Advertisement

ಅಭಿವೃದ್ಧಿ ಕಾಣಬೇಕಿದೆ ಹೊಸಹಿತ್ಲು ಬೀಚ್‌

10:17 AM Sep 27, 2019 | sudhir |

ಬೈಂದೂರು: ಬೈಂದೂರು ತಾಲೂಕು ಪ್ರವಾಸೋದ್ಯಮ ಬೆಳವಣಿಗೆಗೆ ವಿಪುಲ ಅವಕಾಶಗಳಿರುವ ಪ್ರದೇಶವಾಗಿದೆ. ನೈಸರ್ಗಿಕವಾಗಿ ಕಂಗೊಳಿಸುವ ಹಲವು ಸ್ಥಳಗಳು ಪ್ರವಾಸಿಗರನ್ನು ಇಲ್ಲಿಗೆ ಕೈ ಬೀಸಿ ಕರೆಯುತ್ತಿವೆ. ಇಂತಹ ಪ್ರವಾಸಿ ತಾಣಗಳಲ್ಲಿ ಒಂದಾದ ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಹಿತ್ಲು ಕಡಲ ಕಿನಾರೆ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ಅಭಿವೃದ್ಧಿ ಕಾಣಬೇಕಾಗಿದೆ.

Advertisement

ನೈಸರ್ಗಿಕ ಸೌಂದರ್ಯ ಹೊಂದಿದ ಪ್ರದೇಶ
ಹೊಸಹಿತ್ಲು ಸಮುದ್ರ ಕಿನಾರೆ, ಮರವಂತೆ, ಸೋಮೇಶ್ವರ ಹೊರತುಪಡಿಸಿದರೆ ಅತೀ ವಿಶಾಲವ್ಯಾಪ್ತಿ ಹೊಂದಿದ ತೀರವಾಗಿದೆ. ಸೋಮೇಶ್ವರದಿಂದ 15 ಕಿ.ಮೀ. ಹಾಗೂ ಮರವಂತೆಯಿಂದ 10 ಕಿ.ಮೀ. ಅಂತರ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 800 ಮೀಟರ್‌ ಅಂತರದಲ್ಲಿದೆ. ಖಂಬದಕೋಣೆ, ಹೇರೂರು, ನಾವುಂದ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮದ ಜನರು ಸಂಜೆಯ ಸೂರ್ಯಾಸ್ತ ವೀಕ್ಷಿಸಲು ಇಲ್ಲಿಗೆ ಆಗಮಿಸುತ್ತಾರೆ. ಬಹುತೇಕವಾಗಿ ಕಡಲ ಕಿನಾರೆಯಲ್ಲಿ ಅಪರೂಪವಾಗಿರುವ ಮುಳ್ಳಿನ ಗಿಡಗಳು ಸುಮಾರು 200 ಮೀಟರ್‌ವರೆಗೂ ಹಬ್ಬಿದೆ. ಆದ್ರಗೋಳಿಯಿಂದ ಹೊಸಹಿತ್ಲು ಪ್ರದೇಶದವರೆಗೆ ಸುಮಾರು 200 ಮೀನುಗಾರಿಕಾ ಕುಟುಂಬಗಳಿವೆ.ಇಲ್ಲಿನ ಹೊಸಹಿತ್ಲು ಫ್ರೆಂಡ್ಸ್‌ ಮುಂದಾಳತ್ವದಲ್ಲಿ ಕಡಲ ತೀರ ಸ್ವತ್ಛತೆ ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ ವ್ಯವಸ್ಥೆಗಳನ್ನು ದಾನಿಗಳ ನೆರವಿನಿಂದ ಮಾಡಿದೆ.

ಅನುದಾನ ಮಂಜೂರಾತಿಯಾಗಿದೆ, ಬಿಡುಗಡೆಯಾಗಿಲ್ಲ
ಹೊಸಹಿತ್ಲು ಬೀಚ್‌ ಅಭಿವೃದ್ಧಿಗೆ ಇಲ್ಲಿನ ಸ್ಥಳೀಯರು 2010ರಿಂದಲೇ ಪ್ರಸ್ತಾವ ಸಲ್ಲಿಸಿದ್ದರು. ಇಲ್ಲಿನ ಬೇಡಿಕೆಗೆ ಸ್ಪಂದಿಸಿದ ಅಂದಿನ ಶಾಸಕರು ಪ್ರವಾಸೋದ್ಯಮ ಇಲಾಖೆಗೆ ಈ ಸ್ಥಳದ ಅಭಿವೃದ್ಧಿ ಕುರಿತು ವರದಿ ಕೇಳಲಾಗಿತ್ತು. ಇಲಾಖೆ ಹೊಸಹಿತ್ಲು ಬೀಚ್‌ ಸಂಪೂರ್ಣ ಅಭಿವೃದ್ಧಿಗಾಗಿ 98 ಲಕ್ಷ ರೂ. ಬೇಡಿಕೆಯ ಪಟ್ಟಿ ತಯಾರಿಸಿದೆ. ಇದರಲ್ಲಿ ಹೈಮಾಸ್ಟ್‌ ಅಳವಡಿಕೆ, ರಸ್ತೆ, ಶೌಚಾಲಯ, ಪಾರ್ಕಿಂಗ್‌ ಒಳಗೊಂಡಿತ್ತು. ಬಳಿಕ ಕಳೆದ ಅವಧಿಯಲ್ಲಿ 15 ಲಕ್ಷ ರೂ. ಪ್ರವಾಸೋದ್ಯಮ ಇಲಾಖೆಯಿಂದ ಮಂಜೂ ರಾಗಿದೆ. ಆದರೆ ಈ ಅನುದಾನದಲ್ಲಿ ಯಾವೆಲ್ಲಾ ಕಾಮಗಾರಿ ನಡೆಸಬೇಕೆನ್ನುವ ಸ್ಪಷ್ಟತೆಯಿಲ್ಲದ ಕಾರಣ ಇದುವರೆಗೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರಕಾರ ಪ್ರವಾಸೋ ದ್ಯಮಕ್ಕೆ ವಿಶೇಷ ಒಲವು ನೀಡುತ್ತಿರುವ ಹಿನ್ನೆಲೆಯಲ್ಲಿ ಹೊಸಹಿತ್ಲು ಬೀಚ್‌ ಅಭಿವೃದ್ಧಿ ಶೀಘ್ರ ಕೈಗೆತ್ತಿಕೊಳ್ಳಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಅಭಿವೃದ್ಧಿಗೆ ಇಲಾಖೆ ಮುಂದಾಗಲಿ
ಕರಾವಳಿ ಪ್ರದೇಶದ ಸುಂದರ ತಾಣಗಳ ಲ್ಲೊಂದಾದ ಹೊಸಹಿತ್ಲು ಬೀಚ್‌ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಮೂಲ ಸೌಕರ್ಯಗಳನ್ನು ಒದಗಿ ಸುವ ಪ್ರಯತ್ನ ನಡೆಯಬೇಕಾಗಿದೆ.ಘೋಷಣೆಯಾದ ಅನುದಾನ ಬಿಡುಗಡೆ ಕುರಿತು ಜನಪ್ರತಿನಿಧಿಗಳು ಪ್ರಯತ್ನಿಸಬೇಕು.
-ಸಂತೋಷ ಚಂದನ್‌, ಹೊಸಹಿತ್ಲು ಫ್ರೆಂಡ್ಸ್‌

ಹಂತ ಹಂತವಾಗಿ ಅಭಿವೃದ್ಧಿ
ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಲಾಗಿದೆ. ಹೊಸಹಿತ್ಲು ಬೀಚ್‌ ಮೂಲ ಸೌಕರ್ಯ ಈಡೇರಿಕೆಗೆ ಇಲಾಖೆ ಅನುದಾನ ನೀಡಲು ಪತ್ರ ನೀಡಿದ್ದು ಮೊದಲ ಹಂತದಲ್ಲಿ 15 ಲಕ್ಷ ರೂ. ಬಿಡುಗಡೆಯಾಗಲಿದೆ. ಸಮುದ್ರ ಕೊರೆತ ನಿಯಂತ್ರಣ ರಸ್ತೆ ಸೇರಿದಂತೆ ಅಗತ್ಯ ಕಾಮಗಾರಿಗೆ ಮೊದಲಿಗೆ ಆದ್ಯತೆ ನೀಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

Advertisement

ವಿಶೇಷ ಆದ್ಯತೆ
ಹೊಸಹಿತ್ಲು ಬೀಚ್‌ ಅಭಿವೃದ್ಧಿಗೆ ಪ್ರಸ್ತಾವನೆ ಬಂದಿದೆ. ಶಾಸಕರ ಶಿಫಾರಸ್ಸಿನೊಂದಿಗೆ ಮೊದಲ ಹಂತದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅತಿ ಅಗತ್ಯ ಕಾಮಗಾರಿಗಾಗಿ 15 ಲಕ್ಷ ರೂ.ಅನುದಾನ ಮಂಜೂರಾಗಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲಾಖೆ ವಿಶೇಷ ಆದ್ಯತೆ ನೀಡಿದೆ.
-ಚಂದ್ರಶೇಖರ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next