ಹೆಣ್ಣು ಮಕ್ಕಳಿಗೆ ತಂದೆಯೆಂದರೆ ಹೆಚ್ಚು ಪ್ರೀತಿ, ಗಂಡು ಮಕ್ಕಳಿಗೆ ತಾಯಿಯೆಂದರೆ ಹೆಚ್ಚು ಪ್ರೀತಿ ಎಂಬುದು ವಾಡಿಕೆಯ ಮಾತು. ಆದರೆ ಇದು ನನ್ನ ವಿಚಾರದಲ್ಲಿ ಸುಳ್ಳಾಗಿದೆ. ನನಗೆ ನನ್ನ ತಾಯಿಗಿಂತ ನನ್ನ ತಂದೆಯ ಮೇಲೆಯೇ ಒಂದಿಂಚು ಒಲವು ಜಾಸ್ತಿ. ನನ್ನ ತಂದೆಗೂ ಅಷ್ಟೇ ನನ್ನ ಅಕ್ಕನಲ್ಲಿಲ್ಲದ ವಿಶೇಷ ಪ್ರೀತಿ, ಕಾಳಜಿ ನನ್ನ ಮೇಲೆ.
ಸುಮಾರು 20 ವರ್ಷಗಳ ಹಿಂದೆ ಮಹಾರಾಷ್ಟ್ರದ ಹೊಟೇಲ್ ಒಂದರಲ್ಲಿ ಕೆಲಸ ಮಾಡುತಿದ್ದ ಅಪ್ಪ, ನನ್ನ ಅಕ್ಕ ಹುಟ್ಟಿದಾಗ ಕೆಲಸದ ನೆಪ ಹೇಳಿ ಊರಿಗೆ ಬಾರದೇ ಇದ್ದು, ನಾನು ಹುಟ್ಟಿದಾಗ ಮಾತ್ರ ಆಸ್ಪತ್ರೆಗೆ ಓಡೋಡಿ ಬಂದಿದ್ದರಂತೆ.
ನನ್ನ ಜೀವನದಲ್ಲಿ ನಾನು ಕಂಡ ವಿಶೇಷ ವ್ಯಕ್ತಿತ್ವಗಳಲ್ಲಿ ನನ್ನ ತಂದೆಯ ವ್ಯಕ್ತಿತ್ವ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅಪರೂಪಕ್ಕೆ ಒಂದೆರಡು ಮಾತಾಡುವ ಅಪ್ಪ ಕೆಲಸದಲ್ಲಿ ಮಾತ್ರ ಯಾರು ಮೀರಿಸಲಾಗದ ಶ್ರಮಜೀವಿ. ನಾನು ಹುಟ್ಟಿದ ಮೇಲೆ ಮರಳಿ ಮಹಾರಾಷ್ಟ್ರಕ್ಕೆ ಹೋಗದೇ ಊರಿನಲ್ಲಿಯೇ ಮೇಸ್ತ್ರಿಯಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆವರ ಆದಾಯದ ಮೇಲೆಯೇ ನಮ್ಮ ಕುಟುಂಬ ಸಂಪೂರ್ಣ ಅವಲಂಬಿತವಾಗಿದೆ ಎಂದು ಅರಿತ ಅವರು ಕೆಲಸಕ್ಕೆ ರಜೆ ಮಾಡಿದ್ದು ಮಾತ್ರ ನಾನು ಕಂಡಿಲ್ಲ.
ಚೆನ್ನಾಗಿ ಓದುತ್ತಿದ್ದ ಮತ್ತು ಓದುವ ಬಯಕೆ ಹೊತ್ತಿದ್ದ ನನ್ನ ತಂದೆಯನ್ನು ಬಡತನ ಏಳನೇ ತರಗತಿಗೆಯಲ್ಲೇ ಶಿಕ್ಷಣದಿಂದ ದೂರ ದೂಡಿತ್ತು. ಅವನದು ಮಾತು ತೀರಾ ಕಡಿಮೆ ಎಂಬ ಒಂದು ವಿಚಾರ ಬಿಟ್ಟರೆ ಯಾರ ಬಾಯಲ್ಲೂ ಕೆಟ್ಟ ಹೆಸರು ಕೇಳದ ಸಾಧುಜೀವಿ ನನ್ನಪ್ಪ.
ಜಗತ್ತಿನಲ್ಲಿ ಗಂಡುಮಕ್ಕಳಿಗೆ ಒಂದೇಟೂ ಹೊಡೆಯದ ತಂದೆಯಿದ್ದರೆ ಅದು ನನ್ನ ತಂದೆ ಮಾತ್ರ ಅನ್ನಿಸುತ್ತದೆ. ಆಗೊಮ್ಮೆ ಈಗೊಮ್ಮೆ ಕೋಪದಲ್ಲಿ ಗದರಿದ್ದು ಬಿಟ್ಟರೆ ನನಗೆ ಎಂದೂ ಹೊಡೆದವನಲ್ಲ ಅವನು. ಪಾಕೆಟ್‌ಮನಿ ಕೊಡುವಷ್ಟು ಶ್ರೀಮಂತ ಅವನಲ್ಲ. ಆದರೂ ವಾರಕೊಮ್ಮೆ ನನ್ನ ತಾಯಿಯ ಕಣ್ಣುತಪ್ಪಿಸಿ ಅವನು ನನಗೆ ನೀಡುವ ನೂರು ರೂಪಾಯಿ ನಿಜಕ್ಕೂ ವಿಶೇಷ.
ಸಂಜೆ ನನ್ನ ಅಕ್ಕ ಕಾಲೇಜು ಮುಗಿಸಿ ಬರುವುದು ತಡವಾದರೆ ಸ್ವಲ್ಪ ಮಟ್ಟಿಗೆ ಗಾಬರಿಯಾಗುವ ಅವನು ನಾನು ಬರುವುದು ತಡವಾದರೆ ಗಾಬರಿಯಲ್ಲಿ ಕಸಿವಿಸಿಗೊಳ್ಳುತ್ತಿದ್ದನ್ನು ನನ್ನ ತಾಯಿ ಕಂಡು ನನ್ನಲ್ಲಿ ಹೇಳಿದ ಪ್ರಸಂಗಗಳೂ ಇವೆ. ಪ್ರೀತಿ ವ್ಯಕ್ತಪಡಿಸಲು ಬಾರದ ತಂದೆ ಎಂಬ ಜೀವಿಯ ಮನದಲ್ಲಿ ಪ್ರೀತಿಯ ಸಾಗರವೇ ಹರಿಯುತ್ತದೆ ಎಂಬುದಕ್ಕೆ ಇದೇ ಒಂದು ಉದಾಹರಣೆ.
ಬದುಕಿನಲ್ಲಿ ತಂದೆ ತಾಯಿ ಇಬ್ಬರೂ ಪ್ರಮುಖರೇ ಆದರೆ ತಾಯಿಯ ಕಾಳಜಿ, ಪ್ರೀತಿಯ ನಡುವೆ ತಂದೆಯ ಪ್ರೀತಿ ಮಾತ್ರ ಕಾಣದ ಕುರುಡಾಗಿ ದೂರವೇ ಉಳಿಯಿತು. ತಾಯಿಯ ಸಾಲು ಸಾಲು ವರ್ಣನೆಗಳ ನಡುವೆ ತಂದೆ ಮಾತ್ರ ವರ್ಣನೆ ರಹಿತ ಪದವಾಗಿಯೇ ಉಳಿದುಬಿಟ್ಟ. ಅವನೊಂತರ ನಮ್ಮ ಬದುಕು ಎಂಬ ಸುಂದರ ಚಿತ್ರವನ್ನು ನಿರ್ದೇಶಿಸಿ ತೆರೆಯ ಹಿಂದೆಯೇ ಉಳಿದ ಕಲಾವಿದ…
-ಚೇತನ್
ಕಾಶಿಪಟ್ನ