ಮಂಡ್ಯ: “ಪ್ರಧಾನಿ ನರೇಂದ್ರ ಮೋದಿ ಅವರು ಪರಿಶಿಷ್ಟ ಜಾತಿ ಹಾಗೂ ವರ್ಗದವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆ ಹಾಗೂ ಅಂಬೇಡ್ಕರ್ ಅವರ ಪಂಚತೀರ್ಥ ಅಭಿವೃದ್ಧಿಪಡಿಸಿದ ಕಾರಣಕ್ಕಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಎಂದು ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದರು.
ನಗರದ ಗುರುರಾಜ್ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಶಾಸಕ ಎನ್.ಮಹೇಶ್ ಅವರ ಅಭಿಮಾನಿಗಳು ಮತ್ತು ಬೆಂಗಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
20 ವರ್ಷ ಬಹುಜನ ಸಮಾಜ ಪಾರ್ಟಿಯಲ್ಲಿ ನನ್ನ ಸರ್ವಸ್ವವನ್ನೂ ಧಾರೆ ಎರೆದು ಸಂಘಟನೆ ಮಾಡಿದ್ದೆ. ಆದರೆ ಆ ಪಕ್ಷದಲ್ಲಿ ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಪಕ್ಷದಿಂದಲೇ ಉಚ್ಛಾಟನೆ ಮಾಡಿಸಿದರು. ಹೀಗಾಗಿ ನಾನು ಬಿಜೆಪಿಗೆ ಸೇರ್ಪಡೆಗೊಂಡೆ ಎಂದು ಹೇಳಿದರು.
ಜೀವವಿರುವರೆಗೂ ಹೋರಾಟ: ಬಿಜೆಪಿ- ಬಿಎಸ್ಪಿ ತತ್ವ ಸಿದ್ಧಾಂತ ಗಳಲ್ಲಿ ಸಾಮ್ಯತೆ ಇದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಶೋಷಿತ ಸಮುದಾಯಗಳ ಹಿತ ಕಾಯಲು ಬದ್ಧನಾಗಿದ್ದೇನೆ. ಕಾನ್ಶಿರಾಂಜೀ ಅವರ ವಿಚಾರಧಾರೆ ನನ್ನ ರಕ್ತದ ಕಣಕಣದಲ್ಲಿವೆ. ನಮ್ಮ ಮೆದುಳಿನಲ್ಲಿ ಡಾ.ಬಾಬಾಸಾಹೇಬರ ಆಶಯಗಳಿವೆ. ಇವುಗಳ ಜಾರಿಗಾಗಿ ಜೀವವಿರುವವರೆಗೂ ಹೋರಾಡುತ್ತೇನೆ ಎಂದರು.
ಸಮಾರಂಭದಲ್ಲಿ ಮಂಡ್ಯ ಜಿಲ್ಲೆಯ ಎನ್.ಮಹೇಶ್ ಅವರ ನೂರಾರು ಬೆಂಬಲಿಗರು ಬಿಜೆಪಿ ಸೇರ್ಪಡೆಗೊಂಡು ತತ್ವ ಸಿದ್ಧಾಂತಗಳ ಅನುಸಾರ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಮಾಜಿ ಶಾಸಕ ನಂಜುಂಡಸ್ವಾಮಿ, ಎಸ್ಸಿ ಮೋರ್ಚಾ ಕಾರ್ಯದರ್ಶಿ ಪರಮಾನಂದ, ಜಿಲ್ಲಾಧ್ಯಕ್ಷ ನಿತ್ಯಾನಂದ, ಉಪಾಧ್ಯಕ್ಷ ಪೂರ್ಣಚಂದ್ರ, ಮುಖಂಡರಾದ ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ವೆಂಕಟರಾಜು, ಎಚ್. ಆರ್.ಅರವಿಂದ್, ಯಮದೂರು ಸಿದ್ದರಾಜು, ಶಂಕರ್ ಮತ್ತಿತರರಿದ್ದರು.