ಕೃಷ್ಣಾ ಪೂನಿಯಾ ಡಿಸ್ಕಸ್ ಥ್ರೋ ಕ್ರೀಡಾಪಟು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ. ಇತ್ತೀಚೆಗೆ ರಾಜಕೀಯಕ್ಕೂ ಪ್ರವೇಶಿಸಿದ್ದಾರೆ. ಸದ್ಯಕ್ಕೀಗ ರಾಜಸ್ತಾನದೆಲ್ಲೆಡೆ ಆಕೆಯ ಹೀರೋಯಿಸಂದೇ ಮಾತು. ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ?
ಆ ದಿನ ಕೃಷ್ಣಾ ರಾಜಸ್ತಾನ ಚುರು ಜಿಲ್ಲಾಕೇಂದ್ರದಲ್ಲಿ ನ್ಪೋಟ್ಸ್ ಮುಗಿಸಿಕೊಂಡು ಬಂದವರು ಕಾರ್‌ಗಾಗಿ ಕಾಯುತ್ತಿದ್ದರು.
ಅಷ್ಟರಲ್ಲಿ ಕಿರಿಚಾಟ ಕೇಳಿದಂತಾಯ್ತು. ನೋಡಿದರೆ ಮೂವರು ದಾಂಡಿಗರು ಟೀನೇಜ್ ಹುಡುಗಿಯರನ್ನ ಎಳೆದಾಡುತ್ತಿದ್ದದ್ದು ಕಾಣಿಸಿತು. ಅಷ್ಟೊತ್ತಿಗೆ ಸರಿಯಾಗಿ ಈಕೆಯ ಕಾರೂ ಬಂತು. ತಾನೇ ಡ್ರೈವರ್ ಸೀಟ್‌ನಲ್ಲಿ ಕೂತು ಆ ಹುಡುಗರಿದ್ದ ಕಡೆ ಕಾರು ಚಲಾಯಿಸಿದರು ಕೃಷ್ಣಾ. ಆರಡಿ ಒಂದಿಂಚು ಉದ್ದದ ಈಕೆಯನ್ನು ಕಂಡಿದ್ದೇ ಆ ಹುಡುಗರು ಹುಡುಗಿಯರನ್ನು ಬಿಟ್ಟು ಬೈಕ್‌ನ್ನು ಫಾಸ್ಟಾಗಿ ಮೂವ್ ಮಾಡಿ ತಪ್ಪಿಸಿಕೊಳ್ಳಲು ನೋಡಿದರು. ಅವರನ್ನು ಹಿಂಬಾಲಿಸಿದ ಕೃಷ್ಣಾ ಗ್ಲಾಸ್ ಹೊರಗೆ ಕೈಚಾಚಿ ಒಬ್ಬ ಒಬ್ಬನನ್ನು ಕೆಳಗೆ ಬೀಳಿಸಿದರು. ಇಷ್ಟರಲ್ಲಾಗಲೇ ಅಲ್ಲಿ ಜನ ಗುಂಪು ಕೂಡಲಾರಂಭಿಸಿದ್ದರು. ಆ ಇಬ್ಬರ ಬೈಕರ್‌ಗಳೂ ಸಿಕ್ಕಿಬಿದ್ದರು. ಮೂವರನ್ನೂ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಿಸಲಾಯಿತು. ಜನ ಕೃಷ್ಣಾ ಹೀರೋಯಿಸಮ್ಮನ್ನ ಪ್ರಶಂಸಿಸಿದರು.
” ಆ ದಾಂಢಿಗರ ಕೈಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಆ ಹುಡುಗಿಯರನ್ನು ನೋಡಿದಾಗ ನನ್ನ ಮಕ್ಕಳನ್ನೇ ಕಂಡಹಾಗಾಯ್ತು. ರೌಡಿಗಳನ್ನು ಹಿಂಬಾಲಿಸಲು ಇದೇ ಪ್ರೇರಣೆ’ ಎನ್ನುತ್ತಾರೆ ಕೃಷ್ಣಾ.
ಇದಾಗಿ ಆ ಹುಡುಗಿಯರ ಜೊತೆಗೆ ಪೊಲೀಸ್ ಸ್ಟೇಶನ್‌ಗೆ ಹೋದ ಕೃಷ್ಣಾ ಅವರ ವಿರುದ್ಧ ಕಂಪ್ಲೇಂಟ್ ದಾಖಲಿಸಿದರು. ಹುಡುಗಿಯರನ್ನು ಸೇಫಾಗಿ ಮನೆಗೆ ಕಳುಹಿಸಿದ ಬಳಿಕವೇ ಅವರು ಅಲ್ಲಿಂದ ಹೊರಟಿದ್ದು.
“ನಮ್ಮಲ್ಲಿ ಹೆಣ್ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ಬೆಳೆಸುತ್ತಾರೆ. ಇದರಿಂದಾಗಿ ಇಂಥ ಸನ್ನಿವೇಶಗಳಲ್ಲಿ ಅವರು ಅಸಹಾಯಕರಾಗಿ ಬಿಡುತ್ತಾರೆ. ನಮ್ಮ ಮನೆ ಹೆಣ್ಣು ಮಕ್ಕಳನ್ನು ಸ್ವಲ್ಪ ಸ್ಟ್ರಾಂಗ್ ಆಗಿ ಬೆಳೆಸೋಣ, ದೈಹಿಕತೆವಾಗಿ ಅಲ್ಲದಿದ್ದರೂ ಮಾನಸಿಕವಾಗಿಯಾದರೂ ಗಟ್ಟಿಗೊಳಿಸೋಣ’ ಅನ್ನುತ್ತಾರೆ ಕೃಷ್ಣಾ.
ಕೃಷ್ಣಾ ಮಾತನ್ನ ಎಲ್ಲರೂ ಒಪ್ಪುತ್ತಾರೆ, ಒಪ್ಪಲೇ ಬೇಕಾದ ಅನಿವಾರ್ಯತೆಯೂ ಇದೆ.