Advertisement
1. ಮದುವೆಯಾಗಿ ಎಷ್ಟು ವರ್ಷ ಆಯ್ತು? ಹುಡುಗ ಸೈನ್ಯದಲ್ಲಿದ್ದಾನೆ ಅಂತ ತಿಳಿದಾಗ ನಿಮಗೆ ಏನನ್ನಿಸಿತ್ತು?ನಮ್ಮ ಮದುವೆಯಾಗಿ 16 ವರ್ಷ ಆಯ್ತು. ಮದುವೆ ನಿಶ್ಚಯವಾದಾಗ ನನಗೆ 19 ವರ್ಷ ಆಗಿತ್ತು. ಸೈನ್ಯದ ಬಗ್ಗೆ, ಸೈನಿಕರ ಬಗ್ಗೆ ಹೆಚ್ಚೇನೂ ಗೊತ್ತೇ ಇರಲಿಲ್ಲ. ಆಗವರು ಶ್ರೀನಗರದ ಕುಪ್ವಾರದಲ್ಲಿದ್ರು. ಮದುವೆಯ ವೇಳೆಗಾಗಲೇ ಅವರು, ಸೈನ್ಯಕ್ಕೆ ಸೇರಿ 7-8 ವರ್ಷಗಳಾಗಿತ್ತು. ನನ್ನನ್ನು ನೋಡಿ ಹೋದ ಮೇಲೆ, 8 ತಿಂಗಳ ನಂತರ ಮದುವೆಗೆ 45 ದಿನ ರಜೆ ಹಾಕಿ ಬಂದಿದ್ದರು. ಒಂದು ತಿಂಗಳಾದ ಮೇಲೆ ಅವರು ಹೊರಟು ನಿಂತಾಗಲೇ ನನಗೆ ಪರಿಸ್ಥಿತಿಯ ಅರಿವಾಗಿದ್ದು. “ಅಯ್ಯೋ ಹೋಗ್ತಿದ್ದಾರಲ್ಲ’ ಅಂತ ಧಾರವಾಡದ ರೇಲ್ವೆ ಸ್ಟೇಷನ್‌ನಲ್ಲಿಯೇ ಜೋರಾಗಿ ಅತ್ತುಬಿಟ್ಟಿದ್ದೆ. ಮತ್ತೆ ಒಂದೂವರೆ ವರ್ಷದ ನಂತರವೇ ಅವರನ್ನು ನಾನು ನೋಡಿದ್ದು.
ಅವರು 3-4 ತಿಂಗಳಿಗೊಮ್ಮೆ ಪತ್ರ ಬರೆಯುತ್ತಿದ್ದರು. ಕೆಲವೊಮ್ಮೆ ಬರೆದ ಎಲ್ಲ ಪತ್ರಗಳೂ ಒಟ್ಟೊಟ್ಟಿಗೆ ಕೈ ಸೇರುತ್ತಿದ್ದವು. ಪತ್ರದಲ್ಲಿ ಅಲ್ಲಿನ ಯಾವ ವಿಷಯವನ್ನೂ ಹೇಳ್ತಾ ಇರಲಿಲ್ಲ. ಬರೀ ನನ್ನ, ಮನೆಯವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಮದುವೆಯ ನಂತರವೂ ಅಷ್ಟೆ, ಕೆಲವೊಮ್ಮೆ ಮಾತ್ರ ಲ್ಯಾಂಡ್‌ಲೈನ್‌ಗೆ ಫೋನ್ ಮಾಡುತ್ತಿದ್ದರು. ಒಂದು ಫೋನ್ ಮಾಡೋಕೆ ಅವರು ಎಷ್ಟೋ ಗಂಟೆ ಕಾಯಬೇಕಿತ್ತು. 3. ಗಂಡನ ಜೊತೆಗೇ ಇರಬೇಕು ಅಂತ ಎಲ್ಲ ಹೆಣ್ಮಕ್ಕಳ ಆಸೆ. ನೀವೂ ಅವರ ಜೊತೆಗೆ ಮಿಲಿಟರಿ ಕ್ಯಾಂಪ್‌ಗ್ಳಿಗೆ ಹೋಗಿದ್ದೀರಾ?
ಮದುವೆಯಾಗಿ ಒಂದೂವರೆ ವರ್ಷದ ನಂತರ ಅವರು ಊರಿಗೆ ಬಂದಾಗ, ಜೊತೆಯಲ್ಲಿ ನನ್ನನ್ನೂ ಕರೆದುಕೊಂಡು ಹೋದರು. ಆಗ ಅವರಿಗೆ ಜಮ್ಮುವಿನ ಅಕನೂರ್‌ನಲ್ಲಿ ಪೋಸ್ಟಿಂಗ್ ಆಗಿತ್ತು. ನಾನು ಎರಡು ವರ್ಷ ಅವರ ಜೊತೆಯಲ್ಲಿದ್ದೆ. ಆಮೇಲೆ ಮೊದಲ ಮಗ ಹುಟ್ಟಿದ. ಮತ್ತೆ ಸ್ವಲ್ಪ ಸಮಯ ಅವರಿದ್ದಲ್ಲಿಗೆ ಹೋಗಿದ್ದೆ. ಎರಡನೆ ಮಗುವಾದ ಮೇಲೆ ನಾನು, ಮಕ್ಕಳ ಜೊತೆ ಧಾರವಾಡದಲ್ಲಿಯೇ ಉಳಿದುಕೊಂಡೆ.
Related Articles
ಅಲ್ಲಿ ನಾವು ಕ್ವಾಟ್ರಸ್‌ನಲ್ಲಿದ್ದೆವು. ಅವರು ಡ್ನೂಟಿಗೆ ಹೋದಾಗ, ವಾಪಸ್ ಬರೋವರೆಗೂ ಜೀವ ಕೈಯಲ್ಲಿ ಹಿಡಿದು ಕಾಯ್ತಿದ್ದೆ. ಆಮೇಲೆ ಪಶ್ಚಿಮ ಬಂಗಾಳದಲ್ಲಿದ್ದಾಗ, ನಾನೂ ಬರ್ತೀನಿ ಅಂತ ಹಠ ಹಿಡಿದಿದ್ದೆ. ಆದರೆ, ಅಲ್ಲಿ ಬಾರ್ಡರ್‌ನಿಂದ ಕ್ವಾಟ್ರಸ್‌ಗೆ ಬರಲು ಒಂದು ದಿನವೇ ಬೇಕಾಗುತ್ತಿತ್ತಂತೆ. ಅವರೇ 15 ದಿನಕ್ಕೊಮ್ಮೆ ಕ್ವಾಟ್ರಸ್‌ಗೆ ಬರುತ್ತಿದ್ದರು. ಹಾಗಾಗಿ, ನನ್ನನ್ನು ಕರೆದೊಯ್ಯಲಿಲ್ಲ. “ನೀನು ಅಲ್ಲಿರುವುದೂ ಒಂದೇ, ಇಲ್ಲಿರುವುದೂ ಒಂದೇ. ಇವತ್ತು ಇಲ್ಲಿದ್ದೇನೆ, ನಾಳೆ ಇನ್ನೆಲ್ಲೋ? ಮಕ್ಕಳ ವಿದ್ಯಾಭ್ಯಾಸ ಹಾಳಾಗೋದು ಬೇಡ. ಅವರಿಗೋಸ್ಕರ ನೀನು ಅಲ್ಲೇ ಇರು’ ಅಂದರು. ಅವರು ಹೇಳುವುದೂ ಸರಿಯೇ. ಯಾಕಂದ್ರೆ, 24 ವರ್ಷದಿಂದ ಅವರು ಸೈನ್ಯದಲ್ಲಿದ್ದಾರೆ. ಕುಪ್ವಾರ, ಅಕನೂರ್, ರಾಜಸ್ಥಾನ, ಬಂಗಾಳ ಹೀಗೆ ಬೇರೆ ಬೇರೆ ಗಡಿಗಳಲ್ಲಿದ್ದು, ಸದ್ಯಕ್ಕೆ ಮಧ್ಯಪ್ರದೇಶದ ಟೆಕನ್‌ಪುರದಲ್ಲಿದ್ದಾರೆ. ನಾನು ಮಕ್ಕಳ ಜೊತೆ ಅಲ್ಲೆಲ್ಲಾ ಹೋಗೋಕೆ ಆಗೋದಿಲ್ಲ ಅಲ್ವಾ?
Advertisement
5. ಎಷ್ಟು ದಿನಕ್ಕೊಮ್ಮೆ ಫೋನ್ ಮಾಡುತ್ತಾರೆ? ಮಕ್ಕಳ ಜೊತೆ ಏನು ಮಾತಾಡ್ತಾರೆ?ಈಗ ಸಮಯ ಸಿಕ್ಕರೆ ದಿನಾ ಫೋನ್ ಮಾಡ್ತಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸ್ತಾರೆ. ಅಲ್ಲಿನ ಯಾವ ವಿಷಯವನ್ನೂ ನಮ್ಮ ಮುಂದೆ ಹೇಳುವುದಿಲ್ಲ. ಏನೇ ಕೇಳಿದ್ರೂ, “ಎಲ್ಲ ಆರಾಮೈತಿ, ನೀ ಯಾಕ್ ಚಿಂತಿ ಮಾಡ್ತೀ?’ ಅಂದುಬಿಡ್ತಾರೆ. ನಾನೂ ಇಲ್ಲಿನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. ಆದರೂ, ಭಯ-ಆತಂಕವನ್ನು ಸದಾ ಎದೆಯೊಳಗಿಟ್ಟುಕೊಂಡೇ ಅವರು ಅಲ್ಲಿ, ನಾವು ಇಲ್ಲಿ ಬದುಕುತ್ತಿದ್ದೇವೆ. 6. ಯಜಮಾನರ ವಾರ್ಷಿಕ ರಜೆಗಳು ಹೇಗಿರುತ್ತವೆ?
ಅವರಿಗೆ ವರ್ಷಕ್ಕೆ 40-45 ದಿನ ರಜೆ ಸಿಗುತ್ತೆ. ಆದರೆ, ಬೇಕು ಅಂದಾಗೆಲ್ಲ ರಜೆ ಕೊಡೋದಿಲ್ಲ. ಅವರು ಮನೆಗೆ ಬಂದಾಗ ನಮಗೆ ಹಬ್ಬವೇ ಹಬ್ಬ. ಅವರಿಗಿಷ್ಟವಾದ ಅಡುಗೆ ಮಾಡೋದು, ನೆಂಟರ ಮನೆಗೆ ಹೋಗೋದು, ಅವರ ಗೆಳೆಯರನ್ನ ಮನೆಗೆ ಕರೆಯೋದು… ಹೀಗೆ ರಜೆ ಮುಗಿದಿದ್ದೇ ಗೊತ್ತಾಗೋದಿಲ್ಲ. ಅವರು ಹೊರಡೋಕೆ ಒಂದು ವಾರ ಇದೆ ಅನ್ನೋವಾಗಲೇ ನನಗೆ ಅಳು ಶುರುವಾಗುತ್ತದೆ. ದೇವರೇ, ಆ ದಿನ ಬರೋದೇ ಬೇಡ ಅಂತ ಬೇಡಿಕೊಳ್ತೇನೆ. ಅವರು ಬಂದು ಹೋದ ಮೇಲೆ ಇಡೀ ಮನೆ ಬಿಕೋ ಅನ್ನುತ್ತೆ. ಆ ದುಃಖದಿಂದ ಹೊರಗೆ ಬರೋಕೆ ನನಗೆ ಸುಮಾರು ದಿನ ಬೇಕಾಗುತ್ತದೆ.
ಅವರ ಜೊತೆ ಪ್ರವಾಸ ಅಂತೆಲ್ಲಾ ನಾವು ಹೋಗೇ ಇಲ್ಲ. ಅವರು ಬಂದಾಗ ಮಕ್ಕಳಿಗೆ ರಜೆ ಇರೋದಿಲ್ಲ, ಮಕ್ಕಳಿಗೆ ರಜೆ ಇದ್ದಾಗ ಅವರು ಅಲ್ಲಿರುತ್ತಾರೆ. ಹಿಂದೊಮ್ಮೆ ಸವದತ್ತಿ ದೇವಸ್ಥಾನಕ್ಕೆ ಹೋಗಿದ್ದೆವು ಅಷ್ಟೇ. ಅದೊಂದೇ ಪಿಕ್‌ನಿಕ್ ನೆನಪಿನಲ್ಲಿರುವುದು. ನಾನೊಬ್ಬಳೇ ಎಲ್ಲಿಗೂ ಹೋಗೋದಿಲ್ಲ. ನೆಂಟರ ಮದುವೆ, ಹಬ್ಬ ಕೂಡ ಅವರಿಲ್ಲದೆ ಸಪ್ಪೆ ಅನ್ನಿಸುತ್ತೆ. 8. ವಾಪಸ್ ಹೊರಟು ನಿಂತಾಗ ಅವರು ಏನು ಹೇಳ್ತಾರೆ?
ಮೊದಲೆಲ್ಲ ನಾನು, ಮಕ್ಕಳು ಅವರನ್ನು ಕಳಿಸಲು ಸ್ಟೇಷನ್‌ವರೆಗೆ ಹೋಗುತ್ತಿದ್ದೆವು. ದಾರಿಯುದ್ದಕ್ಕೂ ಅಳುತ್ತಿದ್ದ ನಮ್ಮನ್ನು ನೋಡಿ, ಅವರಿಗೆ ಹೆಜ್ಜೆ ಮುಂದಿಡೋಕೇ ಆಗ್ತಾ ಇರಲಿಲ್ಲ. ಅದಕ್ಕೇ ಈಗ ಸ್ಟೇಷನ್‌ಗೆ ಕಳಿಸೋಕೆ ಬರುತ್ತೇವೆ ಅಂದರೂ, ಬೇಡ ಅಂತಾರೆ. “ನನ್ನ ಡ್ನೂಟಿ ಇರೋದೇ ಹೀಗೆ. ನೀನು ಅಳ್ತಾ ಇದ್ರೆ ನಾನಲ್ಲಿ ಕೆಲಸ ಮಾಡೋಕೆ ಆಗುತ್ತಾ? ನನ್ನ ಬಗ್ಗೆ ಚಿಂತೆ ಮಾಡಬೇಡ. ಮಕ್ಕಳ ಕಡೆ ಗಮನ ಕೊಡು, ದೇವರ ಧ್ಯಾನ ಮಾಡು’ ಅಂತ ಸಮಾಧಾನ ಮಾಡ್ತಾರೆ. 9. ಮಕ್ಕಳು ಏನು ಓದುತ್ತಿದ್ದಾರೆ? ಅವರು ಅಪ್ಪನನ್ನು ಮಿಸ್ ಮಾಡಿಕೊಳ್ತಾರ?
ನಮಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಆದಿತ್ಯ 9ನೇ ತರಗತಿ, ರಿತೇಶ್ 6ನೇ ತರಗತಿ ಓದುತ್ತಿದ್ದಾರೆ. ಶಾಲೆಯ ಫಂಕ್ಷನ್, ಪೇರೆಂಟ್ಸ್ ಮೀಟಿಂಗ್‌ಗೆ ಗೆಳೆಯರ ಅಪ್ಪಂದಿರು ಬಂದಾಗ ಇವರಿಗೆ ಬೇಜಾರಾಗುತ್ತೆ. ದೊಡ್ಡವನು ಬೆಳಗ್ಗೆ ಟ್ಯೂಷನ್‌ಗೆ ಹೋಗುತ್ತಾನೆ. ಗೆಳೆಯರನ್ನು ಬಿಡೋಕೆ ಅವರ ಅಪ್ಪಂದಿರು ಬಂದಿರುತ್ತಾರಂತೆ. ಇವನು ಒಬ್ಬನೇ ಹೋಗ್ತಾನೆ. ಮೊನ್ನೆ, “ಪಪ್ಪ ನಮ್ಮ ಜೊತೆನೇ ಇರಬೇಕಿತ್ತು’ ಅಂತಿದ್ದ. ಆದರೆ, ಅಪ್ಪ ದೇಶ ಕಾಯುತ್ತಿದ್ದಾರೆ ಅನ್ನೋ ಹೆಮ್ಮೆಯೂ ಅವರಿಗಿದೆ. ನಮ್ಮ ಸರ್ ನೇಮ್ “ವಾಘ…’ ಅಂತಿದೆ. ಅದಕ್ಕೆ ಶಾಲೆಯಲ್ಲಿ ಎಲ್ರೂ, ನಿಮ್ಮ ಅಪ್ಪ ಬಾರ್ಡರ್‌ನಲ್ಲಿದ್ದಾರೆ. ನಿಮ್ಮ ಹೆಸರಿನಲ್ಲೇ ಬಾರ್ಡರ್ ಇದೆ ಅಂತ ಜೋಕ್ ಮಾಡ್ತಾರಂತೆ. ಆಗ ಇವರಿಗೆ ಬಹಳ ಖುಷಿಯಾಗುತ್ತೆ. 10. ಗಡಿ ವಿವಾದ, ಯುದ್ಧ, ಬಾಂಬ್ ಸ್ಫೋಟದ ಬಗ್ಗೆ ಕೇಳಿದಾಗ ಏನನ್ನಿಸುತ್ತದೆ?
ತುಂಬಾ ಭಯವಾಗುತ್ತೆ. ಹನುಮಂತಪ್ಪ ಕೊಪ್ಪದ ಹುತಾತ್ಮರಾದ ಸುದ್ದಿ ಕೇಳಿ ನಾನು ಜೋರಾಗಿ ಅತ್ತುಬಿಟ್ಟಿದ್ದೆ. ಕುಪ್ವಾರದಲ್ಲಿ ಒಮ್ಮೆ ಫೈರಿಂಗ್ ಮಾಡುವಾಗ, ಅವರ ಹತ್ತಿರದಲ್ಲೇ ಗುಂಡು ಪಾಸ್ ಆಗಿ ಹೋಗಿತ್ತಂತೆ. ಅದನ್ನು ಅವರು ನನಗೆ ಹೇಳೇ ಇರಲಿಲ್ಲ. ಗೆಳೆಯರ ಜೊತೆ ಹೇಳುವಾಗ ನನ್ನ ಕಿವಿಗೆ ಬಿತ್ತು. ಆಗ ಜೀವವೇ ಹೋದ ಹಾಗಾಯ್ತು. ಯುದ್ಧ, ಬಾಂಬ್ ಅಂತ ಕೇಳಿದರೂ ಎದೆ ಹೊಡೆದುಕೊಳ್ಳುತ್ತದೆ. 11. ಗಂಡ, ನಿಮಗೆ ಕೊಟ್ಟ ನೆಚ್ಚಿನ ಉಡುಗೊರೆ ಯಾವುದು?
ಯಾವಾಗ ಅಂತ ಸರಿಯಾಗಿ ನೆನಪಿಲ್ಲ. ಮದುವೆಗೂ ಮುಂಚೆ ಇರಬೇಕು, ಒಂದು ಗೊಂಬೆ ಕೊಡಿಸಿದ್ದರು. ಒಂದು ಬಟನ್ ಒತ್ತಿದರೆ ಐ ಲವ್ ಯು ಅಂತ ಹೇಳುತ್ತಿತ್ತು. ಆ ಗೊಂಬೆ ತುಂಬಾ ಮುದ್ದಾಗಿತ್ತು. 12. ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ಅನ್ನಿಸುವ ಕ್ಷಣ ಯಾವುದು?
ನನ್ನ ಗಂಡ ದೇಶ ಕಾಯುತ್ತಿದ್ದಾನೆ ಅನ್ನುವುದಕ್ಕಿಂತ ಹೆಮ್ಮೆ ಬೇಕಾ? ನೋಡಿದವರು, ಅದು ಹೇಗೆ ಎಲ್ಲವನ್ನೂ ನೀನೊಬ್ಬಳೇ ನಿಭಾಯಿಸುತ್ತೀಯಾ ಅಂತ ಕೇಳಿದಾಗ, ನನ್ನ ಬಗ್ಗೆ ನನಗೇ ಹೆಮ್ಮೆಯಾಗುತ್ತದೆ. ಕೆಲವೊಮ್ಮೆ, ಯಜಮಾನರು ಇರಬೇಕಿತ್ತು ಅಂತನ್ನಿಸಿ ಅಳು ಬರುತ್ತದೆ. ಆದರೆ ಎಲ್ಲರೂ ಮನೆ, ಹೆಂಡತಿ, ಮಕ್ಕಳು ಅಂತ ಇಲ್ಲೇ ಉಳಿದುಕೊಂಡರೆ ದೇಶ ಕಾಯೋರು ಯಾರು? ನನ್ನ ಗಂಡ ಬರೀ ಮನೆಗಾಗಿ ದುಡಿಯಲಿ ಅನ್ನೋದು ಸ್ವಾರ್ಥ ಅಲ್ಲವಾ? 13. ಬದುಕಿನ ಕುರಿತು ನಿಮಗಿರುವ ಆಸೆ, ಕನಸುಗಳೇನು?
ಯಜಮಾನರು ಸೇವೆ ಮುಗಿಸಿ, ನಗುತ್ತಾ ಮನೆಗೆ ಬರಬೇಕು. ಅವರು ಎಲ್ಲೇ ಇದ್ದರೂ ಚೆನ್ನಾಗಿರಬೇಕು. ಎಲ್ಲ ಸೈನಿಕರನ್ನೂ ಆ ದೇವರು ಕಾಪಾಡಲಿ ಅಂತಷ್ಟೇ ಆಸೆ. 14.ಯೋಧನ ಪತ್ನಿಯಾಗಿ ನೀವು ಇತರೆ ಮಹಿಳೆಯರಿಗೆ ಯಾವ ಸಂದೇಶ ಕೊಡುತ್ತೀರಿ?
ಬದುಕಿನಲ್ಲಿ ಏನೇ ಬಂದರೂ ಹೆದರಬಾರದು. ಧೈರ್ಯ, ಆತ್ಮವಿಶ್ವಾಸವಿದ್ದರೆ ಯಾವುದೂ ಅಸಾಧ್ಯವಲ್ಲ. ರೊಟ್ಟಿ ಅಂದ್ರೆ ಪ್ರಾಣ!
ಅವರಿಗೆ ರೊಟ್ಟಿ- ಪಲ್ಯ ಅಂದ್ರೆ ತುಂಬಾ ಇಷ್ಟ. ಅಲ್ಲಿ ಗೋಧಿಯ ಪದಾರ್ಥಗಳನ್ನು ತಿಂದೂ ತಿಂದು ಬೇಜಾರಾಗಿರುತ್ತೆ. ಅವರಿದ್ದಾಗ ದಿನಾ ಹಬ್ಬದ ಅಡುಗೆ ಮಾಡ್ತೀನಿ. ವಾಪಸ್ ಹೊರಟಾಗ ಉಂಡೆ, ರೊಟ್ಟಿ, ಚಟ್ನಿಪುಡಿ ಮಾಡಿ ಕಳಿಸ್ತೀನಿ. ಐದಾರು ದಿನಕ್ಕೆಲ್ಲ ಅದು ಮುಗಿದು ಹೋಗುತ್ತೆ. ನಮಗೆ ಇಲ್ಲಿ ಅವರನ್ನು ಬಿಟ್ಟು ಊಟ ಮಾಡುವುದಕ್ಕೂ ಬೇಜಾರು. “ಅಯ್ಯೋ, ಅವರು ಊಟ ಮಾಡಿದ್ರೋ ಇಲ್ವೋ?’ ಅಂತ ಯೋಚನೆಯಾಗುತ್ತೆ. ಅವರು ಬಂದಾಗ, ನಮಗಾಗಿ ಉತ್ತರ ಭಾರತೀಯ ಶೈಲಿಯ ಅಡುಗೆ ಮಾಡ್ತಾರೆ. ಅಡುಗೆ ಕೆಲಸದಲ್ಲೂ ನನಗೆ ನೆರವಾಗ್ತಾರೆ. ನಾವು ಕಾಯ್ತಾ ಇದ್ದೇವೆ…
ಪ್ರತಿವರ್ಷ ಗಣಪತಿ ಹಬ್ಬಕ್ಕೆ ಬರುತ್ತಿದ್ದರು. ಆದರೆ ಈ ಸಲ, ಆಗೋದಿಲ್ಲ ಅಂತಿದ್ದಾರೆ. ಮನೆಯಲ್ಲಿ ಗಣಪತಿ ಇಡಬೇಕು ಅಂತ ಮಕ್ಕಳು ಆಸೆ ಪಡುತ್ತಿವೆ. ಅವರಿಲ್ಲದೆ ಹಬ್ಬ ಮಾಡೋದು ಹೇಗೆ? ಕಳೆದ ದೀಪಾವಳಿಗೂ ಅವರು ನಮ್ಮ ಜೊತೆ ಇರಲಿಲ್ಲ. ಅವರಿಲ್ಲದಿದ್ದರೆ ಹಬ್ಬ ಮಾಡೋದಕ್ಕೂ ಮನಸ್ಸಾಗುವುದಿಲ್ಲ. ಅದು ಗಂಡನ ಮನೆ!
ಯಜಮಾನರದ್ದು ಹಾಸ್ಯ ಸ್ವಭಾವ. ಯಾವಾಗ್ಲೂ ನಗ್ತಾ ನಗ್ತಾ ಇರುತ್ತಾರೆ. ಅವರು ಹೊರಟು ನಿಂತಾಗ ನಾನು ಅಳುತ್ತಿದ್ದರೆ, “ಬಾರ್ಡರ್ ನನಗೆ ಗಂಡನ ಮನೆ ಇದ್ದ ಹಾಗೆ. ತವರಿನಲ್ಲೇ ಎಷ್ಟು ದಿನಾಂತ ಇರಲಿ? ನನ್ನನ್ನು ಗಂಡನ ಮನೆಗೆ ಕಳಿಸಿಕೊಡು’ ಅಂತ ಹೇಳಿ ನಗಿಸ್ತಾರೆ. ಪಪ್ಪ ಇದ್ದಿದ್ರೆ…
ಮೊನ್ನೆ ಕಿರಿಯ ಮಗನಿಗೆ ಶಾಲೆಯಲ್ಲಿ ಹುಷಾರಿರಲಿಲ್ಲ. ಟೀಚರ್ ಫೋನ್ ಮಾಡಿ, ನೀವು ಬಂದು ಕರೆದುಕೊಂಡು ಹೋಗಿ ಅಂದರು. ನನಗೆ ಒಮ್ಮೆಲೆ ದಿಗಿಲಾಯ್ತು. 15 ನಿಮಿಷದೊಳಗೇ ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ. ಆಗ ಅವನು- “ಪಪ್ಪ ಇದ್ದಿದ್ರೆ ಗಾಡಿ ತಗೊಂಡು ಬಂದ ಕರೆದುಕೊಂಡು ಹೋಗ್ತಿದ್ರು ಅಲ್ವಾ?’ ಅಂದ. ಇಂಥ ತುರ್ತು ಪರಿಸ್ಥಿತಿ ಬಂದಾಗ, ಅವರು ಇಲ್ಲೇ ಇದ್ದಿದ್ದರೆ ಅನ್ನಿಸುತ್ತೆ. ಮಕ್ಕಳೇ ನನಗೆ ಬಾಡಿಗಾರ್ಡ್!
ಇಬ್ಬರು ಮಕ್ಕಳು ನನಗೆ ಬಾಡಿಗಾರ್ಡ್ ಇದ್ದಂತೆ. ನಾನು ಬೇಜಾರು ಮಾಡಿಕೊಂಡಿದ್ರೆ, “ಅಳಬ್ಯಾಡ ಮಮ್ಮಿ, ಪಪ್ಪ ಬರ್ತಾರ ಸುಮ್ಮನಿರು’ ಅಂತ ಸಮಾಧಾನ ಮಾಡ್ತಾರೆ. ಓದಿನಲ್ಲಿ, ನ್ಪೋರ್ಟ್ಸ್ನಲ್ಲಿ ಚುರುಕಾಗಿದ್ದಾರೆ. ದೊಡ್ಡವನು ಎರಡು ಗೋಲ್ ಹೊಡೆದು, ಫುಟ್‌ಬಾಲ್ ಮ್ಯಾಚ್ ಗೆಲ್ಲಿಸಿಕೊಟ್ಟಿದ್ದಾನೆ. ಟೂರ್ನಮೆಂಟ್‌ಗೆ ಕಳಿಸೋಕೆ ನನಗೇ ಭಯ. ನಾನೊಬ್ಬಳೇ ಇರೋದಲ್ವಾ? ಬಿದ್ದು ಪೆಟ್ಟು ಮಾಡಿಕೊಂಡುಬಿಟ್ಟರೆ ಅಂತ. ಪ್ರಿಯಾಂಕ ನಟಶೇಖರ್