ಜೇವರ್ಗಿ: ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಯ ಬಗ್ಗೆ ಸುಪ್ರೀಂಕೋರ್ಟ್ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ನಿರ್ದಿಷ್ಟ ಡೆಸಿಬಲ್, ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ನಿರ್ದಿಷ್ಟ ಮಿತಿಯ ಧ್ವನಿವರ್ಧಕ ಬಳಸಲು ಸೂಚಿಸಿದ್ದು, ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶ ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಶಿವಪ್ರಸಾದ ಮಠದ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸೌಹಾರ್ದ ವಾತಾವರಣ ಕೆಡೆಸಿ ಅಶಾಂತಿ ಸೃಷ್ಟಿ ಮಾಡುವವರ ಮೇಲೆ ನಿರ್ಧಾಕ್ಷಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ ನಿರ್ದಿಷ್ಟ ನಿಯಮಗಳನ್ನು ಮಾಡಲಾಗಿದ್ದು, ಅವುಗಳ ಪಾಲನೆ ಮಾಡಬೇಕು. ಪ್ರಾರ್ಥನಾ ಮಂದಿರಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಯಾವುದೆ ರೀತಿಯ ಧ್ವನಿ ವರ್ದಕಗಳನ್ನು ಅಥವಾ ಧ್ವನಿಯನ್ನುಂಟು ಮಾಡುವ ಢಮರುಗ, ಧ್ವನಿವರ್ಧಕ ಯಂತ್ರಗಳಿಂದ ಧ್ವನಿ ಹೊರಡಿಸಬಾರದು. ಒಂದು ವೇಳೆ ಸರಕಾರದ ಆದೇಶ ಮತ್ತು ನ್ಯಾಯಲಯದ ಆದೇಶ ಮೀರಿ ಯಾರಾದವರು ಧ್ವನಿ ವರ್ದಕಗಳನ್ನು ಬಳಸಿದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಶಾಂತಿಸಭೆಯಲ್ಲಿ ತಹಶೀಲ್ದಾರ್ ವಿನಯಕುಮಾರ ಪಾಟೀಲ್, ಸಬ್ ಇನ್ಸ್‌ಪೆಕ್ಟರ್ ಸಂಗಮೇಶ ಅಂಗಡಿ, ಅಲ್ಲಾಭಕ್ಷ ಭಾಗವಾನ್, ಕಾಶಿಂ ಪಟೇಲ ಮುದಬಾಳ, ಈಶ್ವರ ಹಿಪ್ಪರಗಿ, ಮೋಹಿನುದ್ದೀನ್ ಇನಾಂದಾರ, ನಿಂಗಣ್ಣಗೌಡ ಪಾಟೀಲ ರಾಸಣಗಿ, ಬಸೀರಸಾಬ್, ಸಿದ್ಧು ಪಾಟೀಲ, ಸಂತೋಷಗೌಡ ಯನಗುಂಟಿ, ಅಲ್ಲಾಪಟೇಲ ಇಜೇರಿ, ಮೈಹಿಬೂಬಸಾಬ ಮುಲ್ಲಾ ಚನ್ನೂರ, ಮಹಿಮೂದ್ ಪಟೇಲ, ಇಮಾಮಸಾಬ, ಆಸೀಫ್‌ಸಾಬ ಟೋಪಿ, ಮೋಸಿನ್ ಜಹಾಗೀರದಾರ, ಶಕೀಲ್ ಪಟೇಲ ಹಾಗೂ ಮತ್ತಿತರರು ಇದ್ದರು.