ ಹುಡುಗಿ,
ಎದೆಯ ಗೂಡ ಕಡಲಲ್ಲಿ, ಮೊಹಬತ್‌ನ ಮೇಘ ಹೊತ್ತು ತಂದ ತಂಗಾಳಿ ತೂಕದ ಹುಡುಗಿಯೇ.. ಭೂಮಿಯ ಹಾಯಿ ದೋಣಿಯಲ್ಲಿ, ಚಂದ್ರಮನ ದೀಪ ಹಚ್ಚಿ ಕುಳಿತು ಏಕಾಂತವನ್ನು ಆಸ್ವಾದಿಸುತಿದ್ದ ಪರಮ ಸುಖೀ ನಾನು.. ಅದ್ಯಾವ ಘಳಿಗೆಯಲಿ ನನ್ನದೆಯ ಹೊಸ್ತಿಲು ತುಳಿದು ಮನಸೊಳಗೆ ಬಂದುಬಿಟ್ಟೆ ನೀನು?
ನನ್ನ ಕಂಗಳಲ್ಲಿ ಪ್ರೀತಿಯ ಲಾಟೀನು ಹೊತ್ತಿಸಿದ ರೂಪಸಿಯೆ, ನಿನ್ನ ಕಣ್ಣೋಟದ ಆಲಿಂಗನಕೆ ನನ್ನ ಹೃದಯದಲ್ಲಿ ಸಾವಿರ ತಂತಿಗಳು ಸ್ವರ ಮೀಟಿವೆ. ನಿನ್ನ ಸ್ಪರ್ಶಿಸುವ ಸಮ್ಮತಿಗೆ ಹೃದಯದ ಕೋಣೆಯಲ್ಲಿ ಬೆಚ್ಚಗಿನ ಭಾವನೆಗಳ ಉಗಮವಾಗುತ್ತಿದೆ. ನಿನ್ನ ನಿದಿರೆಗೆ ನನ್ನ ಮಡಿಲ ತೊಟ್ಟಲಲಿ ಜೋಗುಳ ಗೀತೆಯ ಹಾಡಲು ಹೃದಯ ತವಕಿಸುತ್ತಿದೆ.
ನಿನ್ನ ಮಾತಿನ ಕಡಗೋಲಿಗೆ ನನ್ನ ಎದೆಯಲ್ಲಿ ಒಲವ ಮಂಥನ, ಉದಯಿಸಿದ ಪ್ರೀತಿಗೆ ಸಾವಿರ ಬಣ್ಣ. ಇಳಿ ಸಂಜೆಯ ಮಬ್ಬಿನಲೂ ನಿನ್ನ ಕೆನ್ನೆಯ ಮೇಲೆ ನಾಚಿಕೆಯ ರಂಗು. ಹಿಡಿದಿಟ್ಟ ಬಿಸಿಯ ಭಾವನೆಗಳಿಗೆ ಈ ಮನವೀಗ ಒಲವ ಕುಲುಮೆ. ನೀ ಎದೆಗೆ ಒರಗಿದಾಗ ಸೋಕಿದ ಕೂದಲಿನ ಘಮ, ಕಣ್ಣುಚ್ಚದೆ ನಿನ್ನೊಂದಿಗೆ ಕಳೆದ ರಾತ್ರಿಗೆ ಈಗ ಪ್ರತಿ ರಾತ್ರಿಗಳ ಕಂದಾಯ. ಇಬ್ಬರೇ ಇದ್ದ ಏಕಾಂತದಲೂ ಸಂಯಮ ತಪ್ಪದ ನನ್ನ ಪ್ರೀತಿಗೆ ಬೆಲೆ ಕಟ್ಟಲಾಗದ ಗರ್ವ..
ಸಮಯ ಸರಿದು ಬಾನಲ್ಲೇ ಕರಗಿ ಹೋದ ಚಂದ್ರಮನ ಮೇಲಾಣೆ. ನೀನು ನನ್ನ ಹೃದಯ ಹೊಕ್ಕ ಸುಂದರ ಸ್ಪಪ್ನ. ಹಾಲಲ್ಲಿ ಅದ್ದಿ ತೆಗೆದ ಬೊಂಬೆಗೆ ಸೂರ್ಯನ ಹೊಂಬಿಸಿಲ ಕೆಂಪ ಸೋಕಿಸಿ, ಶ್ವೇತವರ್ಣದ ಹತ್ತಿಯ ಸುತ್ತಿ ಚರ್ಮದ ಹೊದಿಕೆ ಹೊದಿಸಿದಂತಿದೆ ನಿನ್ನ ಮೈ ಬಣ್ಣ.
ನಾ ಹರವಿ ಕೂತ ಎಲ್ಲ ಕನಸುಗಳಲಿ ನಿನ್ನ ಪಾಲುದಾರಿಕೆ ಇದೆ. ಒಲವ ಅಕ್ಷರ ತೀಡಿದ ಬೆರಳ ಇನ್ನೊಮ್ಮೆ ಸೋಕುವ ಬಯಕೆ. ಎದೆಯ ಕೋಟೆಯಲಿ ನಿನ್ಹೆಸರ ಸ್ಮಾರಕ. ಕಪ್ಪು ಬಿಳುಪು ಕಂಗಳಲ್ಲಿ ನಿನ್ನ ನೆನಪ ಚಿತ್ತಾರ. ಹೃದಯದ ಬೀದಿಗಳಲ್ಲಿ ಪ್ರೇಮೋತ್ಸವದ ತಯಾರಿ. ಏಕಾಂತಕ್ಕೂ ನಿನ್ನ ಹೆಸರ ಧ್ಯಾನ.
ಸಾಕು, ಈ ದೂರ ಸಾಕಿನ್ನು. ನನ್ನ ಪ್ರೇಮ ದೀವಟಿಗೆಗೆ ನೀ ಒಲವ ತೈಲವಾಗು. ಎದೆಯ ಗೂಡಲ್ಲಿ ಪ್ರೇಮ ಜ್ಯೋತಿಯಾಗು. ನನ್ನವಳಾಗು. ನೆರಳಾಗಿ ಜೊತೆಗಿರುವೆ ನಾ ಎಂದೆಂದಿಗೂ…
– ಗಣೇಶ್, ಶಿವಮೊಗ್ಗ