ಕಬಕ: ಮರಣಕ್ಕೆ ಜಾತಿ- ಧರ್ಮದ ಹಂಗಿಲ್ಲ ಎನ್ನುವುದನ್ನು ಪುತ್ತೂರಿನ ಕಬಕ ನಿವಾಸಿಗಳು ರುಜು ಮಾಡಿದ್ದಾರೆ. ಹಿಂದೂ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಸ್ಥಳೀಯ ಮುಸ್ಲಿಮರು ಹೆಗಲು ನೀಡಿರುವುದು ಧರ್ಮ ಸಾಮರಸ್ಯಕ್ಕೆ ನಾಂದಿ ಹಾಡಿದೆ.
ಕಬಕ ವಿದ್ಯಾಪುರದ ಕ್ವಾರ್ಟರ್ಸ್ ನಿವಾಸಿ ದಿ| ನಾರಾಯಣ್ ಸಿಂಗ್ ಅವರ ಪುತ್ರಿ, ಅವಿವಾಹಿತೆ ಭವಾನಿ ಸಿಂಗ್ (52) ಮೃತಪಟ್ಟವರು. ಚಿಕ್ಕಪ್ಪನ ಮಗನಾದ ಕೃಷ್ಣ ಸಿಂಗ್ ಅವರ ಜತೆ ವಾಸವಾಗಿದ್ದ ಭವಾನಿ ಸಿಂಗ್, ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ತತ್‌ಕ್ಷಣ ಸಂಬಂಧಿಕರಿಗೆ ಮಾಹಿತಿ ಕಳುಹಿಸಲಾಯಿತು. ತಡ ಹೊತ್ತಾದರೂ ಸಂಬಂಧಿಕರ ಸುಳಿವಿರಲಿಲ್ಲ. ಅನ್ಯದಾರಿ ಕಾಣದೇ ಕುಳಿತಿದ್ದ ಕೃಷ್ಣ ಸಿಂಗ್‌ಗೆ ಸ್ಥಳೀಯ ಮುಸ್ಲಿಂ ಯುವಕರು ಸಹಾಯ ಹಸ್ತ ಚಾಚಿದರು.
ಭವಾನಿ ಸಿಂಗ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮನೆಯಲ್ಲಿ ಸೇರಿದ್ದರು. ಹಲವಾರು ವರ್ಷಗಳಿಂದ ವಿದ್ಯಾಪುರದಲ್ಲಿ ನೆಲೆಸಿದ್ದ ಭವಾನಿ ಸಿಂಗ್ ಸ್ಥಳೀಯರ ಜತೆ ಉತ್ತಮ ಒಡನಾಟ ಹೊಂದಿದ್ದರು. ಇದರ ಪರಿಣಾಮ ಎಂಬಂತೆ ಅವರ ಅಂತ್ಯಸಂಸ್ಕಾರಕ್ಕೂ ಸ್ಥಳೀಯರೇ ಹೆಗಲು ನೀಡುವಂತಾಯಿತು.
ಸಂಬಂಧಿಕರು ಬಾರದೇ ಅಂತ್ಯಸಂಸ್ಕಾರದ ವಿಧಿ ವಿಧಾನವನ್ನು ನೆರವೇರಿಸಲು ಕಷ್ಟವಾಯಿತು. ಆದರೂ ಕೃಷ್ಣ ಸಿಂಗ್ ಸಹಾಯದಿಂದ ಮುಸ್ಲಿಂ ಬಂಧುಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಮೃತದೇಹವನ್ನು ಸ್ನಾನ ಮಾಡಿಸುವ ವೇಳೆ ಸ್ಥಳೀಯ ಹಿಂದೂ ಮಹಿಳೆಯೊಬ್ಬರ ಸಹಾಯ ಪಡೆದುಕೊಳ್ಳಲಾಯಿತು. ಭವಾನಿ ಸಿಂಗ್- ಕೃಷ್ಣ ಸಿಂಗ್ ಅವರದು ಬಡ ಕುಟುಂಬ. ದುಡಿಮೆಗೆ ಕೂಲಿ ಕೆಲಸವನ್ನೇ ನಂಬಿದ್ದರು. ಅಂತ್ಯಸಂಸ್ಕಾರದ ಖರ್ಚಿಗೆ ದುಡ್ಡಿಲ್ಲದ ಪರಿಸ್ಥಿತಿ ಇತ್ತು. ಇದನ್ನು ಗಮನಿಸಿದ ಸ್ಥಳೀಯರು ಕೈಯಲಿದ್ದ ಹಣ ನೀಡಿ ಉದಾರರಾದರು.
ಬೀಟ್ ಪೊಲೀಸ್ ಮಂಜುನಾಥ್ ಕೂಡ ಧನಸಹಾಯ ನೀಡಿದರು. ಗ್ರಾ. ಪಂ. ಸದಸ್ಯೆ ಭಾನುಮತಿ ಭೇಟಿ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಮಡಿವಾಳ ಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಬೆಳಗ್ಗೆಯಿಂದ ಅಂತ್ಯ ಸಂಸ್ಕಾರದ ಕೊನೆಯವರೆಗೂ ಸ್ಥಳೀಯರೇ ಸಹಕಾರ ನೀಡಿದರು. ಸ್ಥಳೀಯರಾದ ಹಂಝ ವಿದ್ಯಾಪುರ, ಫಾರೂಕ್ ಕಬಕ, ನಝೀರ್ ವಿದ್ಯಾಪುರ, ಶೌಕತ್ ವಿದ್ಯಾಪುರ, ಹಮೀದ್ ಮೌಲ ಹಾಗೂ ಇತರ ಯುವಕರು, ಅವರ ಮನೆಯವರು ಸಹಕಾರ ನೀಡಿದರು.
ಕೃಷ್ಣ ಸಿಂಗ್