ಬೆಂಗಳೂರು: ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅಲಿಯಾಸ್ ನೆಟ್ಟಾಲ ಮುತ್ತಪ್ಪ ರೈ ಅವರ ಹಿನ್ನೆಲೆಯೇ ಒಂದು ರೋಚಕ. ಸದೆಬಡಿದು ಭೂಗತ ಲೋಕಕ್ಕೆ ಎಂಟ್ರಿಕೊಟ್ಟರು. ಪುತ್ತೂರು ಮೂಲದ ಮುತ್ತಪ್ಪ ರೈ, ವಿಜಯ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರು. ಹೋಟೆಲ್‌ವೊಂದರಲ್ಲಿ ಪಾಲುದಾರಿಕೆ ಪಡೆದು ನಡೆಸುತ್ತಿದ್ದರು. ಬಳಿಕ ನಿಧಾನವಾಗಿ ರೌಡಿಸಂಗೆ ಇಳಿದಿದ್ದ ಮುತ್ತಪ್ಪ ರೈಗೆ ಆಗಾಗ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು, 1989-90 ರ ಆಸು ಪಾಸಿನಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದರು. ಈ ಮೂಲಕ ತನ್ನದೇ ಸಾಮ್ರಾಜ್ಯ ಕಟ್ಟಲು ಮುಂದಾಗಿದ್ದರು. ಅಲ್ಲದೆ ಬೆಂಗಳೂರು, ಮಂಗಳೂರಿನ ಕೆಲ ಪಬ್ ಅಂಡ್ ರೆಸ್ಟೋರೆಂಟ್ ಗಳಿಗೆ ಭದ್ರತೆ ಕೊಡುತ್ತಿದ್ದರು. ಸಕಲೇಶಪುರದ ಲ್ಯಾಂಡ್ ಮಾಫಿಯಾ ಬಗ್ಗೆ ಎಂಜಿ ರಸ್ತೆಯ ಕೆಫೆಯೊಂದರಲ್ಲಿ ಆತ ಮೀಟಿಂಗ್ ನಡೆಸುತ್ತಿದ್ದಾಗ, ಅದನ್ನರಿತ ಪೊಲೀಸರು ಆತನನ್ನ ಬಂಧಿಸಲು ತೆರಳುವ ಸಂದರ್ಭದಲ್ಲೇ ನಾಪತ್ತೆಯಾಗಿದ್ದರು.
ಪ್ರಾಣಾಪಾಯದಿಂದ ಪಾರು: ಇದೇ ವೇಳೆ ಕೊತ್ವಾಲ್ ರಾಮಚಂದ್ರ, ಡಾನ್ ಜಯರಾಜ್ ನಂತರದಲ್ಲಿ ರೌಡಿಸಂನಲ್ಲಿ ಹೆಸರು ಮಾಡಿದ್ದೇ ಮುತ್ತಪ್ಪ ರೈ. ಇನ್ನೂ 1995 ರಲ್ಲಿ ಪೊಲೀಸ್ ಇಲಾಖೆ ಆ್ಯಂಟಿ ರೌಡಿ ಸ್ಕ್ವಾಡ್ ಟೀಂ ರಚನೆ ಮಾಡಿತ್ತು. ರೈ ಹುಡುಕಾಟ ಕೂಡ ಆರಂಭಿಸಿತ್ತು. ತನ್ನದೇ ತಂಡ ಕಟ್ಟಿಕೊಂಡಿದ್ದ ರೈ ಎದುರಾಳಿ ತಂಡವನ್ನು ಮಣಿಸುತ್ತಿದ್ದರು. ಒಮ್ಮೆ ಯಾವುದೋ ನಿವೇಶನ ವಿಚಾರಕ್ಕೆ ಸಭೆ ನಡೆಸುತ್ತಿದ್ದ ರೈ ಮೇಲೆ ಎದುರಾಳಿ ತಂಡ ಗುಂಡಿನ ದಾಳಿ ನಡೆಸಿತ್ತು. ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಹಿನ್ನೆಲೆ 1995-96 ರಲ್ಲಿ ಮುಂಬೈಗೆ ತೆರಳಿದ್ದ ಮುತ್ತಪ್ಪ ರೈ ಭೂಗತ ಜಗತ್ತು ಹೇಗಿರುತ್ತೆ ಹಾಗೂ ಅದರ ಲಿಂಕ್ ಬಗ್ಗೆ ತಿಳಿದುಕೊಂಡಿದ್ದರು. ಬಳಿಕ ದುಬೈನಲ್ಲಿ ತಲೆಮರೆಸಿಕೊಂಡಿದ್ದರು.
ಜಯರಾಜ್ ಹತ್ಯೆ: ಈ ಮಧ್ಯೆ ಕುಮಾರ್ ಅಲಿಯಾಸ್ ಆಯಿಲ್ ಕುಮಾರ್ ಜತೆ ಸಂಪರ್ಕ ಹೊಂದಿದ್ದ ರೈ ಆತನಿಂದ ಸುಪಾರಿ ಪಡೆದು, ಡಾನ್ ಜಯರಾಜ್ ನನ್ನು ಹತ್ಯೆಗೈದ ಆರೋಪ ಎದುರಿಸಿದ್ದರು. ಇದು ಬೆಂಗಳೂರು ಮಾತ್ರವಲ್ಲದೆ, ದೇಶದ ಭೂಗತ ಜಗತ್ತು ರೈ ಕಡೆ ನೋಡುವಂತೆ ಮಾಡಿತ್ತು. ಅನಂತರ ರೈ ಭೂಗತ ಜಗತ್ತಿನಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ಇನ್ನೂ ಮುತ್ತಪ್ಪ ರೈ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣವೂ ನಡೆದಿತ್ತು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರೈ ಅನ್ನೋ ಸಿನಿಮಾ ನಿರ್ದೇಶನ ಮಾಡಿದ್ದರು. ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಮಾಡಿದ್ದ ವರ್ಮಾ ಮಂಗಳೂರು, ಬೆಂಗಳೂರು, ಮುಂಬೈ, ದುಬೈ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ಮಾಡಿದ್ದರು. ಮುತ್ತಪ್ಪ ರೈಯನ್ನು ಬೆಂಗಳೂರು ನ್ಯಾಯಾಲಯ ಆವರಣದಲ್ಲಿ ವಿರೋಧಿ ತಂಡದ ರೌಡಿಗಳು ಗುಂಡಿಟ್ಟು ಸಾಯಿಸಲು ಯತ್ನಿಸಿದ್ದರು. ಕೊನೆಗೂ ಬದುಕುಳಿದ ರೈ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾಗಿದ್ದರು.
ದುಬೈನಲ್ಲಿ ಎನ್.ಎಂ.ರೈ: ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮುತ್ತಪ್ಪ ರೈ ಅಲ್ಲಿನ ಜನರಿಗೆ ಎನ್.ಎಂ.ರೈ ಎಂದು ಪರಿಚಯಿಸಿಕೊಂಡಿದ್ದರು. ಸ್ಥಳೀಯ ವ್ಯಕ್ತಿ ಜತೆ ಸೇರಿಕೊಂಡು ಅಲ್ಲಿಯೇ ಸಾಫ್ಟ್ವೇರ್ ಕಂಪನಿಯನ್ನು ಸ್ಥಾಪಿಸಿದ್ದರು. ಅಲ್ಲಿಂದಲೇ ಕರ್ನಾಟಕದಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಮುಂದಾದರು. ಕೂತಲ್ಲೇ ಫೋನ್ ಮೂಲಕ ನಿರ್ದೇಶನ ನೀಡ್ತಿದ್ದ ಮತ್ತಪ್ಪ ರೈ ಎನ್ ಕೌಂಟರ್ ಮಾಡ ಲಾಗುತ್ತೆ ಎಂಬ ಸುದ್ದಿ ಅವರ ಮೊದಲ ಪತ್ನಿ ರೇಖಾ ಕಿವಿಗೆ ಬೀಳುತ್ತಿದ್ದಂತೆ ಆಕೆ, ಪೊಲೀಸರಿಗೆ ದಯವಿಟ್ಟು ಆ ರೀತಿ ಮಾಡಬೇಡಿ ಎಂದು ಗೋಗರೆಯು ತ್ತಿದ್ದರಂತೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಹಲವು ವಿವಾದ..ಗಂಭೀರ ಆರೋಪಗಳು…: ಭೂಗತ ಪಾತಕಿಗಳ ಜತೆ ಸಂಪರ್ಕ, ರಿಯಲ್ ಎಸ್ಟೇಟ್ ಮಾಫಿಯಾ, ಹಫ್ತಾ ವಸೂಲಿ ಸೇರಿ ಹಲವು ಗಂಭೀರ ಆರೋಪಗಳು ಮುತ್ತಪ್ಪ ರೈ ಮೇಲೆ ಕೇಳಿ ಬರುತ್ತಿದ್ದವು. ಬೆಂಗಳೂರಿನಲ್ಲಿ ಯಾರದ್ದಾದರೂ ಕೊಲೆ ನಡೆದಾಗಲೂ ಪೊಲೀಸರ ತನಿಖಾ ದೃಷ್ಟಿ ಮುತ್ತಪ್ಪ ರೈ ಕಡೆಗೂ ನೆಡುತ್ತಿತ್ತು. ಅಥವಾ ಅವರಿಂದ ಮಾಹಿತಿ ಪಡೆಯುವ ಸಲುವಾಗಿಯೂ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿದ್ದ ಎಸ್ ಐಟಿ ಕೂಡ ಮುತ್ತಪ್ಪ ರೈ ಅವರನ್ನು ವಿಚಾರಣೆ ನಡೆಸಿತ್ತು. ಅಷ್ಟೇ ಅಲ್ಲದೆ ಭೂಗತ ಪಾತಕಿ ರವಿ ಪೂಜಾರಿ ಬಳಿಕ ಸಿಸಿಬಿ ಪೊಲೀಸರು ಮುತ್ತಪ್ಪ ರೈ ಅವರನ್ನೂ ಕರೆಸಿ ವಿಚಾರಣೆ ನಡೆಸಿದ್ದರು. ಪೂಜಾರಿ ಜತೆಗಿನ ಸಂಪರ್ಕ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಆಯುಧ ಪೂಜೆ ವಿವಾದ: ಕಳೆದ ವರ್ಷ ಆಯುಧ ಪೂಜೆ ಸಲುವಾಗಿ ತಮ್ಮ ಬಳಿಯಲ್ಲಿನ ಕೆಲವು ಶಸ್ತ್ರಸ್ತ್ರಾಉಗಳನ್ನು ಇಟ್ಟು ರೈ ಪೂಜೆ ನಡೆಸಿದ್ದ ಪೋಟೋ ವೈರಲ್ ಆಗಿತ್ತು.
ಪ್ರಾಣಭಯದಿಂದ ವಿದೇಶಕ್ಕೆ ರೈ ಪಯಣ: ಜಯರಾಜ್ ಹತ್ಯೆ ಪ್ರಕರಣದ ಬಳಿಕ ಮುತ್ತಪ್ಪ ರೈ ಹೆಸರು ಪಾತಕಲೋಕದಲ್ಲಿ ಹೆಚ್ಚು ಚಾಲ್ತಿಗೆ ಬಂದಿತ್ತು. ಜಯರಾಜ್ ಹತ್ಯೆ ಬಳಿಕ ಬೆಂಗಳೂರು ಪೊಲೀಸರು ರೈ ಬಂಧಿಸಿ, ಎನ್‌ಕೌಂಟರ್‌ಗೂ ಸಿದತೆ ನಡೆಸಿದ್ದರು. ಈ ಸುಳಿವು ಅರಿತೇ ರೈ ಕುಟುಂಬ ಸಮೇತ ದುಬೈಗೆ ಹಾರಿದ್ದರು ಎಂದು ಹೇಳಲಾಗುತ್ತಿತ್ತು. ಎಂಟು ಕೊಲೆ ಆರೋಪ ಹೊತ್ತಿದ್ದ ರೈ ಹೆಸರು 2001 ರಲ್ಲಿ ನಡೆದಿದ್ದ ಉದ್ಯಮಿ ಸುಬ್ಬರಾಜು ಕೊಲೆಕೇಸ್ ಸೇರಿ ಹಲವು ಪ್ರಕರಣಗಳಲ್ಲಿ ಹೆಸರು ಕೇಳಿ ಬಂದಿತ್ತು.