ಹೊಸದಿಲ್ಲಿ : ಕೇರಳ ಹೈಕೋರ್ಟ್ ಆದೇಶದ ಫಲವಾಗಿ. ಬಿಸಿಸಿಐ ಹೇರಿದ್ದ ಆಜೀವ ನಿಷೇಧದಿಂದ ರಕ್ಷಾ ಬಂಧನ ದಿನದಂದು ಮುಕ್ತಿ ಪಡೆದಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಎಸೆಗಾರ, ಕೇರಳದ ಎಸ್ ಶ್ರೀಶಾಂತ್ ಅವರು “ನಾನೀಗ 2019ರ ವಿಶ್ವ ಕಪ್ ಕ್ರಿಕೆಟ್ ಮೇಲೆ ಕಣ್ಣಿಟ್ಟಿದ್ದೇನೆ; ಭಾರತೀಯ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದೇ ಈಗ ನನ್ನ ಕ್ರಿಕೆಟ್ ಬದುಕಿನ ಮಹದಾಸೆಯಾಗಿದೆ’ ಎಂದು ಹೇಳಿಕೊಂಡಿದ್ದಾರೆ.
34ರ ಈ ಹರೆಯದಲ್ಲೂ ಅಂತಹ ಕನಸನ್ನು ಹೊಂದಿರುವ ನೀವು ಅದನ್ನು ನನಸು ಮಾಡಿಕೊಳ್ಳಲು ಸಾಧ್ಯವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀಶಾಂತ್ ಹೇಳಿದ್ದು ಹೀಗೆ :
“ನನಗೆ ಗೊತ್ತು – ಇದು ಬಹುತೇಕ ಅಸಾಧ್ಯವಾದ ಮಾತು; ಹಾಗಿದ್ದರೂ ಒಂದು ವೇಳೆ ನಾನು 2019ರ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡಿದೆನೆಂದಾದರೆ ಅದು ನಿಜಕ್ಕೂ ಒಂದು ಪವಾಡವೇ ಸರಿ; ಅಂತಹ ಒಂದು ಪವಾಡ ಸಂಭವಿಸೀತು ಎಂಬ ನಂಬಿಕೆ ನನ್ನಲ್ಲಿದೆ’.
“ನನಗೀಗ ಕೇವಲ 34 ವರ್ಷ ವಯಸ್ಸು ; ಮಿಸ್ಬಾ ಉಲ್ ಹಕ್, ಯೂನಿಸ್ ಖಾನ್, ಸಚಿನ್ ಪಾಜಿ ಇವರೆಲ್ಲ 40ರ ಹತ್ತಿರದ ತನಕವೂ ಕ್ರಿಕೆಟ್ ಆಡಿದ್ದಾರೆ; ಅವರೇ ನನಗೆ ಪ್ರೇರಣೆಯಾಗಿದ್ದಾರೆ’
“ಭಾರತೀಯ ಕ್ರಿಕೆಟ್ ತಂಡದಲ್ಲೀಗ ಸಣ್ಣ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಎಸೆಗಾರರಾಗಿದ್ದಾರೆ. ಎಂದರೆ ಎಸೆಗಾರರ ಸ್ಥಾನಕ್ಕೆ ತೀವ್ರವಾದ ಸ್ಪರ್ಧೆ ಇದೆ; ನಿಜ, ಆದರೆ ನಾನು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾಗಲೂ ಇದೇ ರೀತಿಯ ಸ್ಪರ್ಧೆ ಇತ್ತು. ಸ್ಪರ್ಧೆ ಇದ್ದಾಗಲೇ ನಿಮ್ಮಿಂದ ಅತ್ಯುತ್ತಮ ನಿರ್ವಹಣೆ ಹೊರಬರುತ್ತದೆ ಎಂಬದು ನನ್ನ ಅನ್ನಿಸಿಕೆ. ನನ್ನ ಪುನಾರಾಗಮನ ಸಾಧ್ಯವಾದಲ್ಲಿ ನಾನು ನನ್ನ ಪ್ರತಿಭೆಗೆ ನ್ಯಾಯ ತೋರುವೆನೆಂಬ ಭರವಸೆ ನನ್ನಲ್ಲಿದೆ’.