Advertisement
ಹೈದರಾಬಾದ್ ಕರ್ನಾಟಕ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಕಲ್ಯಾಣ ಕರ್ನಾಟಕ ಎಂಬ ಹೆಸರನ್ನು ಬದಲಾಯಿಸುವ ಮೂಲಕ ನಮ್ಮ ಸರ್ಕಾರ ಆ ಭಾಗದ ಜನರು ದಾಸ್ಯದ ಮನಸ್ಥಿತಿಯಿಂದ ಹೊರ ಬರುವಂತೆ ಮಾಡುವ ಮೊದಲ ಹೆಜ್ಜೆ ಇಟ್ಟಿದೆ. ಹೈದರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯ ಭಾಗವೆಂದು ಹೇಳುವ ಮೂಲಕ ನಮ್ಮದೇ ಬಸವಾದಿ ಶರಣರು ಸಮಾನತೆಗಾಗಿ, ಜನರ ಕಲ್ಯಾಣಕ್ಕಾಗಿ ನಡೆದಾಡಿದ ಬೀಡು ನಮ್ಮದೆನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ನಾನು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದೇನೆ.
ಈ ಭಾಗದ ಹೆಸರು ಬದಲಾಯಿಸಲು ಪ್ರೇರಣೆಯಾಗಿದೆ. ಒಂದು ಪ್ರದೇಶದ ಅಭಿವೃದ್ಧಿ ಎನ್ನುವುದು ಕೇವಲ ಭೌತಿಕವಾಗಿ ಮಾಡಿದರೆ ಸಾಲದು. ಆ ಭಾಗದ ಜನರ ಮನಸ್ಥಿತಿಯೂ ಬದಲಾಗಬೇಕು. ಅವರ ಮನಸಲ್ಲಿಯೂ ಸಕಾರಾತ್ಮಕ ಭಾವನೆ ಮೂಡಬೇಕು. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅಂತಹ ಸಕಾರಾತ್ಮಕ ಭಾವನೆ ಮೂಡಿಸುವ ಮೊದಲ ಹೆಜ್ಜೆಯೇ ಕಲ್ಯಾಣ ಕರ್ನಾಟಕ ಎಂಬ ನಾಮಕರಣ ಮಾಡುವುದರ ಹಿಂದಿರುವ ಪ್ರೇರಣೆ.
Related Articles
Advertisement
ಅಮೃತ ಮಹೋತ್ಸವ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ನಿರ್ಧಾರದಿಂದ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರುವ ಮೂಲಕ ಶರಣರ ನಾಡು ಮೊದಲ ಸ್ವಾತಂತ್ರ್ಯದ ಅನುಭವ ಪಡೆಯಿತು. ಆದರೆ, ಆ ನಂತರ ಈ ಭಾಗ ನಿರಂತರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲಿಯೂ ನಿರ್ಲಕ್ಷಿಸಲ್ಪಡುತ್ತಲೇ ಬಂದಿತು. ಅದರ ಪರಿಣಾಮ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವಂತಾಯಿತು.
ಹಿಂದುಳಿದ ಪ್ರದೇಶಎಂಬ ಭಾವನೆಯನ್ನು ಜನರ ಮನಸ್ಸಿನಿಂದ ವಿಮೋಚನೆ ಮಾಡುವುದೇ ನಮ್ಮ ಸಂಕಲ್ಪವಾಗಿದ್ದು, ಅದಕ್ಕಾಗಿ ನಾನು ಈಗಾಗಲೇ ಕಲ್ಯಾಣ ಕರ್ನಾಟಕ ಎಂಬ ನಾಮಕರಣದೊಂದಿಗೆ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನೀಡುವ ವಿಶೇಷ ಅನುದಾನವನ್ನು ದ್ವಿಗುಣಗೊಳಿಸಿದ್ದೇನೆ. 2022-23ನೇ ಸಾಲಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ. 3000 ಕೋಟಿ ನಿಗದಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14 ರಿಂದ 2021-22ನೇ ಸಾಲಿನ ವರೆಗೆ ರೂ. 8878.33 ಕೋಟಿ ಒದಗಿಸಿದ್ದು, ಈ ಪೈಕಿ ರೂ. 7,328.80 ಕೋಟಿ ಬಿಡುಗಡೆ ಮಾಡಲಾಗಿದ್ದು, 6,565.46 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕಾಗಿಯೇ ವಿಶೇಷವಾದ ಅಮೃತ ಬಜೆಟ್ ಘೋಷಣೆ ಮಾಡಲಾಗಿದ್ದು, ಈ ಭಾಗದ ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ 1500 ಕೋಟಿ ಹಾಗೂ ಮೈಕ್ರೋ ಯೋಜನೆಗಳಿಗೆ 1500 ಕೋಟಿ ರೂ. ಮೀಸಲಿಡಲಾಗಿದ್ದು, ಇದು ಈ ಭಾಗದಲ್ಲಿ ಹೊಸ ಹೊಸ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಈ ಭಾಗದ ಅಭಿವೃದ್ಧಿಯಾಗಲು ಪ್ರಮುಖವಾಗಿ ರಸ್ತೆ ಹಾಗೂ ವಿಮಾನಯಾನ ಸಂಪರ್ಕದ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದ್ದು, ಈಗಾಗಲೇ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಯಚೂರು ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಕೊಪ್ಪಳ, ಬಳ್ಳಾರಿಯಲ್ಲಿವಿಮಾನ ನಿಲ್ದಾಣ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಆ ಮೂಲಕ ಈ ಭಾಗ ರಾಜ್ಯದ ಇತರ ಭಾಗಗಳೊಂದಿಗೆ ನೇರ ಸಂಪರ್ಕ ಹೊಂದುವುದರ ಜೊತೆಗೆ ದೇಶದ ಇತರ ರಾಜ್ಯಗಳು ಮತ್ತು ಅಂತಾರಾಷ್ಟಿಥಯ ಮಟ್ಟಕ್ಕೂ ನೇರ ಸಂಪರ್ಕ ಹೊಂದಲು ಬೇಕಿರುವ ಅಗತ್ಯ ಭದ್ರ ಬುನಾದಿಯನ್ನು ಹಾಕಲಾಗುತ್ತಿದೆ. ರಾಜ್ಯ ಸರ್ಕಾರ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆರಿಸುವ ತೀರ್ಮಾನಕೈಗೊಂಡಿದ್ದು ಈ ಯೋಜನೆ ಅಡಿಯಲ್ಲಿ 71 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಲ್ಯಾಣ ಕರ್ನಾಟ ಭಾಗಗಳಾಗಿವೆ. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿರುವ ಪ್ರದೇಶವಾಗಿದ್ದು, ಈ ಭಾಗದ ಬಹುತೇಕ ತಾಲೂಕು ಪ್ರದೇಶಗಳಲ್ಲಿಯೂ ಕೋಟೆಗಳಿವೆ. ಕೋಟೆಗಳ ಸಮಗ್ರ ಅಭಿವೃದ್ದಿ ಮಾಡುವ
ನಿಟ್ಟಿನಲ್ಲಿ ನಮ್ಮ ಪ್ರಯತ್ನ ಆರಂಭವಾಗಿದ್ದು, ಕಲಬುರಗಿ ಹಾಗೂ ಬೀದರ್ ಕೋಟೆಗಳ ಅಭಿವೃದ್ಧಿಯ ಜೊತೆಗೆ ಈ ಭಾಗದಲ್ಲಿರುವ ಪ್ರಮುಖ ಕೋಟೆಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ ಕಲ್ಯಾಣ ಕರ್ನಾಟಕದ ಕೋಟೆಗಳ ಪ್ರವಾಸೋದ್ಯಮದ ಕಾರಿರ್ಡಾ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ನಾನು ವಿಶೇಷ ಗಮನ ಹರಿಸಿದ್ದು, ಈಗಾಗಲೇ 40 ಕೋಟಿ ರೂ. ಹಣ ನೀಡಲಾಗಿದೆ. ಈ ಬೆಟ್ಟ ವಿಶ್ವ ಭೂಪುಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ನನ್ನ ಮಹದಾಸೆಯಾಗಿದೆ. ವಿಶ್ವ ಪ್ರಸಿದ್ದ ಹಂಪಿ, ಆನೆಗುಂದಿ, ಬೀದರ್‌ನ ಗುರುನಾನಕ ಝೀರಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅನ್ನದಾತರ ಬದುಕು ಹಸನು ಮಾಡುವ ಸಂಕಲ್ಪ: ಕಲ್ಯಾಣ ಕರ್ನಾಟಕ ಪ್ರದೇಶ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ತೊಗರಿಯ ಕಣಜ ಎಂದೇ ಕರೆಯಲ್ಪಡುವ ಕಲಬುರಗಿ, ಭತ್ತದ ಕಣಜ ಗಂಗಾವತಿ, ಸಿರಿಧಾನ್ಯದ ನಾಡು ಎಂಬ ಬಿರುದು ಪಡೆದಿರುವ ಈ ಭಾಗದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ರೈತ ಶಕ್ತಿ ಯೋಜನೆ ಕಲ್ಯಾಣ ಕರ್ನಾಟಕ ಭಾಗದ ಸುಮಾರು 20 ಲಕ್ಷ ರೈತರಿಗೆ ನೇರವಾಗಿ ತಲುಪುತ್ತಿರುವುದು ಒಂದು ದಾಖಲೆ. ಅಲ್ಲದೇ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ಈ ಭಾಗದ 1.85 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವ ಮೂಲಕ ಅನ್ನದಾತನ ಮಕ್ಕಳೂ ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೇರಲು ಪ್ರೇರಣೆಯಾಗಿದೆ. ನಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಯ ಕಾರ್ಯಕ್ರಮದಲ್ಲಿ ಸ್ವತಃ ನಾನು ಮಾರ್ಚ್ ತಿಂಗಳಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಪಾಲ್ಗೊಂಡು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದು ನನ್ನ ಮನಸ್ಸಿಗೆ ಸಮಾಧಾನ ತಂದಿರುವ ಕಾರ್ಯಗಳಲ್ಲಿ ಒಂದು. ಅನುಭವ ಮಂಟಪ ಸೃಷ್ಟಿ: ಬಸವೇಶ್ವರರ ಕರ್ಮ ಭೂಮಿ ಬಸವ ಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ ನಿರ್ಮಾಣ ಮಾಡುವುದು ನಮ್ಮ ಪ್ರಥಮ ಆದ್ಯತೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಈಗಾಗಲೇ 612 ಕೋಟಿ ರೂ. ವೆಚ್ಚದ ಪರಿಷ್ಕ¢ತ ಅಂದಾಜಿಗೆ ಅನುಮೋದನೆ ನೀಡಲಾಗಿದ್ದು, ಸುಮಾರು 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವ ದರ್ಜೆಯ ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ನಾನೇ ವಿಶೇಷ ಮುತುವರ್ಜಿಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ವಿಜಯನಗರ ಜಿಲ್ಲೆ ಸ್ಥಾಪನೆ : ಕಲ್ಯಾಣ ಕರ್ನಾಟಕ ಭಾಗದ ವಿಶ್ವ ಪ್ರಸಿದ್ದ ಪ್ರದೇಶವಾಗಿರುವ ವಿಜಯನಗರ ಸಾಮ್ರಜ್ಯದ ಗತವೈಭವ ಸಾರುವ ಹಂಪಿಯನ್ನೊಳಗೊಂಡ ವಿಜಯನಗರ ಜಿಲ್ಲೆಯ ಸ್ಥಾಪನೆ ಮಾಡಲಾಗಿದ್ದು, ಅಭಿವೃದ್ಧಿ ದೃಷ್ಠಿಯಿಂದ ಹಿಂದುಳಿದ ಪ್ರದೇಶಗಳ ತಾಲೂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯುವಂತೆ ಮಾಡಲಾಗುತ್ತಿದೆ. ಮುಂಚೂಣಿ ರಾಜ್ಯ ನನ್ನ ಕನಸು
ನಮ್ಮ ನೆಚ್ಚಿನ ನಾಯಕರು ಹಾಗೂ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸಮಗ್ರ ಕರ್ನಾಟಕವನ್ನು ಎಲ್ಲ ರಂಗದಲ್ಲಿಯೂ ಮುಂಚೂಣಿ ರಾಜ್ಯವನ್ನಾಗಿಸುವುದು ನನ್ನ ಕನಸು. ಆ ಕನಸು ನನಸಾಗಬೇಕಾದರೆ, ಸಮಗ್ರ ಕರ್ನಾಟಕ ಏಕರೂಪದಲ್ಲಿ ಅಭಿವೃದ್ಧಿಯಾದರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ನಾನು ದೃಢವಾದ ಹೆಜ್ಜೆಯನಿಟ್ಟಿದ್ದು, ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ರಾಜ್ಯದ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತೇನೆ. ಇದು ನನ್ನ ಕನಸು ಹಾಗೂ ಬದ್ದತೆ. ಮಾನವ ಸಂಪನ್ಮೂಲ ಸದ್ಬಳಕೆ
ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂದರೆ ಆ ಭಾಗದ ಮಾನವ ಸಂಪನ್ಮೂಲ ಸದ್ಬಳಕೆಯಾಗಬೇಕು ಎನ್ನುವುದು ನನ್ನ ಭಾವನೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಮುತ್ಸದ್ದಿ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಸ್ಥಾಪನೆ ಮಾಡಿದ್ದು, ಈ ಸಂಘದ ಮೂಲಕ ಕೃಷಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೌನ ಕ್ರಾಂತಿಯಾಗುತ್ತಿದ್ದು, ಇದರ ಪರಿಣಾಮ ಈ ಭಾಗದ ಯುವಕರು ಹಾಗೂ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಲಾಗಿದೆ. *ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ