Advertisement

ನನಗಿದ್ದ ದೊಡ್ಡ ಗುರಿ , ತಿರುಪತಿ ದೇಗುಲದ ಪ್ರಧಾನ ಅರ್ಚಕ ಆಗುವುದು…

01:05 PM Apr 28, 2020 | mahesh |

ಊರಿನ ದೇವಸ್ಥಾನದ ಪೂಜೆಯ ಕೆಲಸವನ್ನು ನಾನೂ- ಅಣ್ಣನೂ ಶಿಫ್ಟ್ ಪ್ರಕಾರ ಮಾಡುತ್ತಿದ್ದೆವು. ಹೀಗಿದ್ದಾಗಲೇ, ಮತ್ತೆರಡು ದೇವಾಲಯಗಳಲ್ಲಿ ಪೂಜೆ ಮಾಡಲು ಆಹ್ವಾನ ಬಂತು…

Advertisement

ನನಗೆ ವಿದ್ಯಾಭ್ಯಾಸದ ಮೇಲೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಓದಲು, ಬರೆಯಲು ಬಂದರೆ ಸಾಕು. ಇನ್ನೊಬ್ಬರಿಂದ ಮೋಸ ಹೋಗದಷ್ಟು ವಿದ್ಯೆ ದಕ್ಕಿದರೆ ಸಾಕು ಅನ್ನುವುದಷ್ಟೇ ಮನಸಲ್ಲಿ ಇತ್ತು. 10ನೇ ತರಗತಿಯನ್ನು ಸೆಕೆಂಡ್‌ ಕ್ಲಾಸ್‌ನಲ್ಲಿ ಪಾಸಾಗಿದ್ದು, ನನ್ನ ಬದುಕಿನ ದೊಡ್ಡ ಯಶಸ್ಸು. ನಾನು, ನಮ್ಮ ಅಣ್ಣ, ಅಪ್ಪನಿಗೆ ಪೂಜೆಯಲ್ಲಿ ನೆರವಾಗುತ್ತಿದ್ದೆವು. ಅಪ್ಪ, ನಿತ್ಯವೂ ಮನೆಯಲ್ಲಿ ವೇದಪಾರಾಯಣ ಮಾಡೋರು. ಭಗವದ್ಗೀತೆ, ಮಂತ್ರಗಳ ಪಠಣ ನಡೆಯೋದು.

ಅವರು ಪೂಜೆಗೆ ನಿಂತರೆ, ದೇವರು ಕಣ್ಣು ಮುಂದೆ ಬರಬೇಕು; ಹಾಗೆ ಅಲಂಕಾರ ಮಾಡುತ್ತಿದ್ದರು. ಒಂದು ಸಲಕ್ಕೆ 10 ಕೆ.ಜಿ ಹೂವು ಬೇಕಿತ್ತು. ಹಾಗೇನೇ, ಎರಡು ಕೆ.ಜಿಯಲ್ಲೂ ಅಷ್ಟೇ ಸುಂದರವಾಗಿ ಅಲಂಕಾರ ಮಾಡೋರು. ಅವರು ಹೇಳುತ್ತಿದ್ದ ಮಂತ್ರಗಳು ಕಿವಿಯಲ್ಲೇ ಇರುತ್ತಿತ್ತು. ಆಗಾಗ, ಅವುಗಳನ್ನು ನಾಲಿಗೆಯ ಮೇಲೆ ಬಿಟ್ಟುಕೊಳ್ಳುತ್ತಿದ್ದೆ. ಊರಲ್ಲಿ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಸಂಕಷ್ಟ ಗಣಪತಿ ಪೂಜೆ ಮಾಡಿಸಲು ಅಪ್ಪನನ್ನು ಕರೆಯೋರು. ಆಗ ಅಪ್ಪ ನನ್ನನ್ನು ಕಳಿಸೋರು. ಅದಕ್ಕೂ ಮೊದಲು, ಹೀಗಿಗೆ ಮಾಡಿಸಬೇಕು ಕಣೋ ಅನ್ನೋರು. ಅಷ್ಟೇ ಪಾಠ. ಅಡ್ಡ್ ಏಟ್‌ ಮೇಲೆ ಗುಡ್‌ ಏಟು ಎಂಬಂತೆ, ನಾನು ಅಂದಾಜಿನ ಮೇಲೆ ಪೂಜೆ ಮಾಡಿಸುತ್ತಿದ್ದೆ. ಅದೇ ಪ್ರೊಫೆಷನ್‌ ಆಗೋಯ್ತು. ಅಪ್ಪನಿಗೆ ನನ್ನ ಮೇಲೆ ಒಂದು ಹಿಡಿ ಪ್ರೀತಿ ಜಾಸ್ತಿ ಇತ್ತು. ಹೀಗಾಗಿ, ಬೆಂಗಳೂರಿನ ಕರಣಿಕರ ಪಾಠಶಾಲೆಗೆ ನನ್ನ ಸೇರಿಸಿದರು.

ಒಂದಷ್ಟು ವರ್ಷ ಅಲ್ಲೇ
ವೇದಗಳನ್ನು ಶಾಸ್ತ್ರೋಕ್ತವಾಗಿ ಕಲಿತೆ. ಅಲ್ಲೇ ಸಂಬಂಧಿಕರ ಮನೆಯಲ್ಲಿ ಠಿಕಾಣಿ. ಅಲ್ಲೊಂದು ಆಂಜನೇಯ ಸ್ವಾಮಿ ದೇವಸ್ಥಾನ ಇತ್ತು. ಅಲ್ಲಿ ಪಾರ್ಟ್‌ ಟೈಂ ಪೂಜೆ ಮಾಡುತ್ತಿದ್ದೆ. ಹಣ ಅಂತ ನೋಡಿದ್ದೇ ಅಲ್ಲಿ. ಜೀವನದಲ್ಲಿ ನನಗಿದ್ದ ದೊಡ್ಡ ಗುರಿ ಅಂದರೆ, ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕನಾಗುವುದು. ನಾನು ಬೆಂಗಳೂರಿನಲ್ಲಿ ಓದುತ್ತಿರುವಾಗಲೇ, ತಿರುಪತಿಯ ಥರಹೇವಾರಿ ಕತೆಗಳು, ಅರ್ಚಕರ ಬದುಕಿನ ಆಡಂಬರ ಜೀವನ ಎಲ್ಲವೂ ತೆರೆದುಕೊಳ್ಳುತ್ತಾ ಹೋಯಿತು. ಹೀಗಾಗಿ, ಅದಕ್ಕೆ ಬೇಕಾದ ಅರ್ಹತೆ ಗಳಿಸಿಕೊಳ್ಳಲು ಬಹಳ ಪ್ರಯತ್ನಪಟ್ಟೆ. ಅಷ್ಟರಲ್ಲಿ, ಊರಲ್ಲಿದ್ದ ನಮ್ಮ ತಂದೆ ಮರಣ ಹೊಂದಿದರು.

ಅನಿವಾರ್ಯವಾಗಿ, ಅವರು ನೋಡಿಕೊಳ್ಳುತ್ತಿದ್ದ ದೇವಸ್ಥಾನದ ಜವಾಬ್ದಾರಿ ನನ್ನ ಮೇಲೆ ಬಿತ್ತು. ಬೆಳಗ್ಗೆ ಅಣ್ಣ, ಸಂಜೆ ನಾನು. ಶಿಫ್ಟ್ ನಲ್ಲಿ ಪೂಜೆಯ ಕೆಲಸ ಮಾಡುತ್ತಿದ್ದೆವು. ಅದೇ ವೇಳೆಗೆ ಮತ್ತೆರಡು ದೇವಸ್ಥಾನದಲ್ಲಿ ಪೂಜೆ ಮಾಡುವ ಅವಕಾಶ ದೊರೆಯಿತು. ಒಬ್ಬ ಸಹಾಯಕನನ್ನು ಜೊತೆಗಿಟ್ಟುಕೊಂಡೆ. ಕ್ರಮೇಣ, ಇಡೀ ಊರಿನಲ್ಲಿ ನನ್ನದೇ ಜಾಲ ಬೆಳೆಯಿತು. ಒಂದಷ್ಟು ಜನರ ಪಾಲಿಗೆ ನನ್ನ ಮಾತೇ ವೇದವಾಕ್ಯವಾಯಿತು. ಸಚಿವರು, ಶಾಸಕರು ಹತ್ತಿರವಾಗುತ್ತಾ ಹೋದರು. ಅವರು ಏನೇ ಮಾಡಿದರೂ ನನ್ನನ್ನು ಕೇಳಿಯೇ ಮುಂದುವರಿಯುತ್ತಿದ್ದರು.

Advertisement

ಈಗ ನಾನು 10 ಜನಕ್ಕೆ ಉದ್ಯೋಗ ಕೊಟ್ಟಿದ್ದೇನೆ. ಲಕ್ಷಾಂತರ ರೂ. ಖರ್ಚು ಮಾಡಿ, ವರ್ಷಕ್ಕೆ ನಾಲ್ಕು ರಥೋತ್ಸವ ನಡೆಸುತ್ತೇನೆ. ನಾಲ್ಕು ಮನೆ ಕಟ್ಟಿಸಿದ್ದೇನೆ. ಮೂರರಿಂದ ಬಾಡಿಗೆ ಬರುತ್ತದೆ. ಆದರೆ, ತಿರುಪತಿಯ ದೇವಾಲಯದ ಅರ್ಚಕನಾಗುವ ಕನಸು ಹಾಗೇ ಇದೆ ಆದರೂ, ಇದೇ ನನಗೆ ಪರ್ಫೆಕ್ಟ್ ಪ್ರೊಫೆಷನ್‌ ಅನ್ನೋ ಸತ್ಯ ತಿಳಿದಿದೆ.

ಅಂಬಿ ನಾಯರ್‌, ಚಲಪತಿಪಾಳ್ಯ

Advertisement

Udayavani is now on Telegram. Click here to join our channel and stay updated with the latest news.

Next