Advertisement

ಸವಾಲು ಎದುರಿಸಿ ಬರೆಯಬೇಕಿದೆ ಮುಸ್ಲಿಂ ಲೇಖಕರು

05:06 PM Sep 23, 2018 | |

ದಾವಣಗೆರೆ: ಭಾರತೀಯ ಮುಸ್ಲಿಂ ಲೇಖಕರು ಎರಡು ರೀತಿಯ ಕೋಮುವಾದ ಎದುರಿಸಿ ಲೇಖನ ಬರೆಯಬೇಕಾದ ವಿಚಿತ್ರ ಸನ್ನಿವೇಶದಲ್ಲಿದ್ದಾರೆ ಎಂದು ಚಿಂತಕ ರಂಜಾನ್‌ ದರ್ಗಾ ಹೇಳಿದ್ದಾರೆ. ಶನಿವಾರ, ನಗರದ ಕುವೆಂಪು ಕನ್ನಡ ಭವನದಲ್ಲಿ ಮುಸ್ಲಿಂ ಚಿಂತಕರ ಚಾವಡಿ ಏರ್ಪಡಿಸಿದ್ದ ಕನ್ನಡದ ಪ್ರಮುಖ ಮೂವರು ಮುಸ್ಲಿಂ ಲೇಖಕರ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಪ್ರಸ್ತುತ ಮುಸ್ಲಿಂ ಲೇಖಕರು ಆಂತರಿಕ ಹಾಗೂ ಬಾಹ್ಯ ಕೋಮುವಾದ ಎದುರಿಸಿ, ಬರೆಯಬೇಕಾದ ಸವಾಲಿನ ಪರಿಸ್ಥಿತಿಯಲ್ಲಿದ್ದಾರೆ. ಈ ಸವಾಲು ಸ್ವೀಕರಿಸಿ, ಅನೇಕ ಮುಸ್ಲಿಂ ಲೇಖಕರು ಬರೆಯುತ್ತಿದ್ದಾರೆ ಎಂದರು. ಕವಿ ಎ.ಎಸ್‌. ಮಕಾನ್‌ದಾರ್‌ ಅವರ ಅಕ್ಕಡಿ ಸಾಲು ಕವನ ಸಂಕಲನ ಹೆಸರೇ ಒಂದು ರೂಪಕ. ಕೃಷಿಯಲ್ಲಿನ ಅಕ್ಕಡಿ ಸಾಲಿನಂತೆ ಈ ಕವನ ಸಂಕಲನದಲ್ಲಿನ ಕವಿತೆಗಳು ಸಮಾಜದಲ್ಲಿನ ಸೌಹಾರ್ದತೆ ಪ್ರತಿಪಾದಿಸುತ್ತವೆ. ಗುಲ್ಬರ್ಗಾದ ಲೇಖಕ ಬೋಡೆ ರಿಯಾಜ್‌ ಅಹಮದ್‌ ತಿಮ್ಮಾಪುರಿ ಬರೆದ ಪ್ರೇಮ ಸೂಫಿ, ಬಂದೇನವಾಜ್‌ ಕೃತಿ ಸೂಫಿ ಸಂತರ ಕುರಿತಾದ್ದು. ಸೂಫಿ ಸಂತರು ಎಂದೂ ರಾಜಾಶ್ರಯದಲ್ಲಿ ಇದ್ದವರಲ್ಲ. ಅವರು ಜನಾಶ್ರಯದಲ್ಲಿ ಬೆಳೆದವರು. ಬಂದೇನವಾಜ್‌ ರನ್ನ ಚೈತನ್ಯ ಪ್ರಭು ಎಂದೇ ಕರೆಯುತ್ತಿದ್ದರು. ರಾಮಾಯಣ, ಮಹಾಭಾರತ ಹೇಳುತ್ತಿದ್ದ ಅವರು ಇಸ್ಲಾಂ ಪ್ರಚಾರ ಮಾಡಿದರು ಎಂದು ಹೇಳಿದರು.

Advertisement

ಉಮ್ಮಾ ಕೃತಿ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌, ಬೊಳುವಾರ ಮಹಮದ್‌ ಕುಂಞ ಮೊದಲೇ ನಿರಪೇಕ್ಷಣಾ ಜಾಮೀನು ಪಡೆದುಕೊಂಡೇ ಕೃತಿ ಬರೆದಿದ್ದಾರೆ.  ಪ್ರವಾದಿಯ ಕುರಿತು ಮಾತನಾಡುವ ಕೃತಿಯಲ್ಲಿ ಕಲ್ಲು ಹೃದಯವೂ ಕರಗುವ ಪಾತ್ರಗಳ ತಿಕ್ಕಾಟ ಕಾಣಿಸುತ್ತದೆ ಎಂದರು. ಅಕ್ಕಡಿ ಸಾಲು ಕೃತಿ ವಿಶ್ಲೇಷಿಸಿದ ಡಾ| ಎ.ಬಿ.ರಾಮಚಂದ್ರಪ್ಪ, ಪ್ರಸ್ತುತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮನಸ್ಸುಗಳ ಬೆಸೆಯುವಂತ ಸಾಹಿತ್ಯ ಬರೆಯುವ ಲೇಖಕರ ಅಗತ್ಯವಿದೆ. ಆದರೆ, ಈಗ ಕೋಮುವಾದ ಸಂಸ್ಕೃತಿಯ ಒಂದು ಭಾಗವಾಗಿರುವುದು ದುರಂತ. ಇಂದು ಜಾತಿ ಹಾಗೂ ಮತೀಯವಾದ ಸಂಭ್ರಮಿಸುತ್ತಿದೆ. ಅಕ್ಕಡಿ ಸಾಲು ಕವನ ಸಂಕಲನದಲ್ಲಿ ಲೇಖಕರಿಗೆ ನಿಜವಾದ ಸಾಮಾಜಿಕ ಕಾಳಜಿ ಇದೆ. ಕೃತಿ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರೂಪಿತವಾಗಿದೆ ಎಂದರು.

ಅಕ್ಷರವಂತರು ಇಂದು ಸನಾತನ ಮನಸ್ಸು ಹೊಂದಿರುವುದಲ್ಲದೆ, ಮೌಡ್ಯದ ಪರ ಒಲವು ತೋರುತ್ತಿರುವುದು ವಿಷಾದನೀಯ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ನಾಲಿಗೆಯನ್ನೇ ಅಸ್ತ್ರ ಮಾಡಿಕೊಂಡಿರುವಂತಹ ಇಂದಿನ ಸಂದರ್ಭದಲ್ಲಿ ಬುದ್ಧಿವಂತರು ಒಂದಿಷ್ಟು ಆಲೋಚಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹನೀಸ್‌ ಪಾಷ ಪ್ರೇಮ ಸೂಫಿ ಬಂದೇನವಾಜ್‌ ಕೃತಿಯನ್ನು, ಜಿಲ್ಲಾ ಪಂಚಾಯತಿ ಸದಸ್ಯ ತೇಜಸ್ವಿ ವಿ. ಪಟೇಲ್‌ ಅಕ್ಕಡಿ ಸಾಲು ಕವನ ಸಂಕಲನ ಹಾಗೂ ಷಾಹೀನ್‌ ಕೌಸರ್‌ ಉಮ್ಮಾ ಕಾದಂಬರಿಯನ್ನು ಬಿಡುಗಡೆ ಮಾಡಿದರು.  ಹರಿಹರ ಜೆ. ಕಲೀಬಾಷ ಮುಸ್ಲಿಂ ಚಿಂತಕರ ಚಾವಡಿ ಸ್ಥಾಪನೆ, ಅದರ ಚಟುವಟಿಕೆ ಹಾಗೂ ಉದ್ದೇಶ ಕುರಿತು ತಮ್ಮ ಪ್ರಾಸ್ತವಿಕ ನುಡಿಗಳಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next