ಚನ್ನಪಟ್ಟಣ: “ಪ್ರಚಾರದ ಕೊನೆಯ ದಿನ ಬೃಹತ್ ಪ್ರಮಾಣದಲ್ಲಿ ಜನರು ಸೇರಿದ್ದನ್ನು ನೋಡಿ ಸಂತೋಷವಾಗಿದೆ. ನನ್ನ ಜನ್ಮ ಸಾರ್ಥಕವಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾವುಕರಾಗಿ ಹೇಳಿದರು. ಸೋಮವಾರ ಚನ್ನಪಟ್ಟಣ ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಏನೂ ತಪ್ಪಿಲ್ಲದಿದ್ದರೂ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಅಷ್ಟೇ ಅಲ್ಲದೆ, 2019ರಲ್ಲಿ ಸುಗಮವಾಗಿ ಸಾಗುತ್ತಿದ್ದ ನನ್ನ ಸರಕಾರವನ್ನೂ ಬೀಳಿಸಿದ್ದರು. ಹೀಗೆ ನನಗೆ ತುಂಬಾ ನೋವು ಕೊಟ್ಟಿದ್ದರು. ಆದರೆ ನಿಮ್ಮನ್ನೆಲ್ಲರನ್ನೂ ನೋಡಿ ನನಗೆ ಆನಂದ ಭಾಷ್ಪ ಬರುತ್ತಿದೆ’ ಎಂದು ಭಾವುಕರಾದರು.
ನಾನು ಸಿಎಂ ಆದರೂ ಬಿಡದಿಯ ಕೇತಗಾನಹಳ್ಳಿ ಯಲ್ಲಿಯೇ ಇರುತ್ತೇನೆ. ಮೈಸೂರು ಭಾಗದ ಜನ ಏನೇ ಕಷ್ಟ ಇದ್ದರೂ ಮನೆ ಬಳಿ ಬನ್ನಿ, ಪೊಲೀಸರು ತಡೆಯುವುದಿಲ್ಲ ಎಂದು ಮನವಿ ಮಾಡಿದರು.
ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿ.ಪಿ. ಯೋಗೇಶ್ವರ್ ಹೆಸರು ಪ್ರಸ್ತಾವಿಸದೆ ಟಾಂಗ್ ನೀಡಿದರು. ಇದೊಂದು ಪಾಪದ ಕೂಸು. ಅದನ್ನು ಹಾಗೆಯೇ ಬಿಟ್ಟಿದ್ದಾನೆ. ಸರಿಪಡಿಸುವ ವೇಳೆಗೆ ಸರಕಾರ ಹೋಯಿತು, ನಾನು ಅಧಿಕಾರಕ್ಕೆ ಬಂದ ಮೇಲೆ ಸರಿಪಡಿಸಿಯೇ ತೀರುತ್ತೇನೆ ಎಂದರು.
ಕಣ್ಣೀರಿಗೆ ಬೇರೆ ಬಣ್ಣ ಕಟ್ಟುತ್ತಾರೆ
ನಾನು ಕಣ್ಣೀರು ಹಾಕಿದರೆ ನನ್ನ ವಿರೋಧಿಗಳು ಬೇರೆ ಬಣ್ಣ ಕಟ್ಟುತ್ತಾರೆ. ಆದ್ದರಿಂದ ಎಷ್ಟೇ ನೋವಿದ್ದರೂ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇನೆ. ನಾನು ಕನಕಪುರಕ್ಕೂ ಹೋಗಬೇಕಿದೆ. ನೀವು ನಿಖೀಲ್ ಕುಮಾರಸ್ವಾಮಿಗೂ ಆಶೀರ್ವಾದ ಮಾಡಿ ಅಂತ ಸಂದೇಶ ಬಂದಿದೆ. ನಿಖೀಲ್ ಅವರನ್ನು ರಾಮನಗರ ಜನರ ಮಡಿಲಿಗೆ ಹಾಕಿದ್ದೇನೆ. ಅವರು ಯಾವತ್ತೂ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.