Advertisement

ಹೈದರಾಬಾದ್‌ನ ಮಾಜಿ ಕ್ರಿಕೆಟಿಗ ಎಂ.ವಿ. ಶ್ರೀಧರ್‌ ನಿಧನ

06:45 AM Oct 31, 2017 | Team Udayavani |

ಹೈದರಾಬಾದ್‌: ಹೈದರಾಬಾದ್‌ ರಣಜಿ ತಂಡದ ಮಾಜಿ ನಾಯಕ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಜನರಲ್‌ ಮ್ಯಾನೇಜರ್‌ ಆಗಿಯೂ ಕರ್ತವ್ಯ ನಿಭಾಯಿಸಿದ್ದ ಎಂ.ವಿ. ಶ್ರೀಧರ್‌ ಸೋಮವಾರ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 51 ವರ್ಷವಾಗಿತ್ತು.

Advertisement

ಮಧ್ಯಾಹ್ನ ಹೈದರಾಬಾದ್‌ ನಿವಾಸದಲ್ಲಿದ್ದಾಗ ಶ್ರೀಧರ್‌ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಶ್ರೀಧರ್‌ ಅಗಲಿದ್ದಾರೆ.

1966ರಲ್ಲಿ ವಿಜಯವಾಢದಲ್ಲಿ ಜನಿಸಿದ ಮಟುರಿ ವೆಂಕಟ ಶ್ರೀಧರ್‌ ಆಕರ್ಷಕ ಶೈಲಿಯ ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದರು. 1988-2000ದ ಅವಧಿಯಲ್ಲಿ ಹೈದರಾಬಾದ್‌ ಪರ ರಣಜಿ ಆಡಿದ ಅವರು ತಂಡದ ನಾಯಕನಾಗಿಯೂ ಉತ್ತಮ ನಿರ್ವಹಣೆ ತೋರಿದರು. 97 ಪ್ರಥಮ ದರ್ಜೆ ಪಂದ್ಯಗಳಿಂದ 6,701 ರನ್‌ ಬಾರಿಸಿದ ಹೆಗ್ಗಳಿಕೆ ಶ್ರೀಧರ್‌ ಅವರದು. 1994ರಲ್ಲಿ ಆಂಧ್ರಪ್ರದೇಶ ವಿರುದ್ಧ 366 ರನ್‌ ಬಾರಿಸಿದ್ದು ಅವರ ಜೀವನಶ್ರೇಷ್ಠ ಸಾಧನೆ. ಇದು ರಣಜಿ ಇತಿಹಾಸದ 3ನೇ ಸರ್ವಾಧಿಕ ವೈಯಕ್ತಿಕ ಮೊತ್ತವಾಗಿದೆ. ಒಟ್ಟು 21 ಶತಕ ಬಾರಿಸಿದ್ದಾರೆ.

ಶ್ರೀಧರ್‌ ವೃತ್ತಿಯಲ್ಲಿ ವೈದ್ಯರೆಂಬುದು ಅನೇಕರಿಗೆ ತಿಳಿದಿರದ ಸಂಗತಿ. ಹೈದರಾಬಾದ್‌ ಕ್ರಿಕೆಟ್‌ ಮಂಡಳಿಯಲ್ಲಿ (ಎಚ್‌ಸಿಎ) ವಿವಿಧ ಹುದ್ದೆ ಅಲಂಕರಿಸಿದ ಬಳಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2013ರಲ್ಲಿ ಎನ್‌. ಶ್ರೀನಿವಾಸನ್‌ ಕಾರ್ಯಾವಧಿಯಲ್ಲಿ ಜಿಎಂ ಆಗಿ ಬಿಸಿಸಿಐ ಪ್ರವೇಶಿಸಿದ್ದರು. ಕ್ರಿಕೆಟ್‌ ವಕ್ತಾರನಾಗಿ ಕರ್ತವ್ಯ ನಿಭಾಯಿಸುವಲ್ಲಿ ಶ್ರೀಧರ್‌ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು.

ಮಗಳ ಬರ್ತ್‌ಡೇ ತಯಾರಿ
ಹೈದರಾಬಾದ್‌ ಕ್ರಿಕೆಟ್‌ ಮಂಡಳಿಯ ಸದಸ್ಯ, ಶ್ರೀಧರ್‌ ಅವರ ಗೆಳೆಯರೂ ಆಗಿರುವ ಡಿ. ನರಸಿಂಗ ರಾವ್‌ ಈ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. “ಶ್ರೀಧರ್‌ ನನ್ನ ಜತೆ ಬೆಳಗ್ಗೆ ದೂರವಾಣಿಯಲ್ಲಿ ಮಾತಾಡುತ್ತ, ಕಳೆದೊಂದು ವಾರದಿಂದ ಆರೋಗ್ಯ ಸರಿ ಇಲ್ಲ ಎಂದಿದ್ದರು. 12.30ರ ವೇಳೆ ಆರೋಗ್ಯ ಬಿಗಡಾಯಿಸಿದ್ದರಿಂದ ಸಂಬಂಧಿ ಒಬ್ಬರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಊಟವನ್ನೂ ಮಾಡಿದ್ದಾರೆ. ಆದರೆ ಒಂದು ಗಂಟೆ ಬಳಿಕ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಅವರು ತಮ್ಮ ಮಗಳ ಹುಟ್ಟಿದ ಹಬ್ಬದ ತಯಾರಿಯಲ್ಲಿದ್ದರು. ನ. 2ಕ್ಕೆ ಮಗಳ ಬರ್ತ್‌ಡೇ ಇತ್ತು. ಘಟನೆಯ ವೇಳೆ ಮಗಳೂ ಮನೆಯಲ್ಲಿದ್ದರು’ ಎಂದು ನರಸಿಂಗ ರಾವ್‌ ತಿಳಿಸಿದರು. ಶ್ರೀಧರ್‌ ಅಂತ್ಯಕ್ರಿಯೆ ಮಂಗಳವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next