ಮಣಿಪಾಲ:ಮೂರು ಮುತ್ತು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದೆ. ಪ್ರತಿವರ್ಷ 50-60 ಮೂರು ಮುತ್ತು ನಾಟಕಗಳನ್ನು ನಾವು ಪ್ರದರ್ಶಿಸುತ್ತಿದ್ದೇವೆ. ಕಾಲಕ್ಕೆ ತಕ್ಕಂತೆ ನಾವು ಅದರಲ್ಲಿ ಬದಲಾವಣೆ ತಂದಿದ್ದೇವೆ. ನಮಗೆ ಮರುಜೀವ ಕೊಟ್ಟ ನಾಟಕ ಇದು ಎಂದು ಮೂರು ಮುತ್ತು ನಾಟಕದ ಖ್ಯಾತ ಕಲಾವಿದ ಸತೀಶ್ ಪೈ ಅವರ ಮನದಾಳದ ಮಾತು.
ಮೂರು ಮುತ್ತು ನಾಟಕದ “ಕರಾವಳಿ ಮುತ್ತು” ಖ್ಯಾತಿಯ ಸತೀಶ್ ಪೈ ಅವರು ಸೋಮವಾರ (ಏಪ್ರಿಲ್ 05) ಉದಯವಾಣಿ ಕಚೇರಿಗೆ ಭೇಟಿ ನೀಡಿ, ತಮ್ಮ ರಂಗಭೂಮಿ ಪಯಣ, ತಂದೆ ಕುಳ್ಳಪ್ಪು ಅವರ ಬಗ್ಗೆ ನೆನಪಿನ ಬುತ್ತಿಯನ್ನು ಉದಯವಾಣಿ ಡಾಟ್ ಕಾಮ್ ನ “ತೆರೆದಿದೆ ಮನೆ ಬಾ ಅತಿಥಿ” ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಹಲವು ಮಂದಿ ಅಭಿಮಾನಿಗಳ ಪ್ರಶ್ನೆಗೂ ಅವರು ಉತ್ತರಿಸಿದರು.
ನಾಟಕದ ಮುಖ್ಯ ಆಶಯ ಮನರಂಜನೆ ನೀಡುವುದು ಎಂಬುದು ನಮ್ಮ ತಂದೆ ಕುಳ್ಳಪ್ಪು(ಬಾಲಕೃಷ್ಣ ಪೈ) ಅವರ ದೃಢ ನಿಲುವಾಗಿತ್ತು. ನಾಟಕದ ಗೀಳಿನಿಂದ ಅವರು ಸಿನಿಮಾ, ನಾಟಕ ಕಂಪನಿಗಳನ್ನು ಮಾಡಿದ್ದರು. ಸಾಲ ತೀರಿಸಲು ತಾಯಿಯ ಚಿನ್ನವನ್ನೆಲ್ಲಾ ಮಾರಿದ್ದರು. ನಾಟಕದಲ್ಲಿ ಅವರು ಸಂಪಾದಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಆದರೂ ಅವರು ನಾಟಕ ಆಡಿಸುವುದನ್ನು ಮುಂದುವರಿಸಿದ್ದರು ಎಂದು ಸತೀಶ್ ಪೈ ತಮ್ಮ ತಂದೆಯ ನೆನಪನ್ನು ಬಿಚ್ಚಿಟ್ಟರು.
ತಾನು ಸಿನಿಮಾ ಮಾಡಿ ನಷ್ಟ ಅನುಭವಿಸಿದ್ದರಿಂದ ನಮಗೆ(ಮಕ್ಕಳಿಗೆ) ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ನಟಿಸಲು ಹೋಗಬೇಡಿ ಎಂದು ಕಿವಿ ಮಾತು ಹೇಳಿದ್ದರು. ಹೀಗಾಗಿ ನಾನು ಸಿನಿಮಾದಲ್ಲಿ ನಟಿಸಲು ಹಲವು ಬಾರಿ ಅವಕಾಶ ಬಂದಿದ್ದರೂ ಕೂಡಾ ಅದನ್ನು ನಿರಾಕರಿಸಿದ್ದೆ. ಆದರೂ ಮೂರು ಮುತ್ತು ನಾಟಕವನ್ನು ಸಿನಿಮಾ ಮಾಡಬೇಕೆಂಬ ಆಸೆ ಇದೆ ಎಂದು ಸತೀಶ್ ಫೇಸ್ ಬುಕ್ ಲೈವ್ ಚಾಟ್ ನಲ್ಲಿ ಹೇಳಿದರು.
ನಾಟಕದಲ್ಲಿ ಮನರಂಜನೆ ಮುಖ್ಯ. ನಮ್ಮ ನಾಟಕದಲ್ಲಿ ನಾವು ಎಲ್ಲಿಯೂ ಅಶ್ಲೀಲತೆ ಬಳಸಲ್ಲ. ನಾಟಕದಲ್ಲಿ ಸಂದೇಶ ಇರಬೇಕು, ಇದ್ದರೆ ಒಳ್ಳೆಯದು. ಆದರೆ ಸಂದೇಶ ಇಲ್ಲದಿದ್ದ ಕೂಡಲೇ ನಾಟಕವನ್ನು ನಿರ್ಲಕ್ಷಿಸಬಾರದು ಎಂದು ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಟಕ, ಕಲಾವಿದ ಅಂದ ಕೂಡಲೇ ಅಸಡ್ಡೆ ಬೇಡ. ನಾಟಕದಲ್ಲಿ ನಿಯತ್ತು, ನಿಷ್ಠೆಯಿಂದ ದುಡಿದರೆ ಹೆಸರು ಮತ್ತು ಹಣ ಸಂಪಾದಿಸಬಹುದು. ನಾಟಕ ಕಲೆ ನಿರಂತರವಾಗಿ ಮುಂದುವರಿಯಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಉದಯವಾಣಿ ಕಚೇರಿಗೆ ಆಗಮಿಸಿದ್ದ ಮೂರು ಮುತ್ತು ಖ್ಯಾತಿಯ ಸತೀಶ್ ಪೈ ಅವರಿಗೆ ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉದಯವಾಣಿ ಆನ್ ಲೈನ್ ತಂಡ ಜತೆಗಿತ್ತು.