Advertisement

ಪರಸ್ಪರ ನಂಬಿಕೆ ನಮ್ಮ ಬದುಕಿನ ಬುನಾದಿ

12:12 AM Jul 22, 2019 | Sriram |

ಬದುಕು ನಿಂತಿರುವುದು ನಂಬಿಕೆಯ ಮೇಲೆ. ಅಪ್ಪ, ಅಣ್ಣ, ಮಾವ, ಗಂಡ,ಮಾಲಕ, ಕೆಲಸಗಾರರು ಹೀಗೆ ಬದುಕು ಇನ್ನೊಬ್ಬರನ್ನು ನಂಬಿಯೇ ಸಾಗುತ್ತದೆ. ಒಂದೊಮ್ಮೆ ನಂಬಿದವರು ಕೈಕೊಟ್ಟರೆ ನಿಮ್ಮ ಕನಸುಗಳು ನೀರುಪಾಲಾಗಬಹುದು. ಆದರೂ ನಾವು ಇನ್ನೊಬ್ಬರನ್ನು ನಂಬುವುದು ತಪ್ಪಲ್ಲ. ನಮ್ಮ ಮೇಲೆ ನಮಗೆ ಯಾವಾಗ ದೃಢ ನಂಬಿಕೆ ಇರುವುದೋ ನಮ್ಮ ಯಶಸ್ಸು ನಮ್ಮಲ್ಲಿಯೇ ಇರುತ್ತದೆ.ಈ ಯಶಸ್ಸನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳಲಾರರು.

Advertisement

ಇಂದು ಮಾನವೀಯ ಮೌಲ್ಯ ಕುಸಿಯುತ್ತಿದ್ದು ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಪ್ರಪಂಚವೇ ನಮಗೆ ಕಾಣಿಸುತ್ತಿದೆ. ನಾವು ಇಂದು ಬದುಕುಳಿಯಲು ಇರುವುದು ಇದೊಂದೇ ಮಾರ್ಗ ಎಂದು ನಂಬುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ನಾವು ಬೀದಿಯ ಅಂಗಡಿಯವನೊಂದಿಗೆ ವ್ಯಾಪಾರ ಮಾಡುವಾಗ ಆತ ತೂಕ ಮಾಡುವ ಸಂದರ್ಭ ನಮಗೆ ಗೊತ್ತಾಗದಂತೆ ಕೊಳೆತ ಹಣ್ಣನ್ನು ಒಳ್ಳೆಯ ಹಣ್ಣಿನೊಂದಿಗೆ ಸೇರಿಸುತ್ತಾನೋ ಎಂಬ ಸಂದೇಹ ನಮ್ಮಲ್ಲಿ ಮೂಡುವುದುಂಟು. ಆಗಿನ ನಮ್ಮ ಮನಃಸ್ಥಿತಿ ಮೋಸ ಹೋಗುವುದನ್ನೇ ನಿರೀಕ್ಷಿಸುತ್ತೇವೆಯೋ ಎಂಬಂತಿರುತ್ತದೆ. ಮಾರುವವನು ಪ್ರಾಮಾಣಿಕ, ನಿಪುಣನಾಗಿ ಇರಲೂಬಹುದು ಎಂಬುದನ್ನು ಯೋಚಿಸುವುದೂ ನಮಗೆ ಬೇಕಿರುವುದಿಲ್ಲ.

ಸತ್ಯ ನಂಬಲು ನಾವು ಸಿದ್ಧರಿಲ್ಲ

ಹಾಗೆಯೇ ನಾವು ಅಟೋ ಹತ್ತಿದಾಗ ಅದರ ಮೀಟರ್‌ ಹೆಚ್ಚು ಓಡಿಬಿಟ್ಟರೆ ಅಥವಾ ಈ ಆಟೋ ಡ್ರೈವರ್‌ ನಮ್ಮಲ್ಲಿ ಹೆಚ್ಚು ದುಡ್ಡು ವಸೂಲಿ ಮಾಡಬಹುದೇ ಎಂಬ ಯೋಚನೆ ನಮಗೆ ಹಲವು ಸಲ ಬರುವುದುಂಟು. ನಮ್ಮ ಸುತ್ತಮುತ್ತ ಎಷ್ಟೋ ಒಳ್ಳೆಯ ವ್ಯಕ್ತಿಗಳು ಇದ್ದರೂ ಪ್ರತಿಯೊಬ್ಬರೂ ನಮಗೆ ಮೋಸ ಮಾಡಲು ಅಥವಾ ನಮ್ಮನ್ನು ದೋಚಲು ಕಾಯ್ದುಕೊಂಡಿರುವುದಿಲ್ಲ ಎಂಬ ಸತ್ಯವನ್ನೇ ನಂಬಲು ನಾವು ಸಿದ್ಧರಿರುವುದಿಲ್ಲ.

ಬದುಕು ನಕಾರಾತ್ಮಕ ಧೋರಣೆಯಿಂದ ತುಂಬಿದೆ
ಇಂತಹ ನಂಬಿಕೆಯ ಕೊರತೆ ಭಾರತೀಯರಾದ ನಮಗೆ ನಮ್ಮ ಸಂಸ್ಕೃತಿಯಿಂದಲೇ ಸ್ವಭಾವಜನ್ಯವಾಗಿ ಒಂದುಬಿಟ್ಟಿದೆ ಅಥವಾ ಇಂದಿನ ಆಧುನಿಕ ಬದುಕಿನ ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳು ನಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರ ಬಗ್ಗೆಯೂ ನಾವು ಜಾಗರೂಕರಾಗಿ ಇರುವಂತೆ ಮಾಡುತ್ತಿದೆ. ನಮ್ಮ ಬದುಕು ಬರೀ ನಕಾರಾತ್ಮಕ ಧೋರಣೆಯಿಂದಲೇ ತುಂಬಿಹೋಗಿದೆ ಮತ್ತು ಸಂಶಯದ ವಾತಾವರಣವನ್ನು ನಾವು ನಿರಂತರವಾಗಿ ಬಲಗೊಳಿಸುತ್ತಾ ಬಂದಿದ್ದೇವೆ ಎಂಬುದನ್ನು ಪರಿಶೀಲಿಸುವ ಗೋಜಿಗೆ ನಾವು ಹೋಗುವುದಿಲ್ಲ. ಇಂತಹ ವಾತಾವರಣದಲ್ಲಿ ನಮ್ಮೊಳಗೆ ಮತ್ತು ಇತರರಲ್ಲಿ ಇರುವ ಒಳ್ಳೆಯ ಗುಣ ಗುರುತಿಸುವ ಕಾರ್ಯ ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದೇವೆಯೇ ಎನಿಸುತ್ತದೆ. ಸಮಾಜದಿಂದ ನಾವು ಕಲಿತ ಮೌಲ್ಯಗಳು ಏನಾದವು, ಇದನ್ನು ಸ್ಥಳೀಯ ಸ್ನೇಹಿತರು ಹಾಗೂ ಅವರ ಸಾಂಪ್ರದಾಯಿಕ ವಿವೇಚನೆಯಿಂದ ಕಲಿಯಲು ನಮಗೆ ಸಾಧ್ಯವಿಲ್ಲವೇ ಎಂದು ನಮಗೆ ಕೆಲವೊಮ್ಮೆ ಎಣಿಸುವುದುಂಟು.

ಪ್ರತಿಯೊಬ್ಬರಲ್ಲೂ ಮಾನವೀಯತೆ ಇದೆ
ನಮ್ಮ ಕುಟುಂಬ, ಶಾಲೆ, ಪರಿಸರ ಮತ್ತು ನಾವು ಒಟ್ಟಿಗೇ ಬದುಕುವ ಜನರಿಂದ ನಮ್ಮ ಮೌಲ್ಯಗಳು ರೂಪುಗೊಳ್ಳುತ್ತವೆ. ದಿನನಿತ್ಯದ ನಮ್ಮ ಸಂವಹನ, ಅನುಭವಗಳು ಸಮಾಜದಲ್ಲಿ ನಮ್ಮ ನಡವಳಿಕೆ, ವರ್ತನೆಯನ್ನು ನಿರಂತರವಾಗಿ ರೂಪಿಸುತ್ತಾ ಸಾಗುತ್ತದೆ. ಜನ್ಮಾಂತರದಿಂದಲೂ ನಾವು ಒಳ್ಳೆಯವರೇ, ಮಾನವೀಯ ಅಂತಃಕರಣ ನಮ್ಮೊಳಗೂ ಅಡಗಿದೆ ಎಂಬುದನ್ನು ನಾವು ನಿರಂತರವಾಗಿ ಜ್ಞಾಪಿಸಿಕೊಂಡಿರಬೇಕಾಗುತ್ತದೆ. ಶಿಕ್ಷಣ, ಅನುಭವ, ಸಮಾಜ, ಜನರೊಂದಿಗಿನ ನಮ್ಮ ದಿನನಿತ್ಯದ ವ್ಯವಹಾರಗಳು ನಮ್ಮನ್ನು ಪ್ರತಿಗಾಮಿಯನ್ನಾಗಿಸಿ ಪ್ರತಿಯೊಬ್ಬರ ಬಗ್ಗೆಯೂ ಎಚ್ಚರಿಕೆಯಿಂದ ವರ್ತಿಸುವಂತೆ ಮಾಡಿಬಿಟ್ಟಿದೆ. ಇಂತಹ ಸ್ಥಿತಿಯನ್ನು ಈಗ ಬದಲಿಸುವ ಅಗತ್ಯವಿದೆ.

ದೃಷ್ಟಿಕೋನ, ನಂಬಿಕೆ ಬದಲಾಗಲಿ
ಪ್ರಸಕ್ತ ಸ್ಥಿತಿಯನ್ನು ಬದಲಿಸಲು ಒಳ್ಳೆಯವರಾಗಿ ಇರುವುದು, ಒಳ್ಳೆಯದನ್ನು ಮಾಡುವುದು ನಮಗೆ ಮುಂದಿರುವ ಮಾರ್ಗ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾವುದನ್ನು ವ್ಯಕ್ತಪಡಿಸುತ್ತೇವೆಯೋ ಅದೆಲ್ಲದರ ಒಟ್ಟು ಮೊತ್ತವೇ ಸಾಮಾಜಿಕ ಮೌಲ್ಯ. ಮೊದಲು ನಮ್ಮ ವರ್ತನೆ , ಜೀವನದ ಬಗೆಗಿನ ದೃಷ್ಟಿಕೋನ, ನಂಬಿಕೆ ಬದಲಾಗಬೇಕು. ದಿನನಿತ್ಯದ ಆಗುಹೋಗುಗಳಲ್ಲಿ ಪ್ರೀತಿ, ನಂಬಿಕೆಯ ವಾತಾವರಣ ನಾವು ಮರಳಿ ತರಬೇಕಾಗಿದೆ. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಚಿಂತೆ ಮಾಡುವ ಪ್ರಮೇಯ, ನಮ್ಮ ಎದುರಿಗಿನ ವ್ಯಕ್ತಿಯ ಬಗ್ಗೆ ಅನಾವಶ್ಯಕ ಜಾಗರೂಕತೆ ವಹಿಸಬೇಕಾದ ಅಗತ್ಯ ನಮಗೆ ಬರುವುದಿಲ್ಲ.

Advertisement

ನಂಬಿಕೆ ಊರುಗೋಲಾಗಿಸಿ
ಬದುಕು ಒಂದು ನಿರಂತರ ಪಯಣ. ಈ ದಾರಿಯಲ್ಲಿ ನೋವು ಇದ್ದುದೇ. ಈ ಸಂದರ್ಭ ಬೇರೆ ತರಹದ ಸನ್ನಿವೇಶ, ಸಂದರ್ಭಗಳು ನಮ್ಮ ಹೃದಯವನ್ನು ತಟ್ಟಿ ನಮ್ಮನ್ನು ಅಧೀರನನ್ನಾಗಿಸುತ್ತದೆ. ನನ್ನ ಬಗ್ಗೆ ನಾನು ಅರ್ಥ ಮಾಡಿಕೊಂಡು ಸಾಗಿದಾಗ ಅರ್ಥವಾಗದ ಸನ್ನಿವೇಶಗಳು ನಮ್ಮ ಬದುಕನ್ನು ನಿಯಂತ್ರಿಸುತ್ತವೆ. ಆಗ ಮನಸ್ಸು ಅದೇನೋ ಅರ್ಥವಾಗದ ಕಳವಳದಲ್ಲಿ ಮುಳುಗಿರುತ್ತದೆ. ಆಗ ನಂಬಿಕೆ ಎಂಬುದನ್ನು ನಾವು ಊರುಗೋಲಾಗಿ ಹಿಡಿದುಕೊಂಡು ಮುಂದೆ ನಡೆಯಬೇಕಾಗುತ್ತದೆ.

- ಜಯಾನಂದ ಅಮೀನ್‌, ಬನ್ನಂಜೆ

          
Advertisement

Udayavani is now on Telegram. Click here to join our channel and stay updated with the latest news.

Next