Advertisement

ಜ್ವರನಾಶಿನಿ….ಅಮೃತ ಬಳ್ಳಿಯಂತಾಗಬೇಕು!

09:58 AM Sep 22, 2020 | mahesh |

ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು ನನ್ನ ಆಪ್ತರೊಬ್ಬರು ಅಮೃತಬಳ್ಳಿಯ ಕಷಾಯ ಕುಡಿಯಲು ಸಲಹೆಯನ್ನಿತ್ತರು. ಅಷ್ಟು ಪರಿಣಾಮಕಾರಿಯಾದ ಇಂಗ್ಲಿಷ್‌ ಮಾತ್ರೆಗಳಿಂದಾಗದ್ದು, ಈ “ಬರಿಯ ಬಳ್ಳಿ’ಯಿಂದ ಸಾಧ್ಯವೇ ಎಂದು ನಕ್ಕು ಸುಮ್ಮನಾದೆ. ಅಷ್ಟಕ್ಕೂ ನಾವು ಬದುಕುತ್ತಿರುವುದು ಸ್ಪರ್ಧಾತ್ಮಕ ಪ್ರಪಂಚದಲ್ಲಿ. ಇಲ್ಲಿ ಒಂದು ನಿಮಿಷ ಹಳೆಯದ್ದು, ಹಳಸಿದ್ದು ಎನ್ನುವ ಭಾವ. ಹೀಗಿರಲು ತ್ವರಿತ ಉಪಶಮನ ನೀಡುವ ಇಂಗ್ಲಿಷ್‌ ಮದ್ದುಗಳ ಹೊರತು, ತಿಂಗಳು°ಗಟ್ಟಲೇ ಪಥ್ಯ, ಜೊತೆಗೆ ಕಹಿಯಾದ ಈ ಆಯುರ್ವೇದಿಕ್‌ ಔಷಧಿಗಳು ನಮಗೆ ಸೇರುವುದೆಂತು?

Advertisement

ಆದರೆ, ಕಾಕತಾಳೀಯ ಎಂಬಂತೆ ಇದೇ ಸಮಯದಲ್ಲಿ ಲೇಖಕಿ ನೇಮಿಚಂದ್ರರ ಬದುಕು ಬದಲಿಸಬಹುದು ಎಂಬ ಹೊತ್ತಗೆ ನನ್ನ ಕೈ ಸೇರಿತು. ಈ ಪುಸ್ತಕದಲ್ಲಿ ನೇಮಿಚಂದ್ರರವರು ಅಮೃತ ಬಳ್ಳಿಗೆ ಸಾವಿಲ್ಲ ಎಂಬ ತಲೆಬರಹದಡಿ ಅಮೃತಬಳ್ಳಿಯ ಮಹಿಮೆಯ ಹಾಡಿ ಹೊಗಳಿದ್ದರು. ಆಗಲೆ ನನಗೆ ಈ “ಬರಿಯ ಬಳ್ಳಿಯ’ ಕುರಿತು ಅರಿವಾದದ್ದು

ಅಮೃತಬಳ್ಳಿ ವಾತ, ಪಿತ್ತ ಮತ್ತು ಕಫ‌ಹರವಾಗಿದೆ. ಇದರ ಎಲೆ, ಕಾಂಡ, ಬೇರು ಹೀಗೆ ಎಲ್ಲದರಲ್ಲೂ ಔಷಧೀಯ ಗುಣವಿದೆ. ಜ್ವರಕ್ಕೆ ಅಮೃತಬಳ್ಳಿ ರಾಮಬಾಣ. “ಅಮೃತ’ (ಸಾವಿಲ್ಲದ)ಎಂಬ ಹೆಸರಿನ ಈ ಬಳ್ಳಿಯ ಕಷಾಯ “ಜ್ವರನಾಶಿನಿ’ ಎಂದು “ಚರಕ ಸಂಹಿತೆ’ಯಲ್ಲಿ ಉಲ್ಲೇಖವಿದೆ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಪಡೆದಿದೆ. ಈ ಗುಣ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲೂ ನೆರವಾಗುತ್ತದೆ ಎನ್ನುತ್ತಾರೆ. ಈ ಬಳ್ಳಿಗೆ ಸಾಕ್ಷಾತ್‌ ಧನ್ವಂತರಿಯ ವರವೇ ಏನೋ, ಅಷ್ಟು ಔಷಧೀಯ ಗುಣವನ್ನು ತನ್ನೊಡಲಲ್ಲಿ ಇರಿಸಿದೆ.

ಆದರೆ, ನನಗೆ ಅಮೃತ ಬಳ್ಳಿಯ ಪರಿಚಯವಿರಲಿಲ್ಲ. ಅಮ್ಮನನ್ನು ಕೇಳಲು ಅವರು, “ನೆರೆಮನೆಯವರ ಹಿತ್ತಲಲ್ಲಿ ಕಂಡಿ¨ªೆ’ ಅಂದರು. ಆದರೆ, ನೆರೆಮನೆಯವರು ಮನೆಮುಂದೆ ಪೊದೆಯಂತಾಗುತ್ತದೆ ಎಂದು ಕಡಿದಿದ್ದರು. ನಿರಾಸೆಯಿಂದ ಅವರು ಕಡಿದು ರಾಶಿ ಹಾಕಿದ್ದ ಕಡೆಗೆ ನೋಡಲು ಹೋದೆ. ಅಲ್ಲಿ ಅಚ್ಚರಿ ಕಾದಿತ್ತು. ಕಾರಣ, ಆ ಒಣ ಕಡ್ಡಿಯಲ್ಲೂ ಜೀವಂತಿಕೆ ಹಾಗೇ ಇತ್ತು.

ಅಲ್ಲೇ ಇತ್ತು ನೋಡಿ, “ಪ್ರಕೃತಿಯ ಪಾಠ’. ಕಡಿದೆಸೆದವರು ಬಳ್ಳಿಯ ಅಮೃತೀಯ ಗುಣವರಿಯರು. ಆದರೆ, ತನ್ನನ್ನು ಎಸೆದರು ಎಂದ ಮಾತ್ರಕ್ಕೆ ಅಮೃತಬಳ್ಳಿ ತನ್ನ ಔಷಧೀಯ ಗುಣಗಳನ್ನು ಕಳೆದುಕೊಳ್ಳಲಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯನ್ನು ಈ ಸಮಾಜ ಎಲ್ಲೂ ಸಲ್ಲದವನು ಎಂದು ನಿಂದಿಸಿ, ತಿರಸ್ಕರಿಸಿದ ಮಾತ್ರಕ್ಕೆ ಆ ವ್ಯಕ್ತಿ ಕೆಲಸಕ್ಕೆ ಬಾರದವನು ಎಂದರ್ಥವಲ್ಲ. ಆತನಲ್ಲಿ ಎಲ್ಲರನ್ನೂ ಮೀರಿಸುವ ಪ್ರತಿಭೆ ಸುಪ್ತವಾಗಿರಬಹುದು. ಜನ ತನ್ನನ್ನು ದೂರ ತಳ್ಳಿದರೆಂದು ಆತ ತನ್ನತನವನ್ನು ತ್ಯಜಿಸಬಾರದು, ಬದುಕುವ ಛಲ ಬಿಡಬಾರದು. ಈ ಮೂಲಕ ಕಡಿದವರ ಮುಂದೆಯೇ ಹುಲುಸಾಗಿ ಬೆಳೆಯುವ ಸಾಹಸ ಮಾಡುವ ಅಮೃತಬಳ್ಳಿಯಂತಾಗಬೇಕು.

Advertisement

ಹರ್ಷಿತಾ
ದ್ವಿತೀಯ ಬಿಎ (ಪತ್ರಿಕೋದ್ಯಮ), ವಿಶ್ವವಿದ್ಯಾನಿಲಯದ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next