ನಮ್ಮಮ್ಮನ ಬಗ್ಗೆ ನಾನು ಹೇಳಹೊರಟರೆ ನನಗೆ ಲಂಕೇಶರ ಅವ್ವ (ಕವನ) ಕಣ್ಣ ಮುಂದೆ (ಬರುತ್ತದೆ) ಬರುತ್ತಾಳೆ. ಏಕೆಂದರೆ ನಮ್ಮಮ್ಮನೂ ಹೆಚ್ಚು ಕಡಿಮೆ ಹಾಗೆಯೇ. ಒಮ್ಮೆಯೂ ಗುಲಗಂಜಿಯಷ್ಟು ಚಿನ್ನಕ್ಕೆ ಆಸೆ ಪಡದ, ರೇಷ್ಮೆ ಸೀರೆಯ ಕನಸು ಕಾಣದ, ಬಡತನವೇ ದರ್ಬಾರು ನಡೆಸುತ್ತಿದ್ದ ಮನೆಗೆ ಸೊಸೆಯಾಗಿ ಬಂದು, ನಮ್ಮಪ್ಪನ ಸಂಸಾರದ ನೊಗಕ್ಕೆ ಜೋಡೆತ್ತಿನಂತಾದ ಆಕೆಯ ಬಗ್ಗೆ ಹೇಳಹೊರಟರೆ ಪದಗಳೇ ಬಡವಾಗುತ್ತವೆ.
ತಾವು ಅನಕ್ಷರಸ್ಥಳಾದರೂ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಬೆಳೆಸಬೇಕೆಂದು ಅಪ್ಪನಿಗಿಂತ ಹೆಚ್ಚು ಕನಸು ಕಂಡ ನಮ್ಮಮ್ಮನ ಆ ಆಸೆಯ ಫಲವೇ ಅವರ ಐದು ಜನ ಮಕ್ಕಳಾದ ನಾವು ಇಂದು ಸಮಾಜದಲ್ಲಿ ಹೆಮ್ಮೆಯಿಂದ ಎದೆ ತಟ್ಟಿಕೊಂಡು ಹೇಳುವಷ್ಟು ಓದಿದ್ದೇವೆ. ಅದರಲ್ಲೂ ನಾನು ಸಾಹಿತಿ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಓದಿ, ಬೆಳೆದಿದ್ದೇನೆಂದರೆ, ಅದರಲ್ಲಿ ನಮ್ಮಮ್ಮನ ಪಾಲು ಬಹಳಿದೆ. ಇದೆಲ್ಲಕ್ಕಾಗಿ ಆಕೆ ಪಟ್ಟಪಾಡು ಆಕೆಗೆ ಮಾತ್ರವೇ ಗೊತ್ತು.
ಗೆಳೆಯರು, ಒಮ್ಮೊಮ್ಮೆ ನಾನು ಹಸಿವು, ನಿದ್ರೆಗಳ ಪರಿವಿಲ್ಲದೆ ಕೆಲಸ ಮಾಡುವುದನ್ನು ಕಂಡು, ಏನ್ ಕೆಲ್ಸಾ ಮಾಡ್ತೀಯೋ, ಛಲ ಬಿಡದ ತ್ರಿವಿಕ್ರಮನಂತೆ ನೀನು ಗ್ರೇಟ್ ಬಿಡು ಅಂತಂದು ಬೆನ್ನುತಟ್ಟಿದಾಗ, ನಮ್ಮಮ್ಮನ ತ್ಯಾಗ ಪರಿಶ್ರಮದ ಮುಂದೆ ನಂದೆಲ್ಲಾ ಏನೂ ಅಲ್ಲಾ ಬಿಡ್ರೋ ಅನ್ನುತ್ತದೆ ನನ್ನ ಒಳಮನಸ್ಸು. ಏಕೆಂದರೆ ಆಕೆ ಹೀಗೆ ನಮ್ಮನ್ನೆಲ್ಲ ಓದಿಸಲು, ಬೆಳೆಸಲು, ಎಲ್ಲರಿಗೊಂದು ಸುಂದರ ಬದುಕು ಕಟ್ಟಿಕೊಡಲು, ನಿದ್ದೆಗೆಟ್ಟು ದುಡಿದ, ಅರೆಹೊಟ್ಟೆ ಉಂಡು ಮಲಗಿದ ದಿನಗಳ ಲೆಕ್ಕ ನನಗೆ ಗೊತ್ತಿದೆ. ಅಂತಹ ತ್ಯಾಗಮೂರ್ತಿ ನಮ್ಮಮ್ಮನ ಹೆಸರಿನಲ್ಲಿ ಶಾಲೆಯೊಂದನ್ನು ಕಟ್ಟಬೇಕೆಂಬುದು ನನ್ನ ಕನಸು.
*ಮಂಜುನಾಥ.ಎಸ್.ಕಟ್ಟಿಮನಿ
ಇಬ್ರಾಹಿಮಪೂರ
ವಿಜಯಪುರ