ನೆನಪಿರಬಹುದು. ದಶಕದ ಹಿಂದೆ “ಮೆಂಟಲ್ ಮಂಜ’ ಎಂಬ ಚಿತ್ರ ಬಂದಿತ್ತು. ಆ ಮೂಲಕ ಅರ್ಜುನ್ ಎಂಬ ಹೀರೋ ಕನ್ನಡ ಚಿತ್ರರಂಗದಲ್ಲಿ ಗಟ್ಟಿನೆಲೆಯೂರುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ಅದಾದ ಬಳಿಕ ಅಲ್ಲೊಂದು, ಇಲ್ಲೊಂದು ಸಿನಿಮಾ ಮಾಡಿದ್ದು ಬಿಟ್ಟರೆ ಆಮೇಲೆ ಅರ್ಜುನ್ ಎಲ್ಲೋ ಕಳೆದು ಹೋಗಿದ್ದರು. ಈಗ ಅದೇ ಅರ್ಜುನ್ ಪುನಃ ಬಂದಿದ್ದಾರೆ. ಮತ್ತದೇ “ಮೆಂಟಲ್ ಮಂಜ-2′ ಸಿನಿಮಾ ಮೂಲಕ.
ಅವರ ಸಹೋದರ ಸಾಯಿಸಾಗರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟಕ್ಕೂ ದೊಡ್ಡ ಗ್ಯಾಪ್ ಬಳಿಕ ಕಾಣಿಸಿಕೊಳ್ಳುತ್ತಿರುವ ಅರ್ಜುನ್, ಎಲ್ಲಿ ಹೋಗಿದ್ದರು, ಈ ಗ್ಯಾಪ್‌ನಲ್ಲಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಅರ್ಜುನ್ ಮತ್ತು ಸಾಯಿಸಾಗರ್ ಅವರ ತಂದೆ ಚಳವಳಿ ನಾರಾಯಣ್ ಮೂರು ವರ್ಷಗಳ ಹಿಂದೆ ಅಗಲಿದ್ದರು. ಅವರ ಅಗಲಿಕೆ ಬಳಿಕ ಇಡೀ ಕುಟುಂಬವೇ ಉತ್ಸಾಹ ಕಳೆದುಕೊಂಡಿತ್ತು.
ಆ ಕುಟುಂಬಕ್ಕೆ ಚಳವಳಿ ನಾರಾಯಣ್ ದೊಡ್ಡ ಶಕ್ತಿಯಾಗಿದ್ದರು. ಅವರೇ ಇಲ್ಲದ ಮೇಲೆ, ಕುಟುಂಬದ ಪರಿಸ್ಥಿತಿಯಂತೂ ಹದಗೆಟ್ಟು ಹೋಗಿತ್ತು. ಅರ್ಜುನ್ ಮತ್ತು ಸಹೋದರ ಸಾಯಿಸಾಗರ್ ತಾಯಿ ಜಾರಿ ಬಿದ್ದು ಕೋಮದಲ್ಲಿದ್ದರು. ಇಬ್ಬರು ಸಹೋದರರಿಗೆ ಈ ಬದುಕೇ ಬೇಡ ಅನಿಸಿದ್ದು ನಿಜ. ಕೊನೆಗೆ ಒಬ್ಬರಿಗೊಬ್ಬರು ಸಮಾಧಾನ ಪಡಿಸಿಕೊಂಡು, ಹೆಂಡತಿ, ಮಕ್ಕಳ ಮುಖ ನೋಡಿ ಚೇತರಿಸಿಕೊಂಡರು. ಆದರೆ, ಇವರಿಬ್ಬರೂ ಪುನಃ ಸಿನಿಮಾ ಮಾಡ್ತೀವಿ ಅನ್ನುವ ಸಣ್ಣ ಕಲ್ಪನೆಯೂ ಇರಲಿಲ್ಲ.
ಹೇಗೋ, ಸಿನಿಮಾ ಮಾಡೋಕೆ ನಿಂತಿದ್ದಾರೆ. ಇವರ ಹಿಂದೆ ನಿಂತಿದ್ದು ಗೋವಿಂದಣ್ಣ ಎಂಬ ನಿರ್ಮಾಪಕರು. ಅವರಿಂದಾಗಿ “ಮೆಂಟಲ್ ಮಂಜ 2′ ಸಿನಿಮಾ ಆಗುತ್ತಿದೆ ಎಂಬುದು ಅರ್ಜುನ್ ಮಾತು. ಇಷ್ಟಕ್ಕೂ ಅರ್ಜುನ್‌ಗೆ ಚಿತ್ರರಂಗದಿಂದ ಯಾವ ಅವಕಾಶವೂ ಬರಲಿಲ್ಲವಾ? ಅದೇನಾಯೊ¤à ಗೊತ್ತಿಲ್ಲ ಎನ್ನುತ್ತಾರೆ ಅರ್ಜುನ್. “ಮುಂದೆ ಚೆನ್ನಾಗಿ ಮಾತಾಡ್ತಾರೆ, ಹಿಂದೆ ಕೆಟ್ಟದ್ದಾಗಿ ಮಾತಾಡ್ತಾರೆ ಎಂಬ ಸುದ್ದಿ ಬರುತ್ತಿತ್ತು. ಯಾರು, ಯಾಕೆ ಹಾಗೆಲ್ಲ ಮಾತಾಡ್ತಾರೆ ಅನ್ನೋದೇ ಗೊತ್ತಾಗುತ್ತಿರಲಿಲ್ಲ.
ಕೆಲವರು ಸೆಟ್‌ಗೆ ಲೇಟ್ ಆಗಿ ಬರ್ತಾರೆ ಅಂತ ತಪ್ಪು ಆರೋಪ ಹೊರಿಸುತ್ತಿದ್ದರು. ನಾನು ಯಾವತ್ತೂ ಆ ರೀತಿ ಮಾಡಿದವನಲ್ಲ. ಎಲ್ಲರೂ ನಮ್ಮ ಬಗ್ಗೆ ಕೇವಲವಾಗಿ ಮಾತಾಡುತ್ತಾರೆ ಎಂಬುದು ಕಿವಿಗೆ ಬಿದ್ದಾಗ, ತುಂಬಾನೇ ಡಿಸ್ಟರ್ಬ್ ಆಗಿದ್ದು ನಿಜ. ನನಗೆ ಗೊತ್ತಿರುವಂತೆ, “ತಿಮ್ಮ’ ಸಿನಿಮಾದಲ್ಲಿ ಸಣ್ಣ ಮುನಿಸು ಇದ್ದದ್ದು ಬಿಟ್ಟರೆ, ನಂತರ ಆ ನಿರ್ದೇಶಕರ ಜತೆ ಎರಡು ಚಿತ್ರ ಮಾಡಿದ್ದೆ. ಎಲ್ಲ ಸರಿಹೋಯ್ತು ಅಂದುಕೊಳ್ಳುತ್ತಿದ್ದಂತೆಯೇ ಅಪಪ್ರಚಾರ ನಡೆಯುತ್ತಲೇ ಬಂತು. ಯಾರೂ ನಮ್ಮನ್ನು ಮಾತಾಡಿಸುತ್ತಿರಲಿಲ್ಲ.
ತಂದೆಯನ್ನ ಕಳೆದುಕೊಂಡಿದ್ದು, ಫ್ಯಾಮಿಲಿ ಕಂಗಾಲಾಗಿದ್ದು ಎಲ್ಲವನ್ನೂ ನೆನಪಿಸಿಕೊಂಡು ಬದುಕು ಸಾಕೆನಿಸಿದ್ದು ನಿಜ. ಆದರೆ, ಅಪ್ಪನ ಆಸೆ ಎಲ್ಲರೂ ಒಟ್ಟಾಗಿರಬೇಕು ಎಂಬುದಾಗಿತ್ತು. ಆ ಸಮಯದಲ್ಲಿ ಸಣ್ಣ ಸಮಸ್ಯೆಗಳು ದೊಡ್ಡದಾಗಿದ್ದವು. ಈಗ ನನ್ನ ಫ್ಯಾಮಿಲಿ ಸರಿಯಾಗಿದೆ. ನಾನು ನನ್ನ ಸಹೋದರ ವನವಾಸ ಅನುಭವಿಸಿ ಬಂದಿದ್ದೇವೆ. ಈಗ ಹೊಸ ಬದುಕು ಶುರುವಾಗಿದೆ. ಇನ್ನಾದರೂ, ನಮ್ಮನ್ನು ಹರಸಿ, ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಲೇ ಸಣ್ಣ ಫ್ಲ್ಯಾಶ್‌ಬ್ಯಾಕ್ ಸ್ಟೋರಿಯನ್ನು ಬಿಚ್ಚಿಟ್ಟರು ಅರ್ಜುನ್.