ಶಿವಮೊಗ್ಗ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಾಕೀತು ಮಾಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಗಳ ನಡುವೆ ಸಮನ್ವಯತೆ ಸಾಧಿಸಲು ಪೇಜಾವರ ಶ್ರೀಗಳು ಉಡುಪಿ ಶ್ರೀ ಕೃಷ್ಣಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ. ಅವರ ಈ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ವಿಶ್ವೇಶ ತೀರ್ಥ ಸ್ವಾಮೀಜಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಕುರಿತು ಯಾರೂ ಲಘುವಾಗಿ ಮಾತನಾಡಬಾರದು. ಅಲ್ಲದೆ ಇಫ್ತಾರ್ ಕೂಟದ ಬಗ್ಗೆ ಶ್ರೀಗಳ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೂ ಇದನ್ನೇ ಹೇಳುತ್ತೇನೆ ಎಂದರು.
ರಾಜ್ಯದಲ್ಲಿ ಬಿಜೆಪಿಯನ್ನು ಆಡಳಿತಕ್ಕೆ ತರಲು ಸುಮಾರು 25,000 ವಿಸ್ತಾರಕರನ್ನು ನೇಮಿಸಲಾಗಿದೆ. ಪ್ರತಿ ಜಿಲ್ಲೆಯಿಂದ ಸುಮಾರು ಒಂದು ಸಾವಿರ ವಿಸ್ತಾರಕರು ಕೆಲಸ ಮಾಡಲಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಇವರು ಮನೆ ಮನೆ ಪ್ರಚಾರ ಮಾಡಲಿದ್ದಾರೆ. ತಾವು ಕೂಡ ಸದ್ಯದಲ್ಲಿಯೇ 10ರಿಂದ 15 ದಿನ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದರು.
ಸುಷ್ಮಾ ಸ್ವರಾಜ್ ಜತೆ ಮಾತುಕತೆ
ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ವಿದ್ಯಾರ್ಥಿನಿಯೊಬ್ಬಳು ಅಮೆರಿಕದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ಅಥವಾ ತವರಿಗೆ ಕರೆತರಲು ಎಲ್ಲಾ ಯತ್ನ ನಡೆಸಲಾಗುತ್ತಿದೆ. ಈ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆ ಮಾತನಾಡಲಾಗಿದೆ. ಅಲ್ಲದೆ ವಿದ್ಯಾರ್ಥಿನಿಯ ಕುಟುಂಬದವರು ಅಮೆರಿಕಾಕ್ಕೆ ತೆರಳಲು ವೀಸಾ ಅವಶ್ಯಕತೆ ಇದೆ. ಈ ನಿಟ್ಟಿನಲ್ಲೂ ಸಂಬಂಧಪಟ್ಟವರೊಂದಿಗೆ ತಾವು ಸಂಪರ್ಕದಲ್ಲಿರುವುದಾಗಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.