ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾ.ಪಂ.ಗಳ ಪೈಕಿ ಅವಧಿ ಪೂರ್ಣಗೊಂಡ 46 ಗ್ರಾ.ಪಂ.ಗಳ 634 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ. ಈ ಪ್ರಯುಕ್ತ ಶನಿವಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಸಕಲ ಪೊಲೀಸ್ ಬಂದೋಬಸ್ತುನಿಂದ ಮುಂಜಾನೆ 6 ಗಂಟೆಯಿಂದ ತಯಾರಿ ನಡೆದು, 10 ಗಂಟಯಿಂದ ಮಸ್ಟರಿಂಗ್ ಆರಂಭಗೊಂಡಿತ್ತು. ಸಂಜೆ 3 ಗಂಟೆಗೆ ಬಹುತೇಕ ಸಿಬ್ಬಂದಿ ಮತಪೆಟ್ಟಿಗೆ ಹಿಡಿದು ತಮ್ಮ ತಮ್ಮ ಮತಗಟ್ಟೆಗೆ ತೆರಳಿದರು.
46 ಗ್ರಾ.ಪಂ.ಗಳ ಒಟ್ಟು 631 ಸ್ಥಾನಗಳ ಪೈಕಿ ಒಟ್ಟು 6 ಗ್ರಾ.ಪಂ.ಗಳ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, ಪ್ರಸಕ್ತ 624 ಸ್ಥಾನಗಳಿಗೆ ರವಿವಾರ ಚುನಾವಣೆ ನಡೆಯಲಿದೆ. ಒಟ್ಟು 1439 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
1605 ಮಂದಿ ಸಿಬ್ಬಂದಿ ನೇಮಕ
ಉಜಿರೆ ಎಸ್.ಡಿ.ಎಂ ಪಿ.ಯು.ಕಾಲೇಜು ಹಾಗೂ ಎಸ್.ಡಿ.ಎಂ. ಪದವಿ ಕಾಲೇಜಿನ 2 ಕಡೆ ಮಸ್ಟರಿಂಗ್ ಕೇಂದ್ರ ಸಿದ್ಧಪಡಿಸಲಾಗಿತ್ತು. ಒಟ್ಟು 1605 ಮಂದಿ ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತಗಟ್ಟೆ ಅಧಿಕಾರಿ-321 (ಪಿಆರ್‌ಒ), ಒಂದನೇ ಮತಗಟ್ಟೆ ಅಧಿಕಾರಿ-321 (ಎಪಿಆರ್‌ಒ), 2ನೇ, 3ನೇ ಮತಗಟ್ಟೆ ಅಧಿಕಾರಿ- 642, ಡಿ ಗ್ರೂಪ್ ಸಿಬಂದಿ- 321 ಒಟ್ಟು 1605 ಮಂದಿ ನೇಮಿಸಲಾಗಿದೆ.
ಇದನ್ನೂ ಓದಿ:ನಗರದಲ್ಲಿ ನಕಲಿ ಮಾರ್ಷಲ್‌ನಿಂದ ದಂಡ ಸಂಗ್ರಹ ! ಹಿಡಿದು ಪೊಲೀಸರಿಗೊಪ್ಪಿಸಿದ ಅಸಲಿ ಮಾರ್ಷಲ್ಸ್
ಮುಂಜಾನೆಯಿಂದ ಮತಗಟ್ಟೆ ಸಿಬ್ಬಂದಿಗಳ 5 ಮಂದಿಯ ತಂಡವನ್ನು ಒಂದೆಡೆ ಸೇರಿಸಿ, ಬ್ಯಾಲೆಟ್ ಪೇಪರ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಜೋಡಿಸಲಾಯಿತು.
ಸ್ಥಳಕ್ಕೆ ಎಡಿಸಿ ರೂಪಾ, ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ. ಮತ್ತು ಚುನಾವಣಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಭದ್ರತೆ ಹಾಗೂ ಸಿಬಂದಿಗಳ ಪೂರ್ವ ತಯಾರಿಯನ್ನು ಪರಿಶೀಲಿಸಿದರು.
ಮತಗಟ್ಟೆಗಳಿಗೆ ತೆರಳಲು 58 ಸಾರಿಗೆ ಬಸ್, 15 ಮ್ಯಾಕ್ಸಿಕ್ಯಾಬ್, 14 ಜೀಪ್ ಗಳನ್ನು ನಿಯೋಜಿಸಲಾಗಿತ್ತು. ಬಾಂಜಾರುಮಲೆ, ಎಳನೀರು ಹಾಗೂ ಶಿಶಿಲ ಮತಗಟ್ಟೆ ಸಿಬ್ಬಂದಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು. ಬಾಂಜಾರುಮಲೆ ಹಾಗೂ ಎಳನೀರು ಮತಗಟ್ಟೆಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.
ಎಲ್ಲಾ ಸಿಬ್ಬಂದಿಗಳಿಗೆ ಎಸ್.ಡಿ.ಎಂ.ಕಾಲೇಜು ಆವರಣದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.