ಬೆಂಗಳೂರು: ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲಿ ಸಮೀಪದಲ್ಲಿಯೇ ಇದ್ದ ಆಂಜನೇಯ ಸ್ವಾಮಿ ದೇವಾಲಯವನ್ನು ಗಲಭೆಕೋರರಿಂದ ರಕ್ಷಿಸಲು ಮುಸ್ಲಿಂ ಯುವಕರು ಮಾನವ ಸರಪಳಿ ನಿರ್ಮಿಸಿರುವ ಘಟನೆ ವರದಿಯಾಗಿದೆ.
ಶಾಸಕರ ಮನೆ, ನೂರಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಗಲಭೆ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದರು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಯುವಕರ ಗುಂಪು ಮಾನವ ಸರಪಳಿ ನಿರ್ಮಿಸಿ ಹನುಮಂತ ದೇವಾಲಯವನ್ನು ರಕ್ಷಿಸಿರುವ ವಿಡಿಯೋ ಕ್ಲಿಪ್ಪಿಂಗ್ ಅನ್ನು ಎಎನ್ ಐ ಪ್ರಕಟಿಸಿದೆ.
ಒಂದು ಸಮುದಾಯದ ವಿರುದ್ಧ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ಎನ್ನಲಾದ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಅನ್ನು ಹಾಕಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡುವ ಮೂಲಕ ಮಂಗಳವಾರ ರಾತ್ರಿ ನೂರಾರು ಸಂಖ್ಯೆಯಲ್ಲಿ ಕೆಜಿ ಹಳ್ಳಿ, ಡಿಜೆ ಹಳ್ಳಿಗೆ ನುಗ್ಗಿ ಬಂದ ಸಮುದಾಯದ ಗುಂಪು ಗಲಭೆ ನಡೆಸಿತ್ತು.
ಶಾಸಕರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿತ್ತು. ಎರಡು ಪೊಲೀಸ್ ಠಾಣೆ ಮೇಲೂ ಕಲ್ಲು ತೂರಾಟ ನಡೆಸಿ, ನೂರಾರು ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆ ನಡೆಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ತಂಡ ಬಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದರು.
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಬೆಂಗಳೂರು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.