ಮುಗಳಖೋಡ: ಸುಕ್ಷೇತ್ರ ಮುಗಳಖೋಡದ ಲಿಂ. ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜ ಮಠದ್ದು ಜಾತ್ಯತೀತ ಪರಂಪರೆ. ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಮಠ ಕಂಗೊಳಿಸುತ್ತಿದೆ ಎಂದು ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಿದ್ಧಲಿಂಗೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಷ್ಠೆ, ಭಕ್ತಿಯಿಂದ ನಡೆದುಕೊಂಡವರನ್ನು ಯಲ್ಲಾಲಿಂಗೇಶ್ವರ
ಮಹಾರಾಜರು ಹಾಗೂ ಸಿದ್ದರಾಮೇಶ್ವರ ಸ್ವಾಮಿಗಳು ಎಂದಿಗೂ ಕೈಬಿಡುವುದಿಲ್ಲ. ಸದಾಕಾಲ ಗುರುವಿನ ಆಶೀರ್ವಾದ ಭಕ್ತರ ಮೇಲಿರುತ್ತದೆ ಎಂದರು.
ಶನಿವಾರ ಬೆಳಗ್ಗೆ 6ಕ್ಕೆ ಸಿದ್ಧಲಿಂಗೇಶ್ವರ, ಯಲ್ಲಾಲಿಂಗೇಶ್ವರ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಂಗಳಾರತಿ, 10.30ಕ್ಕೆ ಡಾ| ಮುರುಘರಾಜೇಂದ್ರ ಸ್ವಾಮಿಗಳು ಅಗ್ನಿಕುಂಡ ಸೇವೆ ನಡೆದವು. ಸಂಜೆ 6ಕ್ಕೆ ಸಿದ್ಧಲಿಂಗೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಮಹಾರಥೋತ್ಸವ ನಡೆಯಿತು. ರಾತ್ರಿ 8ಕ್ಕೆ ಸೊಲ್ಲಾಪುರ ಭಕ್ತರಿಂದ ಮದ್ದು ಸುಡುವ ಕಾರ್ಯಕ್ರಮ ಜರುಗಿತು. ಜಾತ್ರೆಯಲ್ಲಿ ಆಂಧ್ರ, ಗೋವಾ, ಮಹಾರಾಷ್ಟ್ರ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. 14ರಂದು ಸಂಜೆ 4ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿವೆ.