Advertisement

24ಕ್ಕೆ ಕುಸಿದ ಮುಸ್ಲಿಂ ಶಾಸಕರ ಸಂಖ್ಯೆ

10:04 AM Mar 13, 2017 | |

ಬಿಜೆಪಿಯ “ಸಬ್‌ಕಾ ವಿಕಾಸ್‌’ನಲ್ಲಿ ಅಲ್ಪಸಂಖ್ಯಾತರು ಕಾಣೆ?

Advertisement

ಲಕ್ನೋ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಜಪಿಸುತ್ತಾ ಬಂದಿರುವ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ “ವಿಕಾಸ ಮಂತ್ರ’ದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲವೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಮುಖ್ಯವಾಗಿ ಉತ್ತರ ಪ್ರದೇಶ ಚುನಾವಣೆಯನ್ನು ಮುನ್ನೆಲೆಯಲ್ಲಿರಿಸಿಕೊಂಡು ಈ ಪ್ರಶ್ನೆ ಎತ್ತಲಾಗಿದೆ. ಅಂಕಿ-ಅಂಶಗಳನ್ನು ಗಮನಿಸಿದಾಗ ಆರೋಪದಲ್ಲಿ ತಕ್ಕಮಟ್ಟಿಗೆ ಸತ್ಯವಿದೆ ಎಂಬ ಭಾವನೆಯೂ ಮಾಡುತ್ತದೆ. ಉತ್ತರ ಪ್ರದೇಶದಲ್ಲಿ ಶೇ.19ರಷ್ಟು ಮುಸ್ಲಿಮರಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಅತಿದೊಡ್ಡ ವೋಟ್‌ ಬ್ಯಾಂಕ್‌ ಕೂಡ. ಆದರೆ 2012ರ ವಿಧಾನಸಭೆ ಚುನಾವಣೆಯಲ್ಲಿ 69 ಇದ್ದ ಮುಸ್ಲಿಂ ಶಾಸಕರ ಸಂಖ್ಯೆ, ಈ ಬಾರಿ 24ಕ್ಕೆ ಕುಸಿದಿದೆ. 403 ಕ್ಷೇತ್ರಗಳಿರುವ ರಾಜ್ಯದಲ್ಲಿ ಬಿಜೆಪಿಯು ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರಲಿಲ್ಲ. ಜತೆಗೆ, ಬೇರೆ ಪಕ್ಷಗಳಿಂದ ಬೆರಳೆಣಿಕೆಯಷ್ಟು ಅಲ್ಪಸಂಖ್ಯಾತ ಶಾಸಕರು ಆಯ್ಕೆ ಆಗಿರುವುದು ಬಿಜೆಪಿ ಈ ಸಮುದಾಯವನ್ನು ಕಡೆಗಣಿ ಸಿರುವುದಕ್ಕೆ ಸಾಕ್ಷಿ ಎಂದೇ ವಿಶ್ಲೇಷಿಸಲಾಗಿದೆ.

ಪೂರ್ವ,ಪಶ್ಚಿಮ ಉತ್ತರ ಪ್ರದೇಶ, ರೋಹಿಲ್‌ ಖಂಡ್‌, ತೆರಾಯ್‌ ಭಾಗಗಳಲ್ಲಿ ಮುಸ್ಲಿಮರು ಪ್ರಬಲ ಅಸ್ತಿತ್ವ ಹೊಂದಿದ್ದಾರೆ. ಇವರೊಂದಿಗೆ ಯಾದವರು ಹಾಗೂ ದಲಿತರರನ್ನು ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿಯ ವೋಟ್‌ ಬ್ಯಾಂಕ್‌ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ ಇದೇ ಅಂಶ ಅಭ್ಯರ್ಥಿಗಳ ಆಯ್ಕೆಯಲ್ಲೂ ನಿರ್ಣಾಯಕ ಪಾತ್ರವಹಿಸುತ್ತದೆ. ಈವರೆಗಿನ ಎಲ್ಲ ಚುನಾವಣೆಗಳಲ್ಲಿ ನಡೆದಿರುವುದು ಕೂಡ ಇದೇ. ಆದರೆ ಈ ಬಾರಿ ಮುಖ್ಯವಾಗಿ ಮುಸ್ಲಿಂ ಮತಗಳನ್ನು ಸೆಳೆಯಲೆಂದೇ ಕಾಂಗ್ರೆಸ್‌ ಜತೆ ಎಸ್‌ಪಿ ಕೈಜೋಡಿಸಿತ್ತು. ಆದರೆ ಎಸ್‌ಪಿ ಮುಖಂಡರ ಲೆಕ್ಕಾಚಾರ ತಲೆಕೆಳಗಾಗಿದ್ದು, ಮುಸ್ಲಿಂ ಮತಗಳು ಎಸ್‌ಪಿ ಹಾಗೂ ಬಿಎಸ್‌ಪಿ ನಡುವೆ ಹಂಚಿಹೋಗಿದ್ದರಿಂದ ಬಿಜೆಪಿಗೆ ಲಾಭವಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಬಿಜೆಪಿ ಜಯವನ್ನು ಸಂಭ್ರಮಿಸುತ್ತಿದ್ದಾರೆ!

ಬಿಎಸ್‌ಪಿಗೆ ಲಾಭವಾಗದ
ಮುಸ್ಲಿಂ ಬೆಂಬಲ!

ಚುನಾವಣೆಗೂ ಮುನ್ನ ಮುಸ್ಲಿಂ ಸಂಘಟನೆಗಳು ಮತ್ತು ಮೌಲ್ವಿಗಳು ವ್ಯಕ್ತಪಡಿಸಿದ ಬೆಂಬಲದಿಂದ ಬೀಗುತ್ತಿದ್ದ ಬಿಎಸ್‌ಪಿಗೆ ಚುನಾವಣೆ ಫ‌ಲಿತಾಂಶದಿಂದ ಭ್ರಮನಿರಸನವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ಸೀಟುಗಳನ್ನು ಗೆಲ್ಲುವ ಮೂಲಕ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಈವರೆಗಿನ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. 

Advertisement

ಈ ಚುನಾವಣೆಯಲ್ಲಿ ಸುಮಾರು 100 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಎಸ್‌ಪಿ, ಅಲ್ಪ ಸಂಖ್ಯಾತ ಸಮುದಾಯಗಳೇ ಪ್ರಬಲವಾಗಿರುವ 77 ಕ್ಷೇತ್ರಗಳ ಪೈಕಿ ಕೇವಲ ನಾಲ್ಕರಲ್ಲಿ ಗೆದ್ದಿದೆ. ದೆಹಲಿಯ ಜಮಾ ಮಸೀದಿ ಮೌಲ್ವಿ ಸೇರಿದಂತೆ ಸಾಕಷ್ಟು ಮೌಲ್ವಿಗಳು ಹಾಗೂ ಮುಸ್ಲಿಂ ಸಂಘಟನೆಗಳು ಬಿಎಸ್‌ಪಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸಮುದಾಯದವರನ್ನು ಕೇಳಿಕೊಂಡಿದ್ದರು. ಆದರೆ ಆ ಮನವಿಗೆ ಮುಸ್ಲಿಂ ಮತದಾರರು ಸ್ಪಂದಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next