Advertisement

ಉಳ್ಳಾಲ : ಸಮುದ್ರ ಮಧ್ಯೆ ಸಿಲುಕಿದ ವಿದೇಶಿ ಮೂಲದ ಹಡಗು : 15 ಮಂದಿ ನಾವಿಕರ ರಕ್ಷಣೆ

12:53 AM Jun 22, 2022 | Team Udayavani |

ಮಂಗಳೂರು: ಮಲೇಷ್ಯಾದಿಂದ ಲೆಬನಾನ್‌ ಸಾಗುತ್ತಿದ್ದ ಪ್ರಿನ್ಸಸ್‌ ಮಿರಾಲ್‌ ಹೆಸರಿನ ಸರಕು ಸಾಗಾಟ ಹಡಗೊಂದು ಮಂಗಳೂರಿನ ಉಳ್ಳಾಲ ಬಳಿ ಮಂಗಳವಾರ ಅಪಾಯಕ್ಕೆ ಸಿಲುಕಿದೆ.

Advertisement

ತಾಂತ್ರಿಕ ಸಮಸ್ಯೆಗೀಡಾಗಿ ಸೋಮೇಶ್ವರ ಉಚ್ಚಿಲ ಬಳಿ ಸಮುದ್ರದಲ್ಲಿ ಸುಮಾರು 5 ನಾಟಿಕಲ್‌ ಮೈಲಿ ದೂರದಲ್ಲಿ ತಳ ಸ್ಪರ್ಶಗೊಂಡು ನಿಂತಿದೆ. ರಂಧ್ರ ಉಂಟಾಗಿ ಮುಳುಗುವ ಅಪಾಯವಿದ್ದು, ಹಡಗಿ ನಲ್ಲಿದ್ದ 15 ಮಂದಿ ಸಿರಿಯನ್‌ ಮೂಲದ ನಾವಿಕರನ್ನು ಕೋಸ್ಟ್‌ಗಾರ್ಡ್‌ ತಂಡ ದಡಕ್ಕೆ ಕರೆತಂದಿದೆ.

ಆಗಿದ್ದೇನು?
ಮಲೇಷ್ಯಾದಿಂದ ಲೆಬನಾನ್‌ಗೆ ಉಕ್ಕಿನ ಕಾಯಿಲ್‌ಗ‌ಳನ್ನು ನೌಕೆ ಸಾಗಿಸುತ್ತಿತ್ತು. ಉಳ್ಳಾಲ ಬಳಿ ಸಮುದ್ರದಲ್ಲಿ ಸಂಚರಿಸುತ್ತಿರುವ ವೇಳೆ ಹಡಗಿನಲ್ಲಿ ರಂಧ್ರ ಉಂಟಾಗಿ ಮುಳುಗುವ ಅಪಾಯ ಎದುರಾ ಯಿತು.ಅದರ ಕ್ಯಾಪ್ಟನ್‌ ಕೋಸ್ಟ್‌ಗಾರ್ಡ್‌ಗೆ ಸಂದೇಶ ರವಾನಿಸಿ ರಕ್ಷಿಸುವಂತೆ ಕೋರಿಕೊಂಡರು. ತತ್‌ಕ್ಷಣ ಕೋಸ್ಟ್‌ ಗಾರ್ಡ್‌ನ ಅಧಿಕಾರಿ, ಸಿಬಂದಿಯ ತಂಡ ತೆರಳಿ ರಕ್ಷಣ ಕಾರ್ಯಾಚರಣೆ ಕೈಗೊಂಡರು. ಕೋಸ್ಟ್‌ ಗಾರ್ಡ್‌ ನೌಕೆಗಳಾದ ವಿಕ್ರಂ ಹಾಗೂ ಅಮಾರ್ತ್ಯ ಇವೆರಡನ್ನೂ ರಕ್ಷಣೆಗಾಗಿ ಕಳುಹಿಸಿ ಕೊಡ ಲಾಯಿತು. ಅಬ್ಬರಿಸುತ್ತಿರುವ ಸಮುದ್ರದ ಮಧ್ಯೆ ಕಾರ್ಯಾಚರಣೆ ಕೈಗೊಂಡ ಕೋಸ್ಟ್‌ಗಾರ್ಡ್‌ ಸಿಬಂದಿ ಎಲ್ಲ 15 ಮಂದಿ ಸಿರಿಯನ್‌ ನಾವಿಕರನ್ನೂ ಯಶಸ್ವಿಯಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕರೆತರಲಾದ ನಾವಿಕರನ್ನು ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿದೆ.

ಹಳೇ ಹಡಗು
ಪ್ರಿನ್ಸೆಸ್‌ ಮಿರಾಲ್‌ ಹಡಗು 32 ವರ್ಷ ಹಳೆಯದಾಗಿದೆ, ಈ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿ ಕೊಂಡ ಬಳಿಕ ಹಡಗಿನ ಪರವಾಗಿ ಮಂಗಳೂರಿ ನಲ್ಲಿರುವ ಏಜೆಂಟರು ನವಮಂಗಳೂರು ಬಂದರು ಪ್ರಾಧಿಕಾರವನ್ನು ಸಂಪರ್ಕಿಸಿದ್ದು ಆ್ಯಂಕರೇಜ್‌ ವರೆಗೆ ಬರುವುದಕ್ಕೆ ಅವಕಾಶ ಕೇಳಿದ್ದರು ಎಂದು ತಿಳಿದುಬಂದಿದೆ.

ಆದರೆ ಹಳೇ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶಿಸಲು ಅವಕಾಶ ಇರದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿಲ್ಲ. ಅಲ್ಲದೆ ಮಂಗಳೂರು ಹಳೇಬಂದರಿಗೂ ಅವಕಾಶ ಕೇಳಿದ್ದೂ ಅಲ್ಲೂ ಅನುಮತಿ ನಿರಾಕರಿಸಲಾಗಿದೆ.

Advertisement

ಜಲಮಾಲಿನ್ಯ ಭೀತಿ
ಪ್ರಸ್ತುತ ಹಡಗಿನ ಎಲ್ಲ ಸಿಬಂದಿ ದಡ ಸೇರಿದ್ದಾರೆ. ಹಡಗಿನ ಮುಂಭಾಗದ ತಳದಲ್ಲಿ ಮೂರು ರಂಧ್ರ ಗಳು ಉಂಟಾಗಿದ್ದು ನೀರು ಒಳ ಪ್ರವೇಶಿಸಿ ಜಲಸಮಾಧಿ ಯಾಗುವ ಹಾಗೂ ಅದರಲ್ಲಿರುವ ಮಾಲಿನ್ಯಕಾರಕ ಅಂಶಗಳು ಸಮುದ್ರ ಸೇರುವ ಭೀತಿ ಎದುರಾಗಿದೆ. ಸಮುದ್ರವೂ ಅಬ್ಬರದಲ್ಲಿರುವುದರಿಂದ ಸದ್ಯಕ್ಕೆ ಕಾರ್ಯಾಚರಣೆ ನಡೆಸಲೂ ಸಾಧ್ಯವಿಲ್ಲ.

ಈ ಬೆಳವಣಿಗೆ ಕುರಿತು ನವಮಂಗಳೂರು ಬಂದರು ಪ್ರಾಧಿಕಾರದವರು ನೌಕಾಯಾನ ಮಹಾ ನಿರ್ದೇಶಕರಿಗೆ ಹಾಗೂ ಮರ್ಕೆಂಟೈಲ್‌ ಮರೈನ್‌ ಡಿಪಾರ್ಟ್‌ಮೆಂಟಿಗೆ ವರದಿ ನೀಡಲಿದ್ದಾರೆ.

ತೆರವಾಗದ ನೌಕೆಗಳ ಸಾಲಿಗೆ ಮತ್ತೊಂದು ಸೇರ್ಪಡೆ?
ದ.ಕ., ಉಡುಪಿಯ ಕರಾವಳಿ ಭಾಗದಲ್ಲಿ ಹಲವು ಹಡಗು, ಸಣ್ಣ ನೌಕೆಗಳು ಮುಳುಗಿದ್ದು ಅವುಗಳಿನ್ನೂ ತೆರವಾಗಿಲ್ಲ. ಅದೇ ಪಟ್ಟಿಗೆ ಈಗ ಪ್ರಿನ್ಸಸ್‌ ಮಿರಾಲ್‌ ಸೇರ್ಪಡೆಯಾದಂತೆ ಕಾಣುತ್ತಿದೆ.

29 ವರ್ಷದ ಹಿಂದೆ ತಣೀರುಬಾವಿ ಬಳಿ ಸಮುದ್ರದಲ್ಲಿ ಮುಳುಗಿದ್ದ ಸಿಂಗಪುರ ಮೂಲದ ಓಷನ್‌ ಬ್ಲೆಸಿಂಗ್‌ ಹಡಗಿನ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಎರಿಟ್ರಿಯಾದ ಎಂ.ವಿ. ಡೆನ್‌ಡೆನ್‌ ಹಡಗು 2007ರಲ್ಲಿ ಮಂಗಳೂರಿನ ತಣ್ಣೀರುಬಾವಿ ಬಳಿ ಅಪಘಾತಕ್ಕೊಳಗಾಗಿ ಮುಳುಗಿತ್ತು. ನೌಕೆಯಲ್ಲಿದ್ದ 24 ಸಿಬಂದಿಗಳ ಪೈಕಿ ಮೂವರು ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು. ಇನ್ನೂ ಇದು ಪೂರ್ಣ ವಿಲೇವಾರಿಯಾಗಿಲ್ಲ. ಆ ಬಳಿಕ 2008ರಲ್ಲಿ ಚೈನೀಸ್‌ ಹಡಗು “ಚಾಂಗ್‌ ಲಿ ಮನ್‌’ ಪ್ರತಿಕೂಲ ಹವಾಮಾನದಿಂದ ಗಾಳಿಯ ರಭಸಕ್ಕೆ ತಣ್ಣೀರು ಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿತ್ತು. ಆದರೆ ಈ ಹಡಗು ಮುಳುಗಡೆ ಆಗಿರಲಿಲ್ಲ. 2008 ಜು. 17ರಂದು ನವಮಂಗಳೂರು ಬಂದರಿನಿಂದ 13,000 ಟನ್‌ ಮ್ಯಾಂಗನೀಸ್‌ ಅದಿರನ್ನು ಹೊತ್ತು ಚೀನಕ್ಕೆ ಹೊರಟಿದ್ದ ಇಥಿಯೋಪಿಯಾದ “ಏಶಿಯನ್‌ ಫಾರೆಸ್ಟ್‌’ ಹಡಗು ಪ್ರತಿಕೂಲ ಹವಾಮಾನದಿಂದ ಮುಂದಕ್ಕೆ ಚಲಿಸಲಾಗದೆ ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು. 18) ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ನೌಕೆಯಲ್ಲಿದ್ದ ಎಲ್ಲ 18 ಮಂದಿಯನ್ನು ರಕ್ಷಿಸಲಾಗಿತ್ತು. ಈ ಹಡಗಿನ ಅವಶೇಷವನ್ನು ಕೂಡ ಪೂರ್ಣವಾಗಿ ತೆಗೆಯಲು ಕೆಲವು ವರ್ಷಗಳೇ ಬೇಕಾಯಿತು.

2021ರಲ್ಲಿ ಎಂಆರ್‌ಪಿಎಲ್‌ ತೇಲುಜೆಟ್ಟಿಯ ನಿರ್ವಹಣೆಗೆ ಹೋಗುತ್ತಿದ್ದ ಅಲಯನ್ಸ್‌ ಎಂಬ ಟಗ್‌ ತೌಖೆ¤ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ನೀರುಪಾಲಾಗಿ ಇಬ್ಬರು ಮೃತಪಟ್ಟಿದ್ದರು. ಇದೇ ದಿನ ಕೋರಮಂಡಲ್‌ ಎನ್ನುವ ಟಗ್‌ ಕಾಪು ಬಳಿಯ ಮೂಲ್ಕಿ ರಾಕ್ಸ್‌ ಎಂಬಲ್ಲಿ ತಳಸ್ಪರ್ಶಗೊಂಡಿತ್ತು. ಬಳಿಕ ಅದರ ನಾವಿಕರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಗಿತ್ತು. ಈ ನೌಕೆ ಈಗಲೂ ಅಲ್ಲೇ ಬಾಕಿಯಾಗಿದೆ.

ಇನ್ನು 2019ರಲ್ಲಿ ತ್ರಿದೇವಿ ಪ್ರೇಮ್‌ ಎಂಬ ಡ್ರೆಜ್ಜರ್‌ ನೌಕೆ ನವಮಂಗಳೂರು ಬಂದರು ಬಳಿ ಜಲಸಮಾಧಿಯಾಗಿತ್ತು. ಅದೇ ಕಂಪನಿಗೆ ಸೇರಿದ ಭಗವತಿ ಪ್ರೇಮ್‌ ಎಂಬ ಡ್ರೆಜ್ಜರನ್ನು ಸುರತ್ಕಲ್‌ ಬಳಿಯ ಹೊಸಬೆಟ್ಟು ಕಡಲಕಿನಾರೆಯಲ್ಲಿ ನಿಲ್ಲಿಸಲಾಗಿದ್ದು ಈಗಲೂ ತೆರವಾಗದೆ ಬಾಕಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next