Advertisement

ನನ್ನ ಹೋರಾಟ ರಾಜ್ಯದಲ್ಲೂಮುಂದುವರಿಯಲಿದೆ: ಚೇತನ್‌

10:04 AM Apr 30, 2018 | Team Udayavani |

ದಾವಣಗೆರೆ: ನಾನು 23 ವರ್ಷದವರೆಗೆ ಅಮೆರಿಕದಲ್ಲಿ ನೆಲೆಸಿದವನು. ಕಾಯಕ ತತ್ವ ಹಾಗೂ ಶೋಷಿತರ ಪರ ದನಿ ಎತ್ತುವುದಕ್ಕೆ ಅಲ್ಲೂ ಅವಕಾಶ ಇಲ್ಲ. ನಾನು ಈ ಕಾರ್ಯ ಮಾಡಿದ್ದಕ್ಕೆ ನನ್ನನ್ನು ಅಮೆರಿಕ ವಿರೋಧಿ ಎಂದು ಪಟ್ಟ ಕಟ್ಟಿ ಓಡಿಸಿದರು ಎಂದು ಚಲನಚಿತ್ರ ನಟ, ಆ ದಿನಗಳು ಖ್ಯಾತಿಯ ಚೇತನ್‌ ಹೇಳಿದರು.

Advertisement

ಭಾನುವಾರ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ನಾಡು ಕರ್ನಾಟಕಕ್ಕೆ ಬಂದು ಮತ್ತೆ ಈ ಹೋರಾಟಕ್ಕೆ ಅಣಿಯಾಗಿದ್ದೇನೆ. ಇಲ್ಲಿಯ ಜನ ನನ್ನನ್ನು ಒಪ್ಪುತ್ತಾರೆ. ನನ್ನ ವಿಷಯಗಳಿಗೆ ಮನ್ನಣೆ ನೀಡುತ್ತಾರೆ ಎಂಬ ಕಾರಣಕ್ಕೆ ಇಲ್ಲೂ ಸಹ ಅದೇ ಹೋರಾಟ ಆರಂಭಿಸಿದ್ದೇನೆ. ಈಗಾಗಲೇ ಕೆಲ ವಿಷಯಗಳಲ್ಲಿ ನಾವು ಜಯ ಸಾಧಿಸಿದ್ದೇವೆ ಎಂದರು.

ಬಿಜೆಪಿಗರು ನನ್ನನ್ನು ನಕ್ಸಲೈಟ್‌ ತರಹ ನೋಡುತ್ತಿದ್ದಾರೆ. ಕೆಲ ಹೋರಾಟಗಳಲ್ಲಿ ಭಾಗಿಯಾಗಿದ್ದಕ್ಕೆ ನಕ್ಸ್‌ಲೈಟ್‌ ಪಟ್ಟ ಕಟ್ಟಿದ್ದಾರೆ. ಆದರೆ ನಾನು ಹಿಂದೇಟು ಹಾಕಲ್ಲ. ಮುಂದೆ ರಾಜಕೀಯ ಪ್ರವೇಶ ಕುರಿತು ಸಹ ಚಿಂತಿಸುತ್ತಿದ್ದೇನೆ ಎಂದರು.

ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವುದು ಅನಿವಾರ್ಯ. ಈ ಹಿಂದೆಯೇ ಅಂದರೆ 1871ರಲ್ಲಿ ಇಂಗ್ಲಿಷರ ಆಳ್ವಿಕೆ ಕಾಲದಲ್ಲಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ಇತ್ತು. ಇದನ್ನೇ ಆಧರಿಸಿ, ಈ ಹಿಂದೆ ವೀರಶೈವ ಲಿಂಗಾಯತ ಹೆಸರಲ್ಲಿ ಸ್ವತಂತ್ರ ಧರ್ಮ ಸ್ಥಾನಮಾನ ಪಡೆಯುವಯತ್ನ ನಡೆಯಿತು. ಆದರೆ, ಶೈವ ಎಂಬ ಪದ ಬಂದ ಹಿನ್ನೆಲೆಯಲ್ಲಿ ಸ್ವತಂತ್ರ ಧರ್ಮ ಸ್ಥಾನಮಾನ ಸಿಗಲಿಲ್ಲ. ಈ ಬಾರಿ ಬಸವಣ್ಣನವರ ಶರಣ ತತ್ವ ಆಧಾರದಡಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ದೊರಕಿಸುವ ಯತ್ನ ನಡೆದಿದೆ. ಇದಕ್ಕೆ ಕೇಂದ್ರ ಸರ್ಕಾರ ಬೆಂಬಲಿಸಬೇಕು. ನಾಗಮೋಹನ್‌ ದಾಸ್‌ ವರದಿ ಅಂಗೀಕರಿಸಿ, ಸ್ವತಂತ್ರ ಧರ್ಮ ಸ್ಥಾನಮಾನ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ನಾವು ದೇವದಾಸಿ ಪದ್ಧತಿ ವಿರುದ್ಧ ಹೋರಾಟ ನಡೆಸಲು ಅಣಿಯಾಗಿದ್ದೇವೆ. ಸರ್ಕಾರ ಈಗಾಗಲೇ ಈ ಪದ್ಧತಿ ರದ್ದು ಮಾಡಿದ್ದರೂ ಸಹ ಆಚರಣೆಯಲ್ಲಿದೆ. ಇದರ ವಿರುದ್ಧ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇದೇ ಕಾರಣಕ್ಕೆ ನಾನು ಶನಿವಾರ ಮುತ್ತುಕಟ್ಟು ಆಚರಣೆ ಮಾಡಲಾಗುವ ಸ್ಥಳ ಉಚ್ಚಂಗಿದುರ್ಗಕ್ಕೆ ಹೋಗಿ ಬಂದೆ ಎಂದು ತಿಳಿಸಿದರು.

Advertisement

ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಬಡದಾಳ್‌, ಖಜಾಂಚಿ ಎ.ಎಲ್‌. ತಾರಾನಾಥ, ಹಿರಿಯ ಪತ್ರಕರ್ತರಾದ ಬಕ್ಕೇಶ ನಾಗನೂರು, ಸುಭಾಷ್‌ ಬಣಗಾರ್‌ ಸೇರಿದಂತೆ ವಿವಿಧ ಪತ್ರಿಕೆ, ಟಿವಿ ಮಾಧ್ಯಮದ ಪ್ರತಿನಿಧಿಗಳು ಸಂವಾದದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next