Advertisement

ಎಲ್ಲರನ್ನೂ ಖುಷಿಯಾಗಿಡುವುದೇ ನನ್ನ ಗುರಿ

01:31 PM Dec 01, 2017 | |

ಬೆಂಗಳೂರು: ಪ್ರಪಂಚದಲ್ಲಿ ಎಲ್ಲರನ್ನೂ ಖುಷಿಯಾಗಿಡಬೇಕು ಎನ್ನುವುದು ನನ್ನ ಗುರಿ. ಅದಕ್ಕಾಗಿ ಫೇಮಸ್‌ ಆಗಬೇಕು ಎಂದು ಸಿನಿಮಾ ರಂಗಕ್ಕೆ ಕಾಲಿಟ್ಟೆ. ಆದರೆ, ನನ್ನ ಬದುಕು ಉಪ್ಪಿಟ್ಟು ತರಹ ಆಗಿದೆ ಎಂದು “ಕೆಪಿಕೆಪಿ’ ಹೆಸರಲ್ಲಿ ಹೊಸ ರಾಜಕೀಯ ಪಕ್ಷ ಹುಟ್ಟಿಹಾಕಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.

Advertisement

ರಾಜ್ಯೋತ್ಸವದ ಅಂಗವಾಗಿ ಜಯನಗರ ಜೈನ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ನುಡಿ-ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ರಾಜಕೀಯ ಮತ್ತು ಪ್ರಜಾಕೀಯ ಅನ್ನೋದು ಇರಬಾರದು. ವಿಧಾನಸೌಧ, ವಿಕಾಸಸೌಧ, ಮಕ್ಕಳ ಶಾಲೆಯಾಗಬೇಕು ಎಂದರು.

ರಾಜರ ಆಳ್ವಿಕೆಯಿಂದ ಹೊರಬಂದು ದಶಕಗಳು ಕಳೆದಿವೆ. ಸತ್‌ ಪ್ರಜೆಗಳೇ ಏಳಿ, ಎದ್ದೇಳಿ, ಪ್ರಜಾಕೀಯ ಆ್ಯಪ್‌ ಬಿಡುಗಡೆ ಆಗಿದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಿರಿ. ನಾಯಕರು, ನಾಯಕರಲ್ಲ. ಅವರು ಕಾರ್ಮಿಕರು. ರಾಜಕೀಯ ವ್ಯಾಪಾರ, ಕೆಸರೆರಚಾಟ ನಮಗೆ ಬೇಡ. ರಾಜಕೀಯ ಬದಲಾವಣೆ ಬರಬೇಕು, ಅದನ್ನು ತರವು ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಉಪೇಂದ್ರ ಕರೆ ನೀಡಿದರು.

ನಾನಂತೂ ಬದಲಾವಣೆ ತರಲು ಹೊರಟಿದ್ದೇನೆ. ನಾನೂ ಸತ್ತರೂ ಏನಾದರೊಂದು ಸಾಧಿಸಿದ್ದೇನೆ ಎಂಬ ತೃಪ್ತಿ ನನಗಿರುತ್ತದೆ ಎಂದು ಉಪೇಂದ್ರ ಇದೇ ವೇಳೆ ಮಾರ್ಮಿಕವಾಗಿ ನುಡಿದರು. ಯಾವುದೇ ಗುರಿ ಇಟ್ಟುಕೊಂಡರೆ ಅದು ನಮಗಾಗಿ ಅಲ್ಲ, ಸಮಾಜಕ್ಕಾಗಿ ಇಟ್ಟುಕೊಳ್ಳಬೇಕು.

ಇಡೀ ಪ್ರಪಂಚವನ್ನೇ ಸರಿ ಮಾಡುತ್ತೇವೆ ಎನ್ನುವಂತಹ ಗುರಿ ಇರಬೇಕು. ಪ್ರಪಂಚದಲ್ಲಿ ಎಲ್ಲರನ್ನೂ ಖುಷಿಪಡಿಸುವ ಗುರಿ ನನ್ನದು. ಅದಕ್ಕಾಗಿ ಹೆಸರು, ಖ್ಯಾತಿ ಗಳಿಸಲು ಸಿನಿಮಾಕ್ಕೆ ಬಂದೆ. ಆದರೆ, ನನ್ನ ಬದುಕು ಉಪ್ಪಿಟ್ಟು ಆಗಿದೆ ಎಂದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಎಸ್‌. ಭಗವಾನ್‌, ಸಾಹಿತಿ ಭೈರಮಂಗಲ ರಾಮೇಗೌಡ ಮತ್ತಿತರರು ಇದ್ದರು. 

Advertisement

ಟ್ವೀಟ್‌…
ಜನಜಂಗುಳಿಯ ಬೆಂಗಳೂರು ವಿಧಾನಸೌಧದ ಆಡಳಿತವನ್ನು ಬೆಳಗಾವಿ ಸುವರ್ಣವಿಧಾನಸೌಧಕ್ಕೆ ಸಂಪೂರ್ಣ ವರ್ಗಾವಣೆ ಮಾಡಿದರೆ ಹೇಗೆ? ಹೇಗೂ ಜನಪ್ರತಿನಿಧಿಗಳು ಅವರವರ ಕ್ಷೇತ್ರದಲ್ಲೇ ಕೆಲಸ ಮಾಡಬೇಕಲ್ಲವೇ? ನಿಮ್ಮ ಅಭಿಪ್ರಾಯ ತಿಳಿಸಿ.
-ಉಪೇಂದ್ರ, ಕೆಪಿಜೆಪಿ ಪಕ್ಷದ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next