Advertisement

Tumakuru ಕ್ಷೇತ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ: ಕೇಂದ್ರ ಸಚಿವ ವಿ.ಸೋಮಣ್ಣ

08:11 PM Jun 14, 2024 | Team Udayavani |

ಕೊರಟಗೆರೆ: ಮತದಾರ ಪ್ರಭುಗಳ ಆಶೀರ್ವಾದದಿಂದ ಲೋಕಾಸಭೆಯ ಸದಸ್ಯ ಮತ್ತು ಕೇಂದ್ರ ಸಚಿವನಾಗಿದ್ದೇನೆ.5 ವರ್ಷದ ಅವಧಿಯಲ್ಲಿ ತುಮಕೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಪ್ರಮುಖ ಗುರಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ತಾಲೂಕಿನ ಎಲೆರಾಂಪುರ ಮತ್ತು ಸಿದ್ಧರಬೆಟ್ಟ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ತುಮಕೂರು-ರಾಯದುರ್ಗ ಮಾರ್ಗದ ರೈಲ್ವೆ ಯೋಜನೆ ಕಾಮಗಾರಿಯ ಬಗ್ಗೆ ಕೇವಲ 15 ದಿನದಲ್ಲಿ ಸವಿಸ್ತಾರವಾಗಿ ತಿಳಿಸುತ್ತೇನೆ. ಇನ್ನು ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರವಾಸ ಮಾಡಿ ನಂತರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಎಚ್.ಡಿ ದೇವೇಗೌಡರವರ ಸೂಚನೆಯಂತೆ ದೂರ ದೃಷ್ಟಿಯನ್ನು ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಯತ್ತ ಚರ್ಚೆ ಮಾಡುತ್ತೇನೆ ಎಂದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನನಗೆ ಹೆಚ್ಚಿನ ಲೀಡ್ ಕೊಟ್ಟು ಸಂಸದನಾಗಿ ಆಯ್ಕೆಯಾಗಲು ಕಾರಣರಾಗಿದ್ದಾರೆ. ಹಾಗಾಗಿ ಈ ಭಾಗದ ಸಮಗ್ರ ಅಭಿವೃದ್ಧಿಯ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರದ ನಾಯಕರುಗಳೊಂದಿಗೆ ಚರ್ಚಿಸಿ ಶೀಘ್ರವೇ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ. ಸಚಿವನಾದ ಮೇಲೆ ತುಮಕೂರಿಗೆ ಭೇಟಿ ನೀಡಿದ ಮೊದಲ ದಿನವೇ ಸಿದ್ದಗಂಗಾ ಮಠ, ಕೊರಟಗೆರೆಯ ಎಲೆರಾಂಪುರ ಸೇರಿದಂತೆ ಸಿದ್ಧರಬೆಟ್ಟ ಮಠದ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಮತದಾರರಿಗೆ, ಹಾಗೂ ಎನ್‌ಡಿಎ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್ ಬಸವರಾಜು,ಎಂಎಲ್‌ಸಿ ಚಿದಾನಂದಗೌಡ, ಮಾಜಿ ಶಾಸಕರಾದ ಅಂದನಪ್ಪ, ವೀರಭದ್ರಯ್ಯ, ಬಿಜೆಪಿ ಮುಖಂಡ ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ತಾ.ಅಧ್ಯಕ್ಷ ದರ್ಶನ್, ಜಿ.ಪಂ ಮಾಜಿ ಸದಸ್ಯ ಶಿವರಾಮಯ್ಯ, ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಮುಖಂಡರಾದ ಕಾಮರಾಜು, ಸಿದ್ದಮಲ್ಲಪ್ಪ, ಎಲ್.ವಿ ಪ್ರಕಾಶ್, ರಂಗರಾಜು, ರುದ್ರೇಶ್, ಅರುಣ್, ದಾಸರಹಳ್ಳಿ ರಘು, ಶ್ರೀನಿವಾಸಮೂರ್ತಿ ಸೇರಿದಂತೆ ಇತರರು ಇದ್ದರು.

Advertisement

ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತುಮಕೂರಿಗೆ ಮೊದಲ ಭೇಟಿಯ ಸಂದರ್ಭದಲ್ಲಿ ಸಿದ್ಧಗಂಗಾ ಮಠಕ್ಕೆ, ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟ ಹಾಗೂ ಎಲೆರಾಂಪುರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಹೂ ಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸೋಮಣ್ಣ ಅವರ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next