Advertisement

ನನ್ನ ಪ್ರೀತಿಯ ಚೂಡಿ

06:00 AM Oct 24, 2018 | |

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌…

Advertisement

ದೇಶೀ ಸಂಸ್ಕೃತಿ ಎಂದ ಕೂಡಲೇ ನೆನಪಾಗುವುದು ಉಡುಗೆ-ತೊಡುಗೆ, ಸಂಪ್ರದಾಯ, ಆಚಾರ, ಆಚರಣೆಗಳು. ಅದರಲ್ಲೂ ನಾವು ಧರಿಸುವ ದಿರಿಸಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಕಾಲಕ್ಕೆ ತಕ್ಕಂತೆ ಉಡುಗೆ-ತೊಡುಗೆಗಳು ಬದಲಾಗುತ್ತಿರುತ್ತವೆ. ಆದರೆ, ಕೆಲವೊಂದು ಉಡುಗೆಗಳು ಯಾವತ್ತೂ ಹಳೇ ಫ್ಯಾಷನ್‌ ಆಗುವುದೇ ಇಲ್ಲ. ಸೀರೆ, ಕುರ್ತಾ, ಸಲ್ವಾರ್‌ ಕಮೀಜ್‌ನಂಥ ಉಡುಪುಗಳು ಸಾಂಪ್ರದಾಯಿಕ ಉಡುಪುಗಳೆಂದು ಕರೆಸಿಕೊಂಡರೂ, ಈಗಲೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. 

ಉತ್ತರಭಾರತದ ಮಹಿಳೆಯರ ಮೂಲಕ ಸೆಲ್ವಾರ್‌ ಕಮೀಜ್‌ ಹಾಗೂ ಕುರ್ತಾ ರೂಪದಲ್ಲಿ ಪ್ರಚಲಿತಕ್ಕೆ ಬಂದ ಚೂಡಿದಾರ್‌, ಕ್ರಮೇಣ ದಕ್ಷಿಣ ಭಾರತದ ಹೆಂಗಳೆಯರ ಮನ ಗೆದ್ದಿತು. ಇತ್ತೀಚೆಗೆ ಅತ್ಯಾಧುನಿಕ ಫ್ಯಾಷನ್‌ ಅಂಶಗಳನ್ನು ಹೊಂದಿದ ತರಹೇವಾರಿ ಚೂಡಿದಾರ್‌ಗಳು ಮಾರುಕಟ್ಟೆಗೆ ಬಂದಿವೆ. ಇವಲ್ಲದೆ, ಟಾಪ್‌, ಬಾಟಂ ಬಟ್ಟೆ, ದುಪ್ಪಟ್ಟಾಗಳಲ್ಲೂ ಹೊಸ ವಿನ್ಯಾಸದ ಟ್ರೆಂಡ್‌ ಬರುತ್ತಲೇ ಇವೆ. ವಿವಿಧ ವಿನ್ಯಾಸದ ವರ್ಕ್‌ ಮತ್ತು ಡಿಸೈನ್‌ ಇರುವ ಚೂಡಿದಾರವನ್ನು ಯುವತಿಯರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಚೂಡಿದಾರ್‌, ಕುರ್ತಾಟಾಪ್‌ಗ್ಳನ್ನು ಪಟಿಯಾಲ, ಲೆಗ್ಗಿನ್ಸ್‌ ಹಾಗೂ ಜೀನ್ಸ್‌ ಪ್ಯಾಂಟ್‌ ಮೇಲೂ ಧರಿಸಬಹುದು. ಯುವತಿಯರು, ಮಹಿಳೆಯರಷ್ಟೇ ಅಲ್ಲದೆ, ವಯಸ್ಸಾದ ಹಿರಿಯರೂ ಚೂಡಿದಾರವನ್ನು ಸರಳ, ಸುಂದರ, ಆರಾಮದಾಯಕ ಉಡುಗೆ ಎಂದು ಒಪ್ಪಿಕೊಂಡಿದ್ದಾರೆ. 

ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಮವಸ್ತ್ರ, ಸ್ಕರ್ಟ್‌ನಿಂದ ಚೂಡಿದಾರಕ್ಕೆ ಮಾರ್ಪಾಡಾಗಿರುವುದು ಉತ್ತಮ ಬೆಳವಣಿಗೆ. ಸ್ಕರ್ಟ್‌ಗಿಂತ ಹೆಚ್ಚು ಕಂಫ‌ರ್ಟ್‌ ನೀಡುವ, ಇಡೀ ದೇಹವನ್ನು ಸರಿಯಾಗಿ ಕವರ್‌ ಮಾಡುವ ಈ ಉಡುಪು, ಶಾಲೆ-ಕಾಲೇಜಿನಲ್ಲಿ ಧರಿಸಲು ಸುರಕ್ಷ ಭಾವವನ್ನು ನೀಡುತ್ತದೆ. 

ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಇತ್ತೀಚೆಗೆ, ಶಾಲಾ ಕಾಲೇಜಿನ ಶಿಕ್ಷಕಿಯರಿಗೆ ಸಭ್ಯ ಉಡುಗೆ ತೊಡಲು ಸ್ವತಂತ್ರರು ಎಂಬ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಇದರನ್ವಯ, ಕೆಲ ಶಾಲೆಗಳಲ್ಲಿ ಸಾಂಪ್ರದಾಯಿಕ ಶೈಲಿಯ ಚೂಡಿದಾರ್‌ ಹಾಗೂ ಕುರ್ತಾ ಧರಿಸುವುದನ್ನು ಕಾಣಬಹುದು. ನೌಕರಸ್ಥರಿಗೆ ಇದೊಂದು ವರದಾನವೇ ಆಗಿದೆ. ಆರಾಮದಾಯಕ ಅಲ್ಲದೆ, ಆಗಾಗ ಸೆರಗು, ನೆರಿಗೆ ಸರಿಪಡಿಸುವ ಸಂಕಷ್ಟದಿಂದ ಹೆಣ್ಣಮಕ್ಕಳು ಪಾರಾಗಿದ್ದಾರೆಂದು ಹೇಳಬಹುದು. ಒಂದೆಡೆ ಬೆಳಗ್ಗಿನ ಧಾವಂತದದಲ್ಲಿ ಮಕ್ಕಳನ್ನೂ ರೆಡಿ ಮಾಡಿ, ತಾವೂ ತಯಾರಾಗಿ ಹೊರಡುವುದರೊಳಗೆ ಸಮಯ ಮೀರಿ ಹೋಗುತ್ತದೆ. ಇನ್ನು ಸೀರೆ ಉಡಲು ಕನಿಷ್ಠಪಕ್ಷ$ ಅರ್ಧ ಗಂಟೆಯಾದರೂ ಬೇಕು. ಆದರೆ, ಚೂಡಿದಾರ ಧರಿಸಲು ಸರಳ, ಸುಲಭ. ಬಹಳ ಬೇಗ ರೆಡಿಯಾಗಿ, ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಸಾಧ್ಯವೆನ್ನುತ್ತಾರೆ ಶಿಕ್ಷಕಿಯರು.

Advertisement

ಗೃಹಿಣಿಯರಿಗೂ ಅಚ್ಚುಮೆಚ್ಚು
ದಪ್ಪಗಿರಲಿ, ತೆಳ್ಳಗಿರಲಿ ಎಲ್ಲರಿಗೂ ಒಪ್ಪುವ, ಒಗ್ಗುವ ಉಡುಪು ಇದಾಗಿದೆ. ಹೊರಗೆ ಕೆಲಸಕಾರ್ಯಗಳಿಗೆ  ಹೋಗಬೇಕೆಂದಿದ್ದರೆ ಸ್ವತಂತ್ರವಾಗಿ, ಕಿರಿಕಿರಿ ಇಲ್ಲದೆ ಆರಾಮಾಗಿ ಓಡಾಡುವುದಕ್ಕೆ ಎಲ್ಲರಿಗೂ ಸರಿ ಹೊಂದುವುದಲ್ಲದೆ, ಒಂದೆರಡು ಲೆಗ್ಗಿನ್ಸ್‌ ತೆಗೆದುಕೊಂಡರೆ ಸಾಮಾನ್ಯವಾಗಿ ಎಲ್ಲಾ ಟಾಪ್‌ಗ್ಳಿಗೂ ಮ್ಯಾಚ್‌ ಆಗುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಅವರವರ ವಯೋಮಾನಕ್ಕೆ ತಕ್ಕಂಥ ರೆಡಿಮೇಡ್‌ ಟಾಪ್‌ ಹಾಗೂ ಪ್ಯಾಂಟ್‌ಗಳು ಸುಲಭ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುವುದರಿಂದ ಎಲ್ಲರಿಗೂ ಅನುಕೂಲಕರ.

ಒಟ್ಟಿನಲ್ಲಿ, ಸಾರ್ವಕಾಲಿಕ ಉಡುಪಾಗಿರುವ ಚೂಡಿದಾರ್‌ ಎಲ್ಲರಿಗೂ ಪ್ರಿಯವೇ. ಇದರ ವಿಸ್ತಾರ ಹೇಗಿದೆಯೆಂದರೆ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮದುಮಗ ಹಾಗೂ ಯುವಕರು, ಗಂಡಸರು  ಧರಿಸುವ ಕುರ್ತಾ, ಶೇರ್ವಾನಿ, ಜುಬಾr, ಪೈಜಾಮಗಳು ಗ್ರ್ಯಾಂಡ್‌ ಲುಕ್‌ ನೀಡುವಲ್ಲಿ ತನ್ನ ಛಾಪನ್ನು ಎತ್ತಿ ಹಿಡಿದಿವೆ. 

ಇಂದಿರಾ ಪಿ.

Advertisement

Udayavani is now on Telegram. Click here to join our channel and stay updated with the latest news.

Next