ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ಮುಖ್ಯವಾಗಿದ್ದು, ಅದೇ ನನ್ನ ಗುರಿ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಒಬ್ಬ ಪೊಲಿಟಿಕಲ್ ಕಿಲ್ಲರ್ ಆಗಿದ್ದು, ಅಧಿಕಾರಕ್ಕಾಗಿ ಯಾರನ್ನ ಬೇಕಾದರೂ ಮುಗಿಸಲು ಸುಪಾರಿ ಕೊಡುತ್ತಾರೆಂದು ದೂರಿದರು.
ಈ ಹಿಂದೆ ನಡೆದ ನಂಜನಗೂಡು ಉಪಚುನಾವಣೆಯಲ್ಲಿ 44 ಸಾವಿರ ಮತ ಪಡೆಯಲು 44 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಲ್ಲದೆ ಉಪ ಚುನಾವಣೆ ಗೆಲ್ಲಲು ಅವರ ಮನೆ ಕೆಲಸಗಾರ ಮಹದೇವಪ್ಪ ಸಹಾಯ ಮಾಡಿದ್ದು, ಅವರಿಬ್ಬರೂ ಸೇರಿ ಜೆಡಿಎಸ್ ಸಹಾಯದಿಂದ ತನ್ನನ್ನು ಮುಗಿಸಿದರು ಎಂದರು.
ಪುಸ್ತಕ ಬರೆಯುವೆ: ನಂಜನಗೂಡಿನ ಚುನಾವಣೆಯಲ್ಲಿ ಏನಾಯಿತು ಎಂಬುದನ್ನು ಪುಸ್ತಕ ಬರೆದು ಹೇಳುತ್ತೇನೆ. ಸಿದ್ದರಾಮಯ್ಯ ಅವರು ಇದೀಗ ಚಾಮುಂಡೇಶ್ವರಿಗೆ ಬರುವುದಾಗಿ ನಾಟಕವಾಡುತ್ತಿದ್ದು, ಅವರನ್ನ ಸೋಲಿಸೋದೇ ತನ್ನ ಗುರಿಯಾಗಿದೆ. ಇದೇ ವಿಚಾರವನ್ನು ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಎಚ್.ವಿಶ್ವನಾಥ್‌ರೊಂದಿಗೆ ಚರ್ಚೆ ಮಾಡಲಾಗಿದೆ ಎಂದರು.
ಬುದ್ಧಿ ಕಲಿಸೋದೆ ಮುಖ್ಯ: ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲಲಿ ಎಂದು ಬಯಸುವ ವ್ಯಕ್ತಿಗಳು ನಾವಲ್ಲ. ಅಲ್ಲದೆ ಸಿದ್ದರಾಮಯ್ಯ ಗೆಲ್ಲಲಿ ಎಂದು ಹೇಳ್ಳೋಕೆ ನಾವೇನು ಧರ್ಮಗುರುಗಳಾ? ಎಂದು ಪ್ರಶ್ನಿಸಿದ ಅವರು, ನಾವು ರಾಜಕಾರಣಿಗಳೇ ಮತ್ತು ಅವರು ರಾಜಕಾರಣಿ ಅಷ್ಟೇ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಹಳೆ ಮಿತ್ರರು ಒಂದಾಗಿರೋದು ಮುಖ್ಯವಲ್ಲ. ಬದಲಿಗೆ ಸಿದ್ದರಾಮಯ್ಯಗೆ ಬುದ್ಧಿ ಕಲಿಸುವುದೇ ಮುಖ್ಯವಾಗಿದೆ ಎಂದು ಹೇಳಿದರು.
ನಮ್ಮನ್ನು ಬಳಸಿಕೊಂಡಿದ್ದು ಸತ್ಯ: ತಾನು ಕಾಂಗ್ರೆಸ್‌ನಿಂದ ಹೊರಬಂದಿದ್ದು ವಿಷಯಾಧಾರಿತ ಉದ್ದೇಶದಿಂದ. ಎಚ್.ವಿಶ್ವನಾಥ್ ಅವರು ಆಂತರಿಕ ಕಲಹದಿಂದ ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ. ಆದರೆ, ಸಿದ್ದರಾಮಯ್ಯ ನಮ್ಮಿಬ್ಬರನ್ನು ಬಳಸಿಕೊಂಡಿದ್ದು ಸತ್ಯ. ಈ ಎಲ್ಲಾ ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖೀಸಿದ್ದೇನೆ ಎಂದರು.
3ನೇ ಕಣ್ಣು ಎಲ್ಲಿ ಬಿಡ್ತಾರೋ?: ಸಿದ್ದರಾಮಯ್ಯ ಒಬ್ಬ ಅನ್‌ಗೆಟ್‌ಫುಲ್ ಸಿಎಂ ಆಗಿದ್ದು, ಚಾಮುಂಡೇಶ್ವರಿ ಒಂದು ಕಣ್ಣು, ವರುಣಾ ಒಂದು ಕಣ್ಣು ಎನ್ನುತ್ತಿರುವ ಅವರು 3ನೇ ಕಣ್ಣನ್ನು ಎಲ್ಲಿ ಬಿಡುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ ಅವರು, ಎರಡು ಉಪ ಚುನಾವಣೆ ಗೆಲುವು ಸಿದ್ದರಾಮಯ್ಯ ಅವರಿಗೆ ಕಾನ್ಫಿಡೆನ್ಸ್ ತಂದಿದೆ.
ಆದರೆ ಉಪ ಚುನಾವಣೆಗಳನ್ನು ಗೆದ್ದ ಮಾರ್ಗ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಅಲ್ಲದೆ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಯಾವ ಮುಖ್ಯಮಂತ್ರಿಯನ್ನು ತಾನು ನೋಡಿಲ್ಲ. ಸದ್ಯಕ್ಕೆ ತಾನು ಫ್ರೀಯಾಗಿದ್ದು, ಸಿದ್ದರಾಮಯ್ಯಗೆ ಬುದ್ಧಿ ಕಲಿಸದೆ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.