Advertisement

ಶಾಸಕ ಶಿವಣ್ಣರನ್ನು ಹಣಿಯುವುದೇ ನನ್ನ ಗುರಿ

09:11 PM Oct 30, 2019 | Team Udayavani |

ಆನೇಕಲ್‌: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಯುವಕ ಕೆ.ಪಿ.ರಾಜು ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ರಾಜುವನ್ನು ಗೆಲ್ಲಿಸಿ, ಶಾಸಕ ಬಿ.ಶಿವಣ್ಣರನ್ನು ರಾಜಕೀಯವಾಗಿ ಹಣಿಯುವುದೇ ನನ್ನ ಗುರಿಯಾಗಿದೆ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಸಂಕಲ್ಪ ಮಾಡಿದರು. ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಆನೇಕಲ್‌ ವಿಧಾನಸಭೆ ಕ್ಷೇತ್ರದ ಜಾತ್ಯಾತೀತ ಜನತಾದಳ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಇನ್ಮುಂದೆ ಜೆಡಿಎಸ್‌ ಮಾತ್ರ ಇರಲಿದೆ: ಕಾಂಗ್ರೆಸ್‌ನ ಶಾಸಕ ಬಿ.ಶಿವಣ್ಣ ಎರಡು ಬಾರಿ ವಿಜೇತರಾಗಿದ್ದು, ಜೆಡಿಎಸ್‌ನಿಂದ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸ್ಪರ್ಧಿಸದೇ ತಟಸ್ಥವಾಗಿದ್ದರಿಂದ ಶಿವಣ್ಣ ಗೆಲುವು ಸಾಧಿಸಿದ್ದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಉತ್ಸಾಹಿ ಯುವಕ ಕೆ.ಪಿ.ರಾಜು ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಇನ್ನುಮುಂದೆ ಜೆಡಿಎಸ್‌ ರಾರಾಜಿಸಲಿದೆ. ಜತೆಗೆ ಇನ್ನು ಮುಂದೆ ಕ್ಷೇತ್ರದಲ್ಲಿ ಜೆಡಿಎಸ್‌ ಸಂಘಟಿತವಾಗಿ, ಗಟ್ಟಿಯಾಗಿ ಬೇರೂರಲಿದೆ. ಕಾಂಗ್ರೆಸ್‌ ಪುರಸಭೆ ಸದಸ್ಯರೊಬ್ಬರ ಪತಿ, ಕಾಂಗ್ರೆಸ್‌ ಯುವ ಮುಖಂಡ ಜೆಡಿಎಸ್‌ ಪಕ್ಷಕ್ಕೆ ಸೇರುತ್ತಿರುವುದುಏ ಸಾಕ್ಷಿಯಾಗಿದೆ ಎಂದು ಹೇಳಿದರು.

ಉಪಚುನಾವಣೆ ಬಳಿಕ ಮಹತ್ವದ ತಿರುವು: ರಾಜ್ಯದಲ್ಲಿ ಜನಸಾಮಾನ್ಯರ ಪಕ್ಷ, ರೈತರ ಪಕ್ಷ ಎಂದರೆ ಅದೂ ಜೆಡಿಎಸ್‌ ಮಾತ್ರ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕಡಿಮೆ ಅವಧಿಯಲ್ಲಿ ರಾಜ್ಯದ ಸಾಮಾನ್ಯ ಜನರ ಪರವಾಗಿ ಆಡಳಿತ ನಡೆಸಿದರು. ಅಂತಹ ನಿಸ್ವಾರ್ಥ ಮುಖ್ಯಮಂತ್ರಿಗೆ ಕಾಂಗ್ರೆಸ್‌ ಬೆನ್ನಿಗೆ ಚೂರಿಹಾಕಿದೆ. ಅದರಲ್ಲೂ ಸಿದ್ದರಾಮಯ್ಯನವರಂತಹ ವ್ಯಕ್ತಿಯನ್ನು ಬೇರೆಲ್ಲೂ ಕಾಣಲಾಗದು ಎಂದು ಕಿಡಿ ಕಾರಿದರು. ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಹೊಸ ರಾಜಕೀಯ ತಿರುವು ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಕುಮಾರಣ್ಣ ಮುಖ್ಯಮಂತ್ರಿಯಾಗುವ ರಾಜಕೀಯ ಬೆಳೆವಣಿಗೆಗಳು ನಡೆಯಲಿದೆ ಎಂದು ಹೇಳಿದರು.

ನಾಯಕರ ಸೇರ್ಪಡೆಯೇ ಪಕ್ಷದ ಸಾಮರ್ಥ್ಯ: ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಸಂಭವನೀಯ ಅಭ್ಯರ್ಥಿ ಕೆ.ಪಿ.ರಾಜು ಮಾತನಾಡಿ, ಪಟ್ಟಣದಲ್ಲಿ ಜೆಡಿಎಸ್‌ ಸಿದ್ಧಾಂತ ಮತ್ತು ಗೊಟ್ಟಿಗೆರೆ ಮಂಜಣ್ಣರ ನಾಯಕತ್ವದ ಮೇಲೆ ಭರವಸೆ ಇಟ್ಟು ಕಾಂಗ್ರೆಸ್‌ ಪುರಸಭೆ ಸದಸ್ಯರು ಪಕ್ಷ ಸೇರ್ಪಡಯಾಗಲಿದ್ದಾರೆ. ಅದರ ಮೊದಲ ಹಂತವಾಗಿ ಪಟ್ಟಣದ ಯುವ ಮುಖಂಡ, ಪುರಸಭೆ ಸದಸ್ಯೆಯೊಬ್ಬರ ಪತಿ ಶ್ರಿರಾಮ್‌ ಮತ್ತವರ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂಬುದು ಪಕ್ಷದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಪಟ್ಟಣದಲ್ಲಿ ಜೆಡಿಎಸ್‌ ತಾಲೂಕು ಕಚೇರಿ ತೆರೆಯಲಾಗವುದು. ಈ ಮೂಲಕ ಜನರ ಸಮಸ್ಯೆ ಆಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವ ಕೆಲಸಗಳನ್ನು ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ. ಜೆಡಿಎಸ್‌ ಕೇವಲ ಚುನಾವಣೆಯಲ್ಲಿ ಮಾತ್ರ ಕಾರ್ಯನಿರ್ವಹಿಸದೆ ಸದಾ ಜನರ ಮಧ್ಯೆ ಇದ್ದು ಜನ ಸೇವೆಗೆ ಮುಂದಾಗಿದೆ ಎಂದು ಹೇಳಿದರು.

ಸ್ವಾರ್ಥ, ಸ್ವಹಿತಾಸಕ್ತಿಯಿಲ್ಲ: ಜೆಡಿಎಸ್‌ ಮುಖಂಡ ತಮ್ಮನಾಯಕನಹಳ್ಳಿ ಶ್ರೀನಿವಾಸ್‌ ಮಾತನಾಡಿ, ಜೆಡಿಎಸ್‌ ನಾಯಕ ಗೊಟ್ಟಿಗೆರೆ ಮಂಜಣ್ಣರ ಸೂಚನೆ ಮೇರೆಗೆ ನಾನು ಪಕ್ಷ ಸಂಘಟಿಸಲು ಪಣ ತೊಟ್ಟಿದ್ದೇನೆ. ಇದರಲ್ಲಿ ನನಗೆ ಸ್ವಹಿತಾಕ್ತಿ, ಸ್ವಾರ್ಥ ಯಾವುದೂ ಇಲ್ಲ. ಪಕ್ಷಕ್ಕಾಗಿ ಪ್ರಮಾಣಿಕವಾಗಿ ಶ್ರಮಿಸುತ್ತೇನೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರ್ಕಾರ, ಸ್ಥಳೀಯ ಶಾಸಕರು, ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿ ಜನರ ಸಮಸ್ಯೆಗಳಿಗೆ ಬೆಂಬಲವಾಗಿ ಜೆಡಿಎಸ್‌ ನಿಲ್ಲಲಿದೆ. ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಮಾಣಿಕವಾಗಿ ಮಾಡದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ಧ ಜೆಡಿಎಸ್‌ ಕಚೇರಿಗೆ ದೂರು ನೀಡಿ, ನಿಮ್ಮ ಪರ ಹೋರಾಟಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.

Advertisement

ಜೆಡಿಎಸ್‌ ತಾಲೂಕು ಅಧ್ಯಕ್ಷ ದೇವೇಗೌಡ ಮಾತನಾಡಿ, ಹಲವು ವರ್ಷಗಳಿಂದ ಜೆಡಿಎಸ್‌ ಅನ್ನು ಕಟ್ಟಿ ಬೆಳೆಸುತ್ತಿರುವ ಕೆ.ಪಿ. ರಾಜು ಮುಂದಿನ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಪಕ್ಷದ ಸ್ಥಳೀಯ ಮುಖಂಡರು ನಿರ್ಧರಿಸಿದ್ದಾರೆ. ಮುಂದಿನ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಅಷ್ಟೇ ಅಲ್ಲದೆ, ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸಲಾಗುವುದು ಎಂದು ಘೋಷಿಸಿದರು. ಹಿರಿಯ ಮುಖಂಡ ಶುಭಾನಂದ್‌, ಬ್ಯಾಗಡದೇನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ಚಂದಾಪುರ ಆನಂದ್‌, ಗೋಪಿ, ಜೆಡಿಎಸ್‌ ಕಾಯಕರ್ತರು ಮೊದಲಾದವರು ಹಾಜರಿದ್ದರು. ಶ್ರೀರಾಮು ಸೇರಿದಂತೆ ಮಾಜಿ ಪುರಸಭೆ ಸದಸ್ಯ ಮಂಜುನಾಥ್‌, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಮಮೂರ್ತಿ, ಚಾಕಲೇಟ್‌ ಪ್ರಸಾದ್‌, ಮುನಾವರ್‌ ಮೊದಲಾದವರು ಪಕ್ಷಕ್ಕೆ ಸೇರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next