Advertisement

ಶಿವಮೊಗ್ಗದ ನಾಲ್ವರಿಗೆ ರೂಪಾಂತರಿತ ಸೋಂಕು

12:55 AM Dec 31, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಾಲ್ವರಲ್ಲಿ ರೂಪಾಂತರಿತ ವೈರಸ್‌ ಸೋಂಕು ಪತ್ತೆಯಾಗಿದೆ. ಹೊಸದಾಗಿ ಈ ಸೋಂಕು ಪತ್ತೆಯಾದವರು ಶಿವಮೊಗ್ಗದವರಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Advertisement

ಶಿವಮೊಗ್ಗದ ನಾಲ್ವರ ಸಹಿತ ರಾಜ್ಯದಲ್ಲಿ ಇದುವರೆಗೆ ಒಟ್ಟು ಏಳು ಮಂದಿಯಲ್ಲಿ ರೂಪಾಂತರಿತ ವೈರಸ್‌ ಪತ್ತೆಯಾಗಿದೆ. ದೇಶ ಮಟ್ಟದಲ್ಲಿ ಹೊಸ ಸೋಂಕುಪೀಡಿತರ ಸಂಖ್ಯೆ 20ಕ್ಕೆ ಏರಿದೆ. ಇದರ ಮಧ್ಯೆ ರಾಜ್ಯದಲ್ಲಿ ರೂಪಾಂತರಿತ ಕೊರೊನಾ ವೈರಸ್‌ ಪತ್ತೆ ಪರೀಕ್ಷೆಯ ಪಾಸಿಟಿವಿಟಿ ದರ ಹೆಚ್ಚು ಕಡಿಮೆ ಅರ್ಧ ದಷ್ಟಿರುವುದು ಆತಂಕ ಮೂಡಿಸಿದೆ. ಈವರೆಗೆ ಈ ವೈರಾಣುವಿನ ವಂಶವಾಹಿ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಿದ ತಲಾ ಇಬ್ಬರಲ್ಲಿ ಒಬ್ಬರಲ್ಲಿ ಅದು ದೃಢಪಟ್ಟಿದೆ. ದಿಲ್ಲಿ ಬಿಟ್ಟರೆ ಹೆಚ್ಚು ರೂಪಾಂತರಿತ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ ಕರ್ನಾಟಕದಲ್ಲಿವೆ.

ಶೇ. 2ರಷ್ಟು ಮಂದಿಗೆ ಸೋಂಕು!
ಡಿಸೆಂಬರ್‌ನಿಂದೀಚೆಗೆ ಬ್ರಿಟನ್‌ನಿಂದ ಬಂದ ಪ್ರಯಾಣಿಕರಲ್ಲಿ ಶೇ. 2 ಮಂದಿಯಲ್ಲಿ ಹೊಸ ಸೋಂಕು ದೃಢಪಟ್ಟಿದೆ. ಇಲಾಖೆಯ ಮಾಹಿತಿ ಪ್ರಕಾರ ಡಿ. 1ರಿಂದ ಡಿ. 23ರ ವರೆಗೆ 2,127 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಪೈಕಿ 1,717 ಮಂದಿಯ ಪರೀಕ್ಷೆ ಮುಕ್ತಾಯಗೊಂಡಿದ್ದು, 31 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಪರೀಕ್ಷೆಗೆ ಒಂದೇ ಪ್ರಯೋಗಾಲಯ
ರೂಪಾಂತರಿತ ಕೊರೊನಾ ಸೋಂಕು ಪತ್ತೆಗೆ ದೇಶದಲ್ಲಿ 10 ಎರಡು ಪ್ರಯೋಗಾಲಯಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ ನಿಮ್ಹಾನ್ಸ್‌ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಜೀವಶಾಸ್ತ್ರ ವಿಭಾಗ (ಬಿಡಿಟಿ) ಸೇರಿ ಎರಡು ಪ್ರಯೋಗಾಲಯ ಗಳಿವೆ. ಆದರೆ ಈವರೆಗೆ ನಿಮ್ಹಾನ್ಸ್‌ನಲ್ಲಿ ಮಾತ್ರ ಪರೀಕ್ಷೆ ನಡೆಯುತ್ತಿದ್ದು, ಐಐಎಸ್‌ಸಿ ಪ್ರಯೋಗಾಲಯವನ್ನು ಬಳಸಿಕೊಂಡಿಲ್ಲ. ಒಮ್ಮೆಗೆ ಎರಡು ಪ್ರಯೋಗಾಲಯ ಬಳಸಿದರೆ ಶೀಘ್ರ ರೂಪಾಂತರಿತ ಸೋಂಕು ಪತ್ತೆ ಮಾಡಿ ಹರಡುವಿಕೆ ತಡೆಗಟ್ಟಬಹುದಾಗಿದೆ.

ಪತ್ತೆಯಾಗಲೇ ಇಲ್ಲ 162 ಮಂದಿ
ಇಂಗ್ಲೆಂಡ್‌ನಿಂದ ಬಂದ 2,127 ಪ್ರಯಾಣಿಕರಲ್ಲಿ ಈವರೆಗೆ 1,965 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಇನ್ನುಳಿದ 162 ಮಂದಿ ಪತ್ತೆಯಾಗಿಲ್ಲ. 1,717 ಮಂದಿಯ ಪರೀಕ್ಷೆ ಮುಕ್ತಾಯವಾಗಿದ್ದು, 248 ಮಂದಿಯ ವರದಿ ಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next