ಪಾಟ್ನಾ: ಬಿಹಾರದ ಭಾಗಲ್ಪುರ್ ಜಿಲ್ಲೆಯ ಪಿರ್ ಪೈಂಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಹಿಂದೂಗಳ ನಂಬಿಕೆ ಮತ್ತು ಲಕ್ಷ್ಮಿ ದೇವರನ್ನು ಪೂಜಿಸುವುದನ್ನು ಪ್ರಶ್ನಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಇದನ್ನೂ ಓದಿ:ದೇಶವಿರೋಧಿ ಚಟುವಟಿಕೆ: ರಾಂಬನ್ ನಲ್ಲಿ ಐವರು ಭೂಗತ ಕೆಲಸಗಾರರ ಬಂಧನ
ಶಾಸಕ ಪಾಸ್ವಾನ್ ಹೇಳಿಕೆಯನ್ನು ಖಂಡಿಸಿ ಭಾಗಲ್ಪುರ್ ನ ಶೆರ್ಮಾರಿ ಬಜಾರ್ ನಲ್ಲಿ ಪ್ರತಿಭಟನೆ ನಡೆಸಿ, ಪ್ರತಿಕೃತಿಯನ್ನು ದಹಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
“ದೀಪಾವಳಿಯಂದು ಲಕ್ಷ್ಮೀ ದೇವಿಯನ್ನು ಪೂಜಿಸುವುದನ್ನು ಶಾಸಕ ಲಾಲನ್ ಪ್ರಶ್ನಿಸಿದ್ದು, ಒಂದು ವೇಳೆ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಮಾತ್ರ ಶ್ರೀಮಂತರಾಗುತ್ತಾರೆ ಎನ್ನುವುದಾದರೆ, ಮುಸ್ಲಿಮರಲ್ಲಿ ಲಕ್ಷಾಧೀಶ್ವರರು, ಕೋಟ್ಯಧೀಶರರು ಇರಲು ಸಾಧ್ಯವಾಗುತ್ತಿರಲಿಲ್ಲ. ಮುಸ್ಲಿಮರು ಲಕ್ಷ್ಮೀ ದೇವಿಯನ್ನು ಪೂಜಿಸುವುದಿಲ್ಲ, ಆದರೆ ಅವರು ಶ್ರೀಮಂತರಾಗಿಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ ಹಾಗಾದರೆ ಮುಸ್ಲಿಮರಲ್ಲಿ ವಿದ್ವಾಂಸರಿಲ್ಲವೇ? ಅವರಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ”.
ಆತ್ಮ ಮತ್ತು ಪರಮಾತ್ಮ ಎಂಬುದು ಕೇವಲ ಜನರ ನಂಬಿಕೆಯಾಗಿದೆ ಎಂದು ಶಾಸಕ ಲಾಲನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನೀವು ನಂಬಿದರೆ ದೇವರು, ಇಲ್ಲದಿದ್ದರೆ ಇದೊಂದು ಕೇವಲ ಕಲ್ಲಿನ ವಿಗ್ರಹ. ದೇವರು, ದೇವತೆಗಳನ್ನು ನಂಬುತ್ತೇವೋ, ಇಲ್ಲವೋ ಎಂಬುದು ನಮಗೆ ಬಿಟ್ಟಿದ್ದು. ನಾವು ವೈಜ್ಞಾನಿಕ ನೆಲೆಗಟ್ಟಿನ ತಳಹದಿಯಲ್ಲಿ ಯೋಚಿಸಬೇಕು. ಒಂದು ವೇಳೆ ನೀವು ನಂಬಿಕೆಗಳನ್ನು ಬದಿಗೆ ಸರಿಸಿದರೆ ಆಗ ನಿಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದು ಶಾಸಕ ಲಾಲನ್ ಹೇಳಿದ್ದಾರೆ.