Advertisement

ನನ್ನ ತಂದೆ ಶಾಂತಿಯ ಪ್ರತಿರೂಪ, ಸಮಾಜಮುಖಿ ಮನೋಭಾವ 

02:04 PM Apr 15, 2018 | |

ಬೆಳ್ತಂಗಡಿ: 1999 ಹಾಗೂ 2004ರಲ್ಲಿ ಶಾಸಕರಾಗಿ ಸತತವಾಗಿ ಆಯ್ಕೆಯಾಗಿದ್ದ ಪ್ರಭಾಕರ ಬಂಗೇರ ಅವರ ಪುತ್ರ ನಿಖಿಲ್‌ ಅವರು ತಂದೆಯ ರಾಜಕೀಯ, ಸಾಂಸಾರಿಕ ಜೀವನದ ಕುರಿತು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

Advertisement

ತಂದೆ 1999ರಲ್ಲಿ ಚುನಾವಣೆಗೆ ನಿಂತಿದ್ದ ಸಂದರ್ಭ ನಾನು ಹೈಸ್ಕೂಲ್‌ ನಲ್ಲಿ ಓದುತ್ತಿದ್ದೆ. ಮನೆ ಮುಂದೆ ಯಾವತ್ತೂ ಜನಜಂಗುಳಿ ಸೇರಿರುತ್ತಿತ್ತು. ನನಗೆಲ್ಲವೂ ಹೊಸದಾಗಿ ಕಾಣುತ್ತಿತ್ತು. ಶಾಲೆಗೆ ರಜಾ ಕಾಲವಾಗಿದ್ದರಿಂದ ನಾನೂ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ತೆರಳುತ್ತಿದ್ದೆ.

ಮತಎಣಿಕೆ ಸಂದರ್ಭ ಮರೆಯಲಾಗದು
ಆಗ ರಾಜಕೀಯ ಚಟುವಟಿಕೆಗಳು ಜೋರಾಗಿಯೇ ಇದ್ದವು. ಮತ ಎಣಿಕೆ ಪ್ರಕ್ರಿಯೆ ಜೀವನದಲ್ಲಿ ಮರೆಯಾಗದ ಕ್ಷಣವೆಂದರೂ ತಪ್ಪಾಗಲಾರದು. ಏನಾಗುತ್ತದೆ, ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ಅಂತಿಮವಾಗಿ ತಮ್ಮ ತಂದೆ ಗೆದ್ದರು. ಆವಾಗ ಚಿಕ್ಕಮಗಳೂರಿನಲ್ಲಿ ಮತ ಎಣಿಕೆ ನಡೆದಿತ್ತು. ಬೆಳ್ತಂಗಡಿ ಮರಳುವಾಗ ಸಿಕ್ಕ ಸ್ವಾಗತ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಚಾರ್ಮಾಡಿ ಮೂಲಕ ಬೆಳ್ತಂಗಡಿ ಪ್ರವೇಶಿಸುವಾಗ ಶುಭ ಹಾರೈಸಲು ರಸ್ತೆಯ ಇಕ್ಕೆಲಗಳಲ್ಲಿ ಜನತೆ ಕಾದಿದ್ದರು. ತಾಲೂಕು ಕೇಂದ್ರದಲ್ಲಿ ಜನಸಾಗರವೇ ನೆರೆದಿತ್ತು. ಅಗಲೇ ನನಗೆ ಜನನಾಯಕನಿಗಿರುವ ಮಹತ್ವದ ಅರಿವಾಗಿದ್ದು. ಒಬ್ಬ ನಾಯಕನಾಗಿ ಅವರು ಸಮುದಾಯವನ್ನುದ್ದೇಶಿಸಿ ಆಡುತ್ತಿದ್ದ ಮಾತು ಹಾಗೂ ಮಾಡುತ್ತಿದ್ದ ಕೆಲಸಗಳು ನಮ್ಮಲ್ಲಿ ಉತ್ಸಾಹ ಮೂಡಿಸುತ್ತಿದ್ದವು ಎಂದರು ನಿಖಿಲ್‌.

ತಂದೆಯವರು ಜನಪರ ಕಾರ್ಯಗಳಲ್ಲಿ ಸದಾ ತಲ್ಲೀನರಾಗಿರುತ್ತಿದ್ದರೂ ಕುಟುಂಬ ಜೀವನಕ್ಕೂ ಸಮಯ ಮೀಸಲಿಡುತ್ತಿದ್ದರು. ರಾಜಕೀಯ ಚಟುವಟಿಕೆಗಳು ಹೆಚ್ಚಾಗಿದ್ದ ಸಂದರ್ಭ ಮನೆಗೆ ತಡವಾಗಿ ಆಗಮಿಸುತ್ತಿದ್ದರೂ ಮನೆಯವರೊಂದಿಗೆ ಎಂದಿನಂತೆಯೇ ಇರುತ್ತಿದ್ದರು ಎಂದರು ನಿಖಿಲ್‌.

ದೇಗುಲ ದರ್ಶನ ಅವರಿಗಿಷ್ಟ 
ಚುನಾವಣಾ ಚಟುವಟಿಕೆ ಬಿರುಸಾಗಿದ್ದಾಗ ಬೆಳಗ್ಗೆ ನಾವು ಏಳುವ ಮುನ್ನವೇ ಅಪ್ಪ ಮನೆಯಿಂದ ಹೋಗಿರುತ್ತಿದ್ದರು. ನಾವು ಮಲಗಿದ ಬಳಿಕ ಮನೆಗೆ ಆಗಮಿಸಿದ್ದೂ ಇದೆ. ಅವರು ರಾಜಕೀಯ ಸಮಸ್ಯೆಗಳನ್ನು ಮನೆಯೊಳಗೆ ತರುತ್ತಿರಲಿಲ್ಲ. ಬಿಡುವಿದ್ದಾಗೆಲ್ಲ ದೇವಸ್ಥಾನಗಳಿಗೆ ಹೋಗಲು ಇಷ್ಟಪಡುತ್ತಾರೆ, ಕುಟುಂಬ ಸಮೇತ ಹಲವಾರು ದೇವಾಲಯಗಳನ್ನು ಸುತ್ತಾಡಿದ್ದೇವೆ ಎನ್ನುತ್ತಾರೆ ನಿಖಿಲ್‌.

Advertisement

ಜನರಿಗೆ ಆಪ್ತರಾಗಿದ್ದರು: ಅವರನ್ನು ಯಾರು ಬೇಕಾದರೂ ಬಂದು ಭೇಟಿ ಮಾಡಬಹುದಿತ್ತು. ಎಲ್ಲರೊಂದಿಗೂ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು. ನಿರ್ಭಯವಾಗಿ ಜನತೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಅವಕಾಶವಿತ್ತು. ಬೆಳಗ್ಗೆಯೇ ಜನತೆ ತಮ್ಮ ಸಮಸ್ಯೆ ತೋಡಿಕೊಳ್ಳಲು ಮನೆ ಮುಂದೆ ಹಾಜರಾಗುತ್ತಾರೆ. ನಮ್ಮಪ್ಪ ಅಮರಿಗೆಲ್ಲ ಸಮರ್ಪಕ ಮಾಹಿತಿ, ಮಾರ್ಗದರ್ಶನ ನೀಡುತ್ತಿದ್ದರು.

ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next