ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ವಿಶ್ವಾಸಮತ ಕೋರಿ ಸುದೀರ್ಘ ಮಾತನಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾದೇಶವನ್ನು ಧಿಕ್ಕರಿಸಿ ಅವಕಾಶವಾದಿ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ ಎಂಬುದು ನಾಡಿನ ಜನರ ಅಭಿಪ್ರಾಯ.
ನಮ್ಮ ಕಾಂಗ್ರೆಸ್‌ನ ಸ್ನೇಹಿತರಿಗಿಂತ ಹತ್ತಿರದಿಂದ ಕುಮಾರಸ್ವಾಮಿ ಅವರನ್ನು ನಾನು ಬಲ್ಲೆ. 20 ತಿಂಗಳ ಕಾಲ ಅವರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇನೆ. ಆಗ ಅವರು ಮುಖ್ಯಮಂತ್ರಿ, ನಾನುಉಪಮುಖ್ಯಮಂತ್ರಿ. ಸರಿಯೋ ತಪ್ಪೋ, ಎಲ್ಲದಕ್ಕೂ ಸಹಕಾರ ಕೊಟ್ಟೆ. ಆದರೆ, ಅವರು ವಿಶ್ವಾಸದ್ರೋಹ ಮಾಡಿದರು.
ಕುಮಾರಸ್ವಾಮಿ ಜತೆ ನಾನು ಸರ್ಕಾರ ರಚಿಸಿದ್ದು ಅತಿ ದೊಡ್ಡ ಅಪರಾಧ. ಆವತ್ತು ನಾನು ಅವರೊಂದಿಗೆ ಕೈಜೋಡಿಸದೇ ಇದ್ದಿದ್ದರೆ,ಕುಮಾರಸ್ವಾಮಿಯವರೇ ನೀವು ಎಲ್ಲಿ ಇರುತ್ತಿದ್ದೀರಿ? ಆದರೆ, ನಂಬಿಕೆ ದ್ರೋಹ, ವಿಶ್ವಾಸ್ರೋಹ ಮಾಡಿದಿರಿ. ಧರ್ಮಸಿಂಗ್‌ಗೆ ಕೈಕೊಟ್ಟು ನನ್ನೊಂದಿಗೆ ಬಂದಿರಿ. ಅದೇ ನೋವಿನಲ್ಲಿ ಅವರು ತೀರಿಕೊಂಡರು. ಇದನ್ನು ನಾಡಿನ ಜನ ಗಮನಿಸುತ್ತಿದ್ದಾರೆ.
ಸಿದ್ದರಾಮಯ್ಯನವರೇ ನಿಮ್ಮ ವಿರುದ್ಧವೇ ಜಿ.ಟಿ.ದೇವೇಗೌಡರನ್ನು ನಿಲ್ಲಿಸಿ, ನಿಮ್ಮನ್ನು ಸೋಲಿಸಿ ಅವಮಾನ ಮಾಡಿದರು. ಜಮೀರ್,ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ.. ಹೀಗೆ ನಂಬಿದವರೆಲ್ಲರಿಗೂ ಕೈಕೊಟ್ಟರು. ಕುರ್ಚಿಗಾಗಿ ಏನು ಬೇಕಾದರೂ ಮಾಡೋಕೆ ಸಿದಟಛಿ ಎಂಬುದನ್ನು ಸಾಬೀತುಪಡಿಸಿದರು. ಶಿವಕುಮಾರ್ ಅವರೆ, ಮಾಡಬಾರದ ಅಪರಾಧ ಮಾಡಿ ಈ ನಾಡಿನ ಜನರ ವಿಶ್ವಾಸ, ನಂಬಿಕೆ ದ್ರೋಹ ಮಾಡಿದಂತಹ ವರನ್ನು ಸಿಎಂ ಮಾಡಿದ್ದಕ್ಕೆ ನೀವು ಪಶ್ಚಾತ್ತಾಪ ಪಡುತ್ತೀರಿ. ಇದನ್ನು ಕಾಲವೇ ಹೇಳುತ್ತದೆ.
ಸಿದ್ದರಾಮಯ್ಯನವರೇ, ಚುನಾವಣೆ ವೇಳೆ ರಾಹುಲ್ ಗಾಂಧಿ ಬಂದಾಗ ಎಷ್ಟೊಂದು ಗೌರವ ಇತ್ತು ನಿಮಗೆ. ರಾಹುಲ್ ಮಾತನಾಡಿದ ಮೇಲೆ ಮಾತನಾಡಿದಿರಿ. ಆ ಜನ ಬೆಂಬಲ, ವಿಶ್ವಾಸ ನಿಮ್ಮ ಮೇಲಿತ್ತು. ಯಾವುದೋ ಕಾರಣಕ್ಕೆ ಕಾಂಗ್ರೆಸ್ ಗೆದ್ದ ಸ್ಥಾನಗಳ ಸಂಖ್ಯೆ ಕಡಿಮೆಯಾಗಿರಬಹುದು.ಆದರೆ, ಮುಂದಿನ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ರಾಜ್ಯದ ಕಾಂಗ್ರೆಸ್ ನಾಯಕರನ್ನು ಬಿಟ್ಟು ಕುಮಾರಸ್ವಾಮಿಯವರನ್ನು ದೆಹಲಿಗೆ ಕರೆಸುತ್ತಾರೆ.
ರಾಷ್ಟ್ರೀಯ ಪಕ್ಷ ಈ ರೀತಿ ನಡೆದುಕೊಳ್ಳಬಹುದೇ? ಶಿವಕುಮಾರ್ ಅವರೇ ಇದರ ನೇತೃತ್ವ ವಹಿಸಿದ ಖಳನಾಯಕ ನೀವಾಗಿದ್ದೀರಿ. ನಿಮ್ಮ ಬಗ್ಗೆ ಗೌರವ ಇದೆ. ಈಗ ನಾನು ತೀರ್ಮಾನ ಮಾಡಿದ್ದೇನೆ ಇನ್ನು ಮುಂದೆ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹೋರಾಟ ಏನಿದ್ದರೂ ಅಧಿಕಾರ ದಾಹದಿಂದ ಕುಣಿದು ಕುಪ್ಪಳಿಸುತ್ತಿರುವ ಅಪ್ಪ ಮಕ್ಕಳ ವಿರುದಟಛಿವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ.
ಕುಮಾರಸ್ವಾಮಿಯವರೆ, ಸಮ್ಮಿಶ್ರ ಸರ್ಕಾರ ನಿಮ್ಮಪ್ಪಂಗೆ ಬೇಜಾರಾಗಿತ್ತು ಅಂದರೆ ನಮ್ಮ ಕೈ ಹಿಡಿದುಕೊಂಡು ಏಕೆ ಬಂದಿರಿ? 20 ತಿಂಗಳು ಏಕೆ ಕೈಜೋಡಿಸಿದಿರಿ? ನಿಮ್ಮ ತಂದೆ ದೇವೇಗೌಡರು ಬರೆದಿರೋ ನೂರು ಪತ್ರ ತೋರಿಸಲೇನು? ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದಾಗ ಪ್ರತಿ ಕ್ಷಣ ಕಣ್ಣೀರು ಹಾಕುವಂತೆ ಮಾಡಿದರು. ರೈತರಿಗೆ ಸಹಕಾರ ಬ್ಯಾಂಕ್‌ಗಳ ಮೂಲಕ ಶೇ. 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡಲು ಮುಂದಾದಾಗ ವಿರೋಧಿಸಿದರು. ಮನೆಗೆ ಕರೆಸಿಕೊಂಡು ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದರು. ರೈತರಿಗೆ ಉಚಿತ ವಿದ್ಯುತ್ ನೀಡುವಾಗಲೂ ವಿರೋಧಿಸಿದರು. ಇದೆಲ್ಲಾ ಸುಳ್ಳಾ ಸ್ವಾಮಿ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.