ವಿಜಯಪುರ: ಚುನಾವಣೆ ವರ್ಷವಾಗಿರುವ ಕಾರಣ ಸಂಘ ಪರಿವಾರ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವ ಅಜೆಂಡಾ ಹೊಂದಿದ್ದು, ಮುಸ್ಲಿಮರು ಪ್ರಚೋದನೆಗೊಳ್ಳದೇ ಶಾಂತಿಯಿಂದ ಇರಬೇಕು ಎಂದು ಅಹಿಂದ ನಾಯಕ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಮನವಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಘಟನೆಯನ್ನು ಖಂಡಿಸಿದರು. ಸದರಿ ಘಟನೆಗೆ ಕಾರಣವಾದ ನೈಜ ಆರೋಪಿಗಳನ್ನು ಮಾತ್ರ ಬಂಧಿಸಬೇಕು. ಆದರೆ ಇದೇ ನೆಪದಲ್ಲಿ ಅಮಾಯಕರನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರ ಹಿಂದೆ ಮುಸ್ಲಿಂ ಸಮುದಾಯವನ್ನು ಗಲಭೇಕೋರ ಸಮುದಾಯ ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದ್ದು, ಎಚ್ಚರದಿಂದ ಇರಬೇಕು. ಹೀಗಾಗಿ ಮುಸ್ಲಿಂ ಸಮುದಾಯ ಇಂಥ ಹುನ್ನಾರಗಳಿಗೆ ಪ್ರಚೋದನೆಗೊಂಡು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಬಾರದು. ಒಂದೊಮ್ಮೆ ಅನ್ಯಾಯ ಕಂಡು ಬಂದಲ್ಲಿ ಈ ಬಗ್ಗೆ ಕಾನೂನು ಹೋರಾಟ ಮಾಡಬೇಕೆ ಹೊರತು, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡದಿರಿ ಎಂದು ಮನವಿ ಮಾಡಿದರು.
ಹುಬ್ಬಳ್ಳಿ ಘಟನೆಯಲ್ಲಿ ವಿದ್ಯಾರ್ಥಿ ಓರ್ವ ಮಾಡಿದ ಕೃತ್ಯವನ್ನೇ ದೊಡ್ಡದು ಮಾಡಲಾಗಿದೆ. ಮುಸ್ಲಿಂ ಸಮುದಾಯವನ್ನು ಪ್ರಚೋದಿಸುವ ಉದ್ಧೇಶದಿಂದಲೇ ಈ ಕೃತ್ಯ ಮಾಡಲಾಗಿದೆ. ಇದರ ಹಿಂದೆ ಸಂಘ ಪರಿವಾರದ ಹಿತಾಸಕ್ತಿಯಂತೆ ಕೋಮು ಗಲಭೆ ಹೆಸರಿನಲ್ಲಿ ಮುಸ್ಲಿಮರನ್ನು ಬಂಧಿಸಿ, ಜೈಲಿನಲ್ಲಿಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುರಾನ್ ಬಗ್ಗೆ ತಪ್ಪು ಮಾಹಿತಿ ನೀಡಿ, ಸಮಾಜದಲ್ಲಿ ಒಡಕುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಫೀರರನ್ನು ಕೊಲ್ಲುವಂತೆ ಖುರಾನ್ ಹೇಳಿದೆ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದು, ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವಂತೆ ಪ್ರಚೋದನೆ ನೀಡುತ್ತಿದ್ದಾರೆ. ಇನ್ನು ಚೈತ್ರಾ ಕುಂದಾಪುರ ಎಂಬ ಯುವತಿ ನಿತ್ಯವೂ ಐದು ಬಾರಿ ಪ್ರಾರ್ಥನೆಗೆ ಬನ್ನಿ ಎಂದು ಕರೆಯುವ ಆಜಾನ್ ಕರೆಯನ್ನು ತಿರುಚಿ ಹೇಳುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಲು ಕುರಾನ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕುರಾನ್ ಮಾತ್ರವಲ್ಲ ಬಹುತೇಕ ಎಲ್ಲ ಧರ್ಮ ಗ್ರಂಥಗಲ್ಲೂ ಶಾಂತಿಯನ್ನೇ ಪ್ರತಿಪಾದಿಸಿವೆ. ಅಲ್ಲಾ ಒಬ್ಬನೇ ಜಗತ್ತಿನ ಸೃಷ್ಟಿಕರ್ತ ಎಂದು ಏಕ ದೇವೋಪಾಸನೆ ಪ್ರತಿಪಾದಿಸಿದೆ. ಬೈಬಲ್, ಬಸವಾದಿ ಶರಣರು ಸೇರಿದಂತೆ ಎಲ್ಲ ಧರ್ಮಗಳು, ಧರ್ಮ ಗುರುಗಳು, ಪ್ರತಿಪಾದಿಸಿದ್ದು ಏಕ ದೇವೋಪಾಸನೆಯನ್ನೇ ಎಂದು ವಿಶ್ಲೇಷಿಸಿದರು.
ಇದೇ ವೇಳೇ ಅಧರ್ಮದ ವಿರುದ್ಧದ ಹೋರಾಟದಲ್ಲಿ ವೈರಿಗಳ ವಿರುದ್ಧ ಹೋರಾಟ, ಯುದ್ಧ ಎದುರಾದರೂ ಸರಿ ಹಿಂಜರಿಯದಂತೆ ಹೇಳಿವೆ. ಭಗವದ್ಗೀತೆಯಲ್ಲಿ ಧರ್ಮ ಸಂಸ್ಥಾಪನೆಗಾಗಿ ವೈರಿಯನ್ನು ಕೊಲ್ಲುವುದನ್ನು ಒತ್ತಿ ಹೇಳಿದೆ. ಕೃಷ್ಣ ಕೂಡಾ ಅರ್ಜುನನಿಗೆ ಬಂಧುತ್ವ ಮೀರಿ ವೈರಿಯನ್ನು ಕೊಲ್ಲುವಂತೆ ಮಾರ್ಗದರ್ಶನ ಮಾಡುತ್ತಾನೆ. ಕುರಾನ್‍ನಲ್ಲೂ ಅಧರ್ಮ ಉಂಟು ಮಾಡುವ ಕಾಫೀರರನ್ನು ಕೊಲ್ಲುವಂತೆ ಹೇಳುತ್ತದೆಯೇ ವಿನಹ ಸಾಮಾನ್ಯ ಜನರನ್ನಾಗಲಿ, ಅಮಾಯಕರನ್ನಾಗಲಿ ಕೊಲ್ಲುವಂತೆ ಹೇಳಿಲ್ಲ ಎಂದರು.