ವಿದ್ಯಾನಗರ: ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವ ವೈದ್ಯರಲ್ಲಿರಬೇಕು. ಆಗ ಮಾತ್ರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪ್ರಯತ್ನ ನಡೆಸಲು ಸಾಧ್ಯವಾಗುವುದು. ಎಂದು ಉದುಮ ಶಾಸಕ ಕೆ.ಕುಂಞಿರಾಮನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಚೆಂಗಳ ಇ.ಕೆ.ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸುಧೀರ್ಘ ಚಿಕಿತ್ಸೆಯ ನಂತರವೂ ವಾಸಿಯಾಗದ ಕಾಯಿಲೆಯಿಂದ ನರಳುತ್ತಿದ್ದ ಆಯಿಷಾ ಅವರನ್ನು ಚಿಕಿತ್ಸೆಯ ಮೂಲಕ ಗುಣಪಡಿಸುವಲ್ಲಿ ಯಶಸ್ವಿಯಾದ ಡಾ.ಜಾಸಿರ್ ಅಲಿ ಅವರನ್ನು ಊರವರ ಹಾಗೂ ಆಯಿಷಾರ ಸಂಬಂಕರ ಪರವಾಗಿ ಗೌರವಿಸಿ ಮಾತನಾಡಿದರು.
ದೈವಬಲ ಮತ್ತು ಸೂಕ್ತ ಚಿಕಿತ್ಸೆಯಿಂದ ಅದೆಷ್ಟೋ ರೋಗಿಗಳನ್ನು ಮರಳಿ ಜೀವನಕ್ಕೆ ಕೈಹಿಡಿದೆತ್ತಿದವರು ವೈದ್ಯರು. ಇಂದು ಜಾಸಿರ್ ಅಲಿಯವರೂ ಅಂತಹ ಸವಾಲನ್ನು ಸ್ವೀಕರಿಸಿ ಮಾಡಿದ ಸೇವೆಯಿಂದ ಒಂದು ಕುಟುಂಬ ಸಂಭ್ರಮಿಸುವಂತಾಗಿದೆ ಎಂದು ಶಾಸಕರು ಹೇಳಿದರು.
ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ನೀಡಿ ಪ್ರಯೋಜನವಿಲ್ಲವೆಂದು ಕೈಬಿಟ್ಟ ಆಲಂಪಾಡಿಯ ಆಯಿಷಾ ಅವರಿಗೆ ಕಾಸರಗೋಡು ಆಸ್ಪತ್ರೆಯಲ್ಲಿ ಪುನರ್ಜನ್ಮ ನೀಡಿದ ಡಾ| ಜಾಸಿರ್ ಅವರ ಪ್ರಯತ್ನ ಶ್ಲಾಘನೀಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಅಧ್ಯಕ್ಷ ಎ. ಚಂದ್ರಶೇಖರ ಹೇಳಿದರು.
ಆಧುನಿಕ ಸೌಕರ್ಯಗಳಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿದ್ದ ನಮ್ಮ ತಾಯಿ ಆಯಿಷಾ ಅವರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಾಗ ಪರಿಚಿತರೊಬ್ಬರು ಇ.ಕೆ.ನಾಯನಾರ್ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿದರು. ಇಲ್ಲಿ ಒಂದೇ ವಾರದಲ್ಲಿ ಗುಣಮುಖರಾಗಿದ್ದು ಸಾಮಾನ್ಯರಂತೆ ನಡೆದಾಡಲು, ಮಾತನಾಡಲು ಸಾಧ್ಯವಾಗುತ್ತಿದೆ. ಚಿಕಿತ್ಸೆ ನೀಡಿದ ಡಾ.ಜಾಸಿರ್ ಮತ್ತು ಬಳಗಕ್ಕೆ ನಾವು ಋಣಿ ಎಂದು ಆಯಿಷಾ ಅವರ ಪುತ್ರ ಅಬ್ದುಲ್ಲ ಹೇಳಿದರುÖಕಾಸರಗೋಡು ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ದಾಮೋದರನ್, ಡಾ| ಶೋಭಾ ಮಯ್ಯ, ವಾಚನಾಲಯದ ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿಗೆ, ಕಾಸರಗೋಡು ಪ್ರಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಮೊದಲಾದವರು ಉಪಸ್ಥಿತರಿದ್ದರು. ಆಸ್ಪತ್ರೆಯ ನಿರ್ದೇಶಕ ನಾರಾಯಣ ಸ್ವಾಗತಿಸಿ ಮ್ಯಾನೇಜರ್ ಪ್ರದೀಪ್ ವಂದಿಸಿದರು.