ಬೆಂಗಳೂರು: ಕೇಂದ್ರದ ಇತರೆ ಹಿಂದುಳಿದ ವರ್ಗ(ಒಬಿಸಿ) ಪಟ್ಟಿಯಲ್ಲಿ ಕರ್ನಾಟಕದಲ್ಲಿರುವ ಮುಸ್ಲಿಂ ಸಮುದಾಯದ ಎಲ್ಲ ಉಪಜಾತಿಗಳನ್ನು ಸೇರ್ಪಡೆ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಸಮಾಜ ಸೇವಕ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿದ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ್ ಹಾಗೂ ನ್ಯಾ.ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವು ಕೇಳಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಪರ ವಕೀಲರ ಸಲ್ಲಿಸಿರುವ ಆಕ್ಷೇಪಣೆ ಗಮನಿಸಿ “ಇದೊಂದು ಸಾಂವಿಧಾನಿಕ ತಿದ್ದುಪಡಿ ವಿಚಾರವಾಗಿದ್ದು, ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಾಡುವಂತೆ ನಿರ್ದೇಶನ ನೀಡುವ ಅಧಿಕಾರ ನ್ಯಾಯಾಲಯಕ್ಕೆ’ ಇಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಅರ್ಜಿದಾರರು ಕೋರಿರುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಯಾವುದೇ ಮನವಿಯನ್ನು ಸಚಿವಾಲಯಕ್ಕೆ ಸಲ್ಲಿಸಿಲ್ಲ. ಅಲ್ಲದೆ, ಕೇಂದ್ರ ಸರ್ಕಾರ 2008ರಲ್ಲಿ ಹೊಸದಾಗಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ರಚಿಸಿದೆ.
ಯಾವುದೇ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕಾದರೆ ಆಯೋಗವೇ ಶಿಫಾರಸು ಮಾಡಬೇಕಾಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆಕ್ಷೇಪಣೆಯನ್ನು ಕೇಂದ್ರ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಇದೇ ವೇಳೆ ಸಲ್ಲಿಸಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ “ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಪ್ರವರ್ಗ-2 ಬಿ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯದ ಎಲ್ಲ 17 ಉಪ ಜಾತಿಗಳನ್ನು ಸೇರಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಆ ಉಪಜಾತಿಗಳ ಹೆಸರುಗಳನ್ನು ಸೇರಿಸಿಲ್ಲ. ಇದರಿಂದ ಆ ಉಪಜಾತಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕವಾಗಿ ತೊಂದರೆ ಆಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.