Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಮಿಥುನ್‌ ರೈ

11:36 PM Apr 14, 2019 | Team Udayavani |

ಕಡಬ: ಕಾಂಗ್ರೆಸ್‌ನ ಅಭಿವೃದ್ಧಿಪರ ಹಾಗೂ ಜಾತ್ಯತೀತ ನೆಲೆಗಟ್ಟಿನ ಸಂಸ್ಕಾರ ನಮಗೆ ಬಲುದೊಡ್ಡ ಶಕ್ತಿಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಿಥುನ್‌ ರೈ ನುಡಿದರು.

Advertisement

ಅವರು ಕಡಬ ಪೇಟೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಾನು ಅಪ್ಪಟ ಹಿಂದೂ ಸಂಸ್ಕೃತಿಯಲ್ಲಿ ಬೆಳೆದವನು. ಆದರೆ ಅದು ಬಿಜೆಪಿಯವರ ಕೋಮುವಾದಿ ಹಿಂದುತ್ವವಲ್ಲ. ಜಿಲ್ಲೆಯ ಶಾಂತಿಯನ್ನು ಕಾಪಾಡುವುದರೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ. ಬಿಜೆಪಿಯವರು ಹಿಂದುತ್ವವನ್ನು ಮುಂದಿಟ್ಟು ಕೊಂಡು ಜನರ ಮಧ್ಯೆ ಬಿರುಕು ಹುಟ್ಟಿಸಿ ಜಾತಿ ರಾಜಕೀಯ ಮಾಡಿ ಓಟನ್ನು ವಿಭಜಿಸಿ ಗೆಲ್ಲುವ ತಂತ್ರ ಹೆಣೆದಿದ್ದಾರೆ. ಆದರೆ ಅದು ಈ ಬಾರಿ ಫಲ ನೀಡುವುದಿಲ್ಲ ಎಂದರು.

ಬಿಜೆಪಿ ಸೊತ್ತಲ್ಲ
ಕೇಸರಿ ಶಾಲು ಬಿಜೆಪಿಯವರ ಸೊತ್ತಲ್ಲ. ನಾವು ಕೇಸರಿ ಧರಿಸಿದರೆ ಮುಸ್ಲಿಮರಿಗೆ, ಕ್ರೈಸ್ತರಿಗೆ ಹಾಗೂ ಹಿಂದೂ ಸಮುದಾಯಕ್ಕೆ ಸಮಸ್ಯೆ ಇಲ್ಲ. ಆದರೆ ನಮ್ಮ ಹೆಗಲ ಮೇಲೆ ಕೇಸರಿ ಕಂಡರೆ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲು ಅವರಿಗೇಕೆ ಉರಿ ಎಂದು ಮಿಥುನ್‌ ರೈ ಪ್ರಶ್ನಿಸಿದರು. ನಾನು ಗೆದ್ದರೆ ಕೋಡಿಂಬಾಳ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುವುದು. ಕಡಬ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ತೀವ್ರವಾಗಿ ಕಾಡುತ್ತಿರುವ ವಿದ್ಯುತ್‌ ಸಮಸ್ಯೆಯನ್ನು ನೀಗಿಸುವುದರೊಂದಿಗೆ ಯುವ ಸಮುದಾಯಕ್ಕೆ ಹೆಚ್ಚಿನ ಉದ್ಯೋಗಾವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಎಂಎಲ್‌ಸಿ ಹರೀಶ್‌ ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಪರಿಷತ್‌ ಸದಸ್ಯ ಎಲ್‌.ಎಸ್‌. ಭೋಜೇ ಗೌಡ, ಕಣ್ಣೂರು ಮಾಜಿ ಸಂಸದ ಅಬ್ದುಲ್ಲಾ ಕುಟ್ಟಿ ಮಾತನಾಡಿ ಮಿಥುನ್‌ ರೈ ಪರ ಮತ ಯಾಚಿಸಿದರು. ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಮಾಧವ ಗೌಡ ಜಾಕೆ, ಕೆಪಿಸಿಸಿ ಸದಸ್ಯ ಡಾ| ರಘು, ತಾ.ಪಂ. ಸದಸ್ಯ ಫಝಲ್‌ ಕೋಡಿಂಬಾಳ, ಜಿ.ಪಂ. ಮಾಜಿ ಸದಸ್ಯ ಭರತ್‌ ಮುಂಡೋಡಿ, ಕೆ.ಎಸ್‌. ಸಾಹುಲ್‌ ಹಮೀದ್‌ ತಂಙಳ್‌ ಮರ್ದಾಳ, ಡಿಸಿಸಿ ಕಾರ್ಯದರ್ಶಿ ಎಚ್‌.ಕೆ. ಇಲ್ಯಾಸ್‌, ಕಡಬ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಅಂಚನ್‌, ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್‌ ಗುಂಡ್ಯ, ಜೆಡಿಎಸ್‌ ಯುವ ಮುಂದಾಳು ಅಕ್ಷಿತ್‌ ಸುವರ್ಣ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುಧೀರ್‌ ದೇವಾಡಿಗ, ಕಾಂಗ್ರೆಸ್‌ ಪ್ರಮುಖರಾದ ರೋಯಿ ಅಬ್ರಹಾಂ, ವಿಜಯಕುಮಾರ್‌ ಸೊರಕೆ, ಸತೀಶ್‌ ಕೆಡೆಂಜಿ, ವಿಜಯಕುಮಾರ್‌ ರೈ ಕರ್ಮಾಯಿ, ಸೈಮನ್‌ ಸಿ.ಜೆ. ಉಪಸ್ಥಿತರಿದ್ದರು. ಕಾಂಗ್ರೆಸ್‌ ಅಲ್ಪಸಂಖ್ಯಾಕ ವಿಭಾಗದ ರಾಜ್ಯ ಸಂಯೋಜಕ ಎ.ಸಿ. ಜಯರಾಜ್‌ ಸ್ವಾಗತಿಸಿ, ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಪ್ರಸ್ತಾವನೆಗೈದರು. ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಣೇಶ್‌ ಗೌಡ ಕೈಕುರೆ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next