ಬೆಂಗಳೂರಿಗೆ ಬಂದ ಹೊಸತರಲ್ಲಿ ಅರ್ಜೆಂಟಿಗೆ ಸಿಕ್ಕ ಪಿ.ಜಿಯೊಂದರಲ್ಲಿ ರೂಮು ಹಿಡಿದಿದ್ದೆ. ಆಮೇಲೆ ಗೆಳತಿಯೊಬ್ಬಳು ಅವಳ ಪಿ.ಜಿ ಚೆನ್ನಾಗಿದೆಯೆಂದೂ ಒಂದು ಬೆಡ್ ಖಾಲಿ ಇದೆ ಎಂದೂ ಹೇಳಿದ ಮೇಲೆ ಅವಳ ಪಿ.ಜಿ ಗೆ ಶಿಫ್ಟ್ ಆಗುವ ನಿರ್ಧಾರ ಮಾಡಿದೆ. ಹಳೆಯ ಪಿ.ಜಿ ಆಂಟಿಯ ಬಳಿ ಈ ವಿಚಾರ ಹೇಳಿದಾಗ ಅವರು ಸಿಡುಕಿನಿಂದಲೇ ಹೂಂಗುಟ್ಟಿದ್ದರು. ಅದರ ಹಿಂದೆಯೆ ಏನೇನೋ ತಕರಾರು ತೆಗೆದು ಅಡ್ವಾನ್ಸ್ ಹಣದಲ್ಲಿ ಒಂದಷ್ಟನ್ನು ಮುರಿದುಕೊಂಡು ದುಸುದುಸು ಅನ್ನುತ್ತಲೇ ಉಲಿದ ಹಣ ಮರಳಿಸಿದರು.
ನಾನು ಜಾಸ್ತಿ ತಲೆ ಕೆಡಿಸಿಕೊಳ್ಳದೆ ಹೇಗೋ ಒಳ್ಳೆ ಪಿ.ಜಿಗೆ ಹೋಗ್ತಿದ್ದೀನಲ್ಲ ಅಂತ ಸಮಾಧಾನ ಪಟ್ಟುಕೊಂಡು ಲಗೇಜುಗಳನ್ನು ಪ್ಯಾಕ್ ಮಾಡಿ ಆಟೋ ಹಿಡಿದೆ. ಗೆಳತಿಯ ಪಿ.ಜಿಯ ವಿಳಾಸ ಗೊತ್ತಿರಲಿಲ್ಲ. ಆದರೆ ಆಕೆ ಇಂದಿರಾನಗರದಲ್ಲಿದ್ದಾಳೆ ಅಂತ ಮಾತ್ರ ಗೊತ್ತಿತ್ತು. ವಿಳಾಸ ತಿಳಿದುಕೊಳ್ಳಲು ಆಟೋದಿಂದಲೇ ಗೆಳತಿಗೆ ಫೋನು ಹಚ್ಚಿದೆ. ಅವಳು ಪಿಕ್ ಮಾಡಲಿಲ್ಲ. ಎಷ್ಟು ಸಲ ಕಾಲ್ ಮಾಡಿದರೂ ಪಿಕ್ ಮಾಡಲಿಲ್ಲ. ಈಗೇನಪ್ಪಾ ಮಾಡೋದು ಅಂತ ಚಿಂತೆಯಾಯಿತು.
ಆಂಟಿಯೊಂದಿಗಿನ ಮುನಿಸಿನಿಂದಾಗಿ ಹಳೆ ಪಿ.ಜಿಗಂತೂ ವಾಪಸ್ ಹೋಗಲು ಆಗಲ್ಲ. ದಿಕ್ಕು ಕಾಣದ ಪರದೇಸಿಯಂತಾಗಿತ್ತು ನನ್ನ ಸ್ಥಿತಿ. ಆಟೋ ಡ್ರೈವರ್‌ಗೆ, ನಾನು ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿರೋದು ಗೊತ್ತಾಗಿಬಿಡು¤. ಅವರಲ್ಲಿ ನನ್ನ ಸಮಸ್ಯೆ ತೋಡಿಕೊಂಡೆ. ಪಾಪ ಅವರು “ಮೇಡಂ ಹುಡುಕೋಣ ಬನ್ನಿ’ ಅಂತ ಧೈರ್ಯ ಹೇಳಿ ಬೀದಿ ಬೀದಿ ಸುತ್ತುತ್ತಾ, ಅಂಗಡಿಗಳಲ್ಲಿ ವಿಚಾರಿಸುತ್ತಾ ಸುಮಾರು ಒಂದೂವರೆ ಗಂಟೆಗಳ ಕಾಲ ಪಿ.ಜಿ ಶೋಧ ನಡೆಸಿದರು.
ಆದರೆ ನಮ್ಮ ಬೆಂಗಳೂರಿನಲ್ಲಿ ಗೊತ್ತಿರೋ ವಿಳಾಸ ಹುಡುಕೋದೇ ತುಂಬಾ ಕಷ್ಟ, ಅಂಥದ್ದರಲ್ಲಿ ಗೊತ್ತಿಲ್ಲದೇ ಇರೋ ವಿಳಾಸ ಹುಡುಕೋ ಕೆಲಸದಲ್ಲಿ ನಾವಿಬ್ಬರೂ ತೊಡಗಿದ್ದೆವು! ಹಾಗೇ ಸುತ್ತುತ್ತಾ ಸುತ್ತುತ್ತಾ ಒಂದು ಕ್ರಾಸ್ ಬಳಿ ನಿಂತೆವು. ಅಲ್ಲೊಂದು ಪಿ.ಜಿಯ ಬೋರ್ಡಿತ್ತು. ನಾನಂತೂ ಆಸೆ ಬಿಟ್ಟಿದ್ದೆ. ಡ್ರೈವರ್ ಅದೇ ಪಿ.ಜಿ. ಇರಬಹುದಾ ಅಂತ ತಿಳಿಯಲು ಇಳಿದರು. ಅಷ್ಟರಲ್ಲಿ ಇಬ್ಬರು ಹುಡುಗಿಯರು ಅದೇ ದಾರಿಯಲ್ಲಿ ಬರೋದು ಕಂಡಿತು. ಯಾರೆಂದು ನೋಡಿದರೆ ನನ್ನ ಗೆಳತಿ ತನ್ನ ರೂಮ್‌ಮೇಟ್ ಜೊತೆ ಬರುತ್ತಿದ್ದಳು.
ಆಮೇಲೆ ಗೊತ್ತಾಗಿದ್ದೇನೆಂದರೆ. ಆ ದಿನ ಬೆಳಗ್ಗೆ ಅವಳ ಮೊಬೈಲು ಕೆಳಕ್ಕೆ ಬಿದ್ದು ಕೈಕೊಟ್ಟಿತ್ತು. ಅದರಿಂದಾಗಿ ಕಾಲ್ ಹೋಗುತ್ತಿದ್ದರೂ ರಿಸೀವ್ ಮಾಡಲು ಆಗುತ್ತಿರಲಿಲ್ಲ. ಕಡೆಗೆ ಅವಳು ನನ್ನ ಪಿ.ಜಿಗೇ ಬಂದು ಕರೆದುಕೊಂಡು ಬರೋಣ ಅಂತ ಆಟೋ ಹಿಡಿಯಲೆಂದು ಬರ್ತಾ ಇದ್ದಳು. ಅಷ್ಟರೊಳಗೆ ನಾನೇ ಅಲ್ಲಿಗೆ ಬಂದುಬಿಟ್ಟಿದ್ದೆ. ಗೆಳತಿಯನ್ನು ಕಂಡ ಮೇಲೆ ನನಗೆ ಹೋದ ಜೀವ ಬಂದಂತಾಯಿತು.
ಒಂದುವೇಳೆ ಆ ದಿನ ನನಗೆ ಅವಳ ಪಿ.ಜಿ ಸಿಗದೇ ಇರುತ್ತಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಂಡರೇ ಭಯವಾಗುತ್ತೆ. ಆಟೋ ಡ್ರೈವರ್ “ಮೇಡಂ ಬೆಂಗ್ಳೂರಲ್ಲಿ ಎಲ್ರೂ ಒಳ್ಳೆಯವರಾಗಿರೋಲ್ಲ. ಅದು ಹೇಗೆ ಯಾವ ಗ್ಯಾರೆಂಟೀನೂ ಇಲೆª, ಇಷ್ಟು ದಿನ ಇದ್ದ ಪಿ.ಜಿಯನ್ನು ಬಿಟ್ಟು ಬಂದ್ರಿ?!’ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಂತೆ. ಆ ಮಾರ್ದವತೆಯಿಂದಲೇ ಅವರು ಸಹಾಯ ಮಾಡಿದ್ದು ಅಂತ ಗೊತ್ತಾಯ್ತು. ಅವರಿಗೆ ಒಂದು ಥ್ಯಾಂಕ್ಸ್ ಹೇಳಿ ಬೀಳ್ಕೊಟ್ಟೆ.
* ಪ್ರಿಯಂವದಾ, ಐಟಿ ಉದ್ಯೋಗಿ