Advertisement

ನನಸಾಯ್ತು ಅನ್ನದಾತನ ದಶಕದ ಕನಸು

12:42 PM Dec 18, 2017 | |

ವಿಜಯಪುರ: ಕಳೆದ ಆರೇಳು ದಶಕಗಳಿಂದ ತನ್ನ ಜಮೀನಿಗೆ ನೀರು ಹರಿಯುತ್ತದೆ ಎಂದು ಕಾಯುತ್ತಲೇ ಇದ್ದ ಬಬಲೇಶ್ವರ ಭಾಗದ ಅನ್ನದಾತನ ಕನಸು ಇದೀಗ ನನಸಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಲು ಮುಳವಾಡ ಏತ ನೀರಾವರಿಯ ಬಬಲೇಶ್ವರ ಶಾಖಾ ನಾಲೆಗೆ ಹರಿಯಲು ಆರಂಭಿಸಿದ್ದು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟೀಷ ರಿಂದ ಸಮೀಕ್ಷೆ ಕಂಡಿದ್ದ ಮುಳವಾಡ ಏತ ನೀರಾವರಿ ಯೋಜನೆ ಭರವಸೆಗಳ ಮೂಟೆ ಹೊರುತ್ತಲೇ ಬರುತ್ತಿತ್ತು. ಸದರಿ ಯೋಜನೆ ಅನುಷ್ಠಾನಕ್ಕಾಗಿ ಹತ್ತು ಹಲವು ಸ್ವರೂಪದಲ್ಲಿ ಹೋರಾಟ ಮಾಡಿದ್ದ ರೈತರು, ಒಂದಲ್ಲ ಒಂದು ದಿನ ತಮ್ಮ ಜಮೀನಿಗೆ ನೀರು ಹರಿಯುತ್ತದೆ ಎಂಬ ಭರವಸೆಯ ಕಂಗಳಲ್ಲಿ ಕನಸುಗಳನ್ನೇ ಕಟ್ಟಿಕೊಂಡಿದ್ದರು.

ಸದರಿ ಯೋಜನೆ ಏತ ನೀರಾವರಿ ಯೋಜನೆಯಲ್ಲಿಯೇ ಬೃಹತ್‌ ಯೋಜನೆ ಎನಿಸಿಕೊಂಡಿರುವ ಯೋಜನೆ ಇದೀಗ ಕಾಲುವೆಗೆ ನೀರು ಹರಿಯುತ್ತಿದೆ. ಮೊದಲ ಹಂತವಾಗಿ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಸದರಿ ಏತ ನೀರಾವರಿ ಯೋಜನೆಯ ನಾಲೆಗೆ ನೀರು ಹರಿಸುವ ಪ್ರಾಯೋಗಿಕ ಕಾರ್ಯಕ್ಕೆ ಚಾನೆ ದೊರೆತಿದೆ. ಬೃಹದ್ದಾಕಾರದ ಫೈಲುಗಳು ಉಗುಳುತ್ತಿರುವ ನೀರು ಕಂಡು ರೈತರ ಮೊಗದಲ್ಲಿ ಸಂತಸ ಉಕ್ಕಿ ಹರಿಯುತ್ತಿದೆ. 

ಮುಳವಾಡ ಏತ ನೀರಾವರಿ ಯೋಜನೆಗಾಗಿ ಹತ್ತು ಹಲವು ಸ್ವರೂಪದಲ್ಲಿ ನಡೆಸಿದ್ದ ಹೋರಾಟಗಳು ಒಂದು ಹಂತದಲ್ಲಿ ಬೃಹತ್‌ ಪ್ರತಿಭಟನೆಯ ಸ್ವರೂಪವನ್ನೇ ಪಡೆದಿತ್ತು. ಆದರೆ ಸರ್ಕಾರಗಳ ನಿರ್ಲಕ್ಷ್ಯ, ಆಳುವವರ ನಿರಾಸಕ್ತಿ, ಇಚ್ಛಾಶಕ್ತಿ ಕೊರತೆ ಪರಿಣಾಮ ಮುಳವಾಡ ಯೋಜನೆ ನೀರು ಹರಿಸುವ ಬದಲು ಕಣ್ಣೀರು ಹರಿಸುತ್ತದೆ ಅಷ್ಟೇ ಎಂಬ ನಿರಾಸೆಯೂ ಮೂಡಿತ್ತು. 

ಇದೀಗ ಹಲವು ದಶಕಳ ಹೋರಾಟದ ಫಲ ಹಾಗೂ ಹಿರಿಯರು ಕಂಡಿದ್ದ ಕನಸು ನನಸಾಗಿದೆ ಎಂದು ಯೋಜನೆ ಅನುಷ್ಠಾನದ ಹೋರಾಟದ ಮುಂಚೂಣಿಯಲ್ಲಿದ್ದ ನೀಲಗುಂದ ಶ್ರೀಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಡಾ| ಎಂ.ಬಿ. ಪಾಟೀಲ ಅವರು ಜಲ ಸಂಪನ್ಮೂಲ ಸಚಿವರಾದ ಕಾರಣ ಹಾಗೂ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವ ಕನಸು ಕಟ್ಟಿಕೊಂಡು, ಸಾಕಾರ ಮಾಡುವ ಛಲದ ಪರಿಣಾಮವೇ ಬಬಲೇಶ್ವರದಂಥ ಹಳ್ಳಿಗಳ ರೈತರ ಮನೆ ಬಾಗಿಲಿಗೆ ಕೃಷ್ಣೆ ತಲುಪುವಂತಾಗಿದೆ. ಬಸವ ನಾಡಿನಲ್ಲೇ ನಾನು ಜನಿಸಿ, ಈ ಜಿಲ್ಲೆಯ ಜನರ ಆಶೀರ್ವಾದದ ಫಲವಾಗಿ ಸಚಿವ ಮಾತ್ರವಲ್ಲ ಜಲಸಂಪನ್ಮೂಲ ಖಾತೆ ದೊರೆತಿದೆ.

ಅದನ್ನು ಸಮರ್ಥವಾಗಿ ಬಳಸಿಕೊಂಡು ಜಿಲ್ಲೆಯ ಜನರ ಋಣ ತೀರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅಷ್ಟೇ ಎಂದು ಯೋಜನೆಗೆ ಚಾಲನೆ ನೀಡಿದ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಅವರು ಹೇಳುವ ಮೂಲಕ ವಿನೀತ ಭಾವ ಪ್ರದರ್ಶಿಸಿರುವುದು ನಿಜಕ್ಕೂ ಅನುಕರಣೀಯ.

ಯೋಜನೆ ಅನುಷ್ಠಾನಕ್ಕೆ ಕಳೆದ ಹಲವು ದಶಕಗಳಿಂದ ನಡೆಸಿದ ಹೋರಾಟಗಾರರ ಪರಿಶ್ರಮ, ಜನರ ಮನದಲ್ಲಿ ನೀರಿನ ಜಾಗೃತಿ ಹೋರಾಟ ರೂಪಿಸಲು ಪ್ರೇರಕ ಶಕ್ತಿಯಾಗಿದ್ದ ಜಿಲ್ಲೆ ಮಠಾಧೀಶರು, ಜಿಲ್ಲೆಯ ನಾಯಕರ ಐಕ್ಯತೆ ಹಾಗೂ ಸಂಘಟಿತ ಹೋರಾಟದ ಫಲ ಇದೀಗ ನಾಲೆಗೆ ನೀರಾಗಿ ಹರಿಸು ಬರುತ್ತಿದೆ. ಈ ಕೆಲಸದಲ್ಲಿ ಅಧಿಕಾರಿಗಳು ಮಾಡಿದ ಪರಿಶ್ರಮವನ್ನು ಮರೆಯಬಾರದು ಎನ್ನುತ್ತಾರೆ ಸಚಿವ ಡಾ| ಎಂ.ಬಿ. ಪಾಟೀಲ.

64 ಸಾವಿರ ಎಕರೆ ಭೂಮಿ ನೀರಾವರಿ ಒಟ್ಟಾರೆಯಾಗಿ 5 ಲಕ್ಷ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವದ
ಯೋಜನೆಯಾಗಿದ್ದು, ಅದರಲ್ಲಿ 4 ಎ ಲಿಫ್ಟ್‌ ಅಡಿಯಲ್ಲಿಯೇ 64,210 ಎಕರೆ ಭೂಮಿ ನೀರಾವರಿಗೊಳಪಡಲಿದೆ. ಮುಳವಾಡ, ಕಾರಜೋಳ, ಕಾಖಂಡಕಿ, ಬಬಲೇಶ್ವರ, ನಿಡೋಣಿ, ತೊನಶ್ಯಾಳ, ಕುಬಕಡ್ಡಿ, ಸಾರವಾಡ, ದೂಡಿಹಾಳ, ಮದಗುಣಕಿ, ಶೇಗುಣಸಿ, ಕಂಬಾಗಿ, ಹಲಗಣಿ, ಯಕ್ಕುಂಡಿ, ಕನಮುಚನಾಳ, ದಾಶ್ಯಾಳ, ತಿಗಣಿಬಿದರಿ, ನಾಗರಾಳ, ಕುಮಠೆ, ಅರ್ಜುಣಗಿ, ಹೊಕ್ಕುಂಡಿ, ಜಮಖಂಡಿ ತಾಲೂಕಿನ ಖಾಜಿಬೀಳಗಿ, ಗೋಠೆ, ತೊದಲಬಾಗಿ, ಕಲಬೀಳಗಿ, ಗದ್ಯಾಳ ಗ್ರಾಮಗಳ 64,210 ಎಕರೆ ಭೂಮಿ ನೀರಾವರಿಗೊಳಪಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next