ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ಏ. 29ರಂದು ನಾಮಪತ್ರ ಸಲ್ಲಿಸುವುದಾಗಿ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಂದಗೋಳ ಕ್ಷೇತ್ರದಲ್ಲಿ ಕುರುಬ ಸಮಾಜದ ಮತಗಳು ಹೆಚ್ಚಿದ್ದು, ಈ ಸಮಾಜಕ್ಕೆ ಸೇರಿದ ನನಗೆ ಕ್ಷೇತ್ರದ ಜನತೆ ಕೈಹಿಡಿಯಲಿದ್ದಾರೆ.
Advertisement
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಅವರಿಗೆ ಮನವರಿಕೆ ಮಾಡಿದ್ದೇನೆ. ಮುಖಂಡರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಪಕ್ಷದಲ್ಲಿ ಕುರುಬ ಸಮಾಜದ ಮುಖಂಡರ ಬೆಳವಣಿಗೆ ಅಗತ್ಯವಿರುವ ಕಾರಣ ಸ್ಪರ್ಧೆ ಮಾಡಲು ಇಚ್ಛಿಸಿದ್ದೇನೆ. ಪಕ್ಷದ ಮುಖಂಡರು ನನ್ನನ್ನು ಪರಿಗಣಿಸಿದರೆ ಜಯ ನಿಶ್ಚಿತವಾಗಿದೆ. 29ರಂದು ಕುಂದಗೋಳದ ಶ್ರೀ ಗಾಳಿ ಮಾರೆಮ್ಮ ದೇವಸ್ಥಾನದಿಂದ ಚುನಾವಣಾ ಕಚೇರಿವರೆಗೂ ಬೃಹತ್ ಮೆರವಣಿಗೆ ಮೂಲಕ ತೆರಳಿ ಮಧ್ಯಾಹ್ನ 12:15ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಕುಂದಗೋಳ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಶ್ರೀ ಶಿವಾನಂದ ಮಠ ಸಭಾಭವನದಲ್ಲಿ ಜೆಡಿಎಸ್ ತಾಲೂಕು ಘಟಕದಿಂದ ಪೂರ್ವಭಾವಿ ಸಭೆಯನ್ನು ಏ. 27ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಜಿಲ್ಲಾಧ್ಯಕ್ಷ ಬಿ.ವಿ. ಗಂಗಾಧರಮಠ, ತಾಲೂಕಾಧ್ಯಕ್ಷ ಯಲ್ಲಪ್ಪ ಮಾದನೂರ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಯುವ ಘಟಕದ ಅಧ್ಯಕ್ಷ ಶೇಖಣ್ಣ ಹರಕೂಣಿ, ನಗರ ಘಟಕದ ಅಧ್ಯಕ್ಷ ಮಹಬೂಬಲಿ ಹುಬ್ಬಳ್ಳಿ, ಛಬ್ಬಿ ವಲಯದ ಅಧ್ಯಕ್ಷ ಜಿ.ಎಫ್. ಹಿರೇಗೌಡ್ರ, ಪಪಂ ಉಪಾಧ್ಯಕ್ಷರಾದ ಸಾವಕ್ಕ ಬಡಿಗೇರ, ರಝಿಯಾಬೇಗಂ ಹಸೂಬಾಯಿ, ನಾರಾಯಣ ಹೂಗಾರ, ಆರ್.ಜಿ. ಪಾಟೀಲ, ಹಜರತ್ ಅಲಿ ಜೋಡಮನಿ ಇನ್ನಿತರರು ಆಗಮಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಆರ್.ಎನ್. ಕಮತದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ 29ರ ವರೆಗೂ ಅವಕಾಶ
ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕನೆಯ ದಿನವಾದ ಗುರುವಾರ ಕೂಡ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಸಲು ಏ. 29ರ ವರೆಗೆ ಅವಕಾಶವಿದೆ ಎಂದು ಚುನಾವಣಾಧಿಕಾರಿ ಪ್ರಸನ್ನ ತಿಳಿಸಿದ್ದಾರೆ.